ಉಡುಪಿ: ಜಿಲ್ಲೆಯಲ್ಲಿ ಭಾನುವಾರ 13 ಮಂದಿಯಲ್ಲಿ ಕೋವಿಡ್–19 ಸೋಂಕು ದೃಢಪಟ್ಟಿದೆ. ಸೋಂಕಿತರಲ್ಲಿ ಐವರು ಮಹಿಳೆಯರು, ಏಳು ಪುರುಷರು ಹಾಗೂ ಒಬ್ಬ ಬಾಲಕ ಇದ್ದಾನೆ.
ಮುಂಬೈ ಸಂಪರ್ಕ:
ಸೋಂಕಿತರಲ್ಲಿ 12 ಮಂದಿಗೆ ಮುಂಬೈನ ಸಂಪರ್ಕವಿದ್ದು, ಒಬ್ಬರ ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ. ಎಲ್ಲರಿಗೂಕೋವಿಡ್ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಾಥಮಿಕ ಸಂಪರ್ಕಿತರನ್ನು ಕ್ವಾರಂಟೈನ್ನಲ್ಲಿಡಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಕೊಂಚ ನೆಮ್ಮದಿ:
ಕಳೆದ ಒಂದು ವಾರದಿಂದಲೂ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಏರುಮುಖವಾಗಿ ಸಾಗಿತ್ತು. ರಾಜ್ಯದಲ್ಲೇ ಅತಿ ಹೆಚ್ಚು ಸೋಂಕಿತ ಪ್ರಕರಣಗಳು ಉಡುಪಿಯಲ್ಲಿ ದಾಖಲಾಗುವ ಮೂಲಕ ಜನರಲ್ಲಿ ಭೀತಿ ಸೃಷ್ಟಿಯಾಗಿತ್ತು. ಕೇವಲ 6 ದಿನಗಳಲ್ಲಿ ಜಿಲ್ಲೆಯಲ್ಲಿ 702 ಸೋಂಕಿತರು ಪತ್ತೆಯಾಗಿದ್ದರು.
ಭಾನುವಾರ ಕೇವಲ 13 ಪ್ರಕರಣಗಳು ಮಾತ್ರ ಕಾಣಿಸಿಕೊಂಡಿದ್ದು, ಕೊಂಚ ನಿರಾಳ ತಂದಿದೆ. ಜತೆಗೆ, ಬಾಕಿ ಇದ್ದ ಸಾವಿರಾರು ಮಂದಿಯ ಫಲಿತಾಂಶ ಬಹುತೇಕ ಬಂದಿದ್ದು, ಕೇವಲ 264 ಮಾದರಿಗಳ ಫಲಿತಾಂಶ ಬರುವುದು ಮಾತ್ರ ಬಾಕಿ ಇದೆ. ಈ ಅಂಕಿ ಅಂಶಗಳನ್ನು ನೋಡಿದರೆ, ಸೋಂಕಿತರ ಸಂಖ್ಯೆಯೂ ಇಳಿಮುಖವಾಗುತ್ತಾ ಸಾಗುವ ಲಕ್ಷಣಗಳು ಕಾಣುತ್ತಿವೆ.
902ಕ್ಕೇರಿಕೆ:
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 902ಕ್ಕೇರಿಕೆಯಾಗಿದ್ದು, 798 ಸಕ್ರಿಯ ಪ್ರಕರಣಗಳಿವೆ. 103 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಒಬ್ಬರು ಸೋಂಕಿಗೆ ಬಲಿಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.