ADVERTISEMENT

ರಾ.ಹೆ.66: ಅಪಘಾತಗಳಿಗೆ ಕೊನೆ ಇಲ್ಲವೇ?

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 7:05 IST
Last Updated 8 ಡಿಸೆಂಬರ್ 2025, 7:05 IST
ಹೆಚ್ಚು ಅಪಘಾತಗಳು ಸಂಭವಿಸುತ್ತಿರುವ ಉಡುಪಿ ಸಮೀಪದ ಬಲೈಪಾದೆಯ ರಾಷ್ಟ್ರೀಯ ಹೆದ್ದಾರಿ
ಪ್ರಜಾವಾಣಿ ಚಿತ್ರ: ಉಮೇಶ್‌ ಮಾರ್ಪಳ್ಳಿ
ಹೆಚ್ಚು ಅಪಘಾತಗಳು ಸಂಭವಿಸುತ್ತಿರುವ ಉಡುಪಿ ಸಮೀಪದ ಬಲೈಪಾದೆಯ ರಾಷ್ಟ್ರೀಯ ಹೆದ್ದಾರಿ ಪ್ರಜಾವಾಣಿ ಚಿತ್ರ: ಉಮೇಶ್‌ ಮಾರ್ಪಳ್ಳಿ   

ಉಡುಪಿ: ಜಿಲ್ಲೆಯ ಕರಾವಳಿ ಪ್ರದೇಶವನ್ನು ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಿರುವುದು ವಾಹನ ಸವಾರರಲ್ಲಿ ಭಯಾತಂಕ ಉಂಟು ಮಾಡಿದೆ.

ಮುಗಿಯದ ರಸ್ತೆ ಮೇಲ್ಸೇತುವೆ ಕೆಲಸ, ಅವೈಜ್ಞಾನಿಕ ಕಾಮಗಾರಿಯಿಂದಾಗಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿವೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಕೆಲ ದಿನಗಳ ಹಿಂದೆ ಕಾಪುವಿನ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಅಲಂಕಾರದ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಟೆಂಪೊವೊಂದು ಡಿವೈಡರ್‌ ಮೇಲೆ ಹತ್ತಿ ಮಗುಚಿ ಬಿದ್ದ ಪರಿಣಾಮವಾಗಿ ಹೊರ ರಾಜ್ಯದ ಐವರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದರು.

ADVERTISEMENT

ಕಾಪು, ಸಂತೆಕಟ್ಟೆ, ಬಲಾಯಿಪಾದೆ, ಬ್ರಹ್ಮಾವರ, ಕುಂದಾಪುರ ಮೊದಲಾದೆಡೆ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರಂತರ ವಾಹನ ಅಪಘಾತಗಳು ಸಂಭವಿಸುತ್ತಲೇ ಇವೆ. ದ್ವಿಚಕ್ರ ವಾಹನ ಸವಾರರೇ ಅಧಿಕ ಸಂಖ್ಯೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ವಾಹನ ಡಿಕ್ಕಿ ಹೊಡೆದು ಪಾದಚಾರಿಗಳು ಮೃತಪಟ್ಟಿರುವ ಪ್ರಕರಣಗಳೂ ಸಂಭವಿಸಿವೆ.

ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಿದ್ದರೂ ಸಂಬಂಧಪಟ್ಟವರು ಕ್ಯಾರೇ ಅನ್ನುತ್ತಿಲ್ಲ ಎನ್ನುತ್ತಾರೆ ಜನರು. ಸಂತೆಕಟ್ಟೆಯಲ್ಲಿ ಅಂಡರ್‌ಪಾಸ್‌ ಕಾಮಗಾರಿ ಹಲವು ವರ್ಷಗಳಿಂದ ನಡೆಯುತ್ತಿದ್ದರೂ ಇನ್ನೂ ದಡಮುಟ್ಟಿಲ್ಲ. ಜೊತೆಗೆ ಅಂಬಲಪಾಡಿಯಲ್ಲಿಯೂ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ಪ್ರದೇಶ ಅವ್ಯವಸ್ಥೆಗಳ ತಾಣವಾಗಿ ಪರಿಣಮಿಸಿದೆ ಎಂದು ಸ್ಥಳೀಯರು ದೂರಿದ್ದಾರೆ. ಕೆಲ ತಿಂಗಳುಗಳ ಹಿಂದೆ ಅಂಬಲಪಾಡಿಯಲ್ಲಿ ಬೈಕ್‌ ಅಪಘಾತ ಸಂಭವಿಸಿ ಸವಾರನ, ತಲೆಯ ಮೇಲೆ ಟ್ರಕ್‌ ಹರಿದಿತ್ತು.

ಅಂಬಲಪಾಡಿಯಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಸರ್ವಿಸ್‌ ರಸ್ತೆಯಲ್ಲೇ ಸಾಗುತ್ತವೆ. ಆದರೆ ಈ ಸರ್ವಿಸ್‌ ರಸ್ತೆಗಳು ಕಿರಿದಾಗಿರುವುದರಿಂದ ವಾಹನ ಸವಾರರಿಗೆ ಅಪಾಯ ಎದುರಾಗುತ್ತಿದೆ. ಇಲ್ಲಿ ಸರ್ವಿಸ್‌ ರಸ್ತೆ ವಿಸ್ತರಣೆ ಮಾಡಬೇಕೆಂಬ ಜನರ ಬೇಡಿಕೆ ಇನ್ನೂ ಈಡೇರಿಲ್ಲ.

ರಾಷ್ಟ್ರೀಯ ಹೆದ್ದಾರಿಯಲ್ಲಿ ವಿವಿಧೆಡೆ ಏಕಕಾಲಕ್ಕೆ ಕಾಮಗಾರಿ ನಡೆಸುತ್ತಿರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸಂಬಂಧಪಟ್ಟವರು ಇನ್ನಾದರೂ ಎಚ್ಚೆತ್ತು, ಅಪಘಾತಗಳ ನಿಯಂತ್ರಣಕ್ಕೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪೂರಕ ಮಾಹಿತಿ: ಶೇಷಗಿರಿ ಭಟ್‌, ಹಮೀದ್‌ ಪಡುಬಿದ್ರಿ

ಕೋಟ‌ ವಿವೇಕ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿ ದಾಟಲು ಹರ‌ಸಾಹಸ ಪಡುತ್ತಿರುವುದು
ಕಾಪುವಿನ ಕೋತಲ್‌ಕಟ್ಟೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈಚೆಗೆ ಗೂಡ್ಸ್ ಟೆಂಪೊ ಅಪಘಾತ ಸಂಭವಿಸಿದ ಸ್ಥಳ
ಹರಿರಾಮ್‌ ಶಂಕರ್‌
ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಬೇಕು. ಕೆಲವೆಡೆ ಅವೈಜ್ಞಾನಿಕ ಕಾಮಗಾರಿಯೂ ಅಪಘಾತಗಳಿಗೆ ಕಾರಣವಾಗುತ್ತಿದೆ.
ನಿತ್ಯಾನಂದ ಒಳಕಾಡು ಸಾಮಾಜಿಕ ಕಾರ್ಯಕರ್ತ

‘ಅತಿ ವೇಗಕ್ಕೆ ಬೀಳಲಿದೆ ಕಡಿವಾಣ’ '2022ರಲ್ಲಿ ಜಿಲ್ಲೆಯಲ್ಲಿ 22 ಬ್ಲ್ಯಾಕ್‌ ಸ್ಪಾಟ್‌ಗಳನ್ನು ಗುರುತಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಕಳುಹಿಸಲಾಗಿತ್ತು. ಮತ್ತೆ ಹೊಸದಾಗಿ 18 ಬ್ಲ್ಯಾಕ್‌ ಸ್ಪಾಟ್‌ಗಳನ್ನು ಗುರುತಿಸಿದ್ದೇವೆ. ವಿವಿಧೆಡೆ ಎಐ ಕ್ಯಾಮೆರಾಗಳನ್ನು ಶೀಘ್ರ ಅಳವಡಿಸಲಾಗುವುದು. ಆರು ಕಡೆಗಳಲ್ಲಿ ಸ್ಪೀಡ್‌ ಡಿಟೆಕ್ಟರ್‌ ಗನ್‌ಗಳನ್ನು ಅಳವಡಿಸಲಾಗುವುದು. ಇದು ಅತಿವೇಗದಲ್ಲಿ ಸಂಚರಿಸುವ ವಾಹನಗಳನ್ನು ಪತ್ತೆ ಹಚ್ಚಲಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಮ್‌ ಶಂಕರ್‌ ತಿಳಿಸಿದರು. ‘ಕೆಲವೆಡೆ ಗೂಡ್ಸ್‌ ವಾಹನಗಳಲ್ಲಿ ಕಾರ್ಮಿಕರನ್ನು ಸಾಗಿಸುತ್ತಿರುವುದು ಗಮನಕ್ಕೆ ಬಂದಿದೆ. ಅದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದೂ ಅವರು ತಿಳಿಸಿದರು.

ಹೆದ್ದಾರಿ ಸಂಚಾರ ದುಸ್ತರ ಪಡುಬಿದ್ರಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹೆದ್ದಾರಿ ಕಾಮಗಾರಿ ಮಾಡುವಾಗ ಅಪಾಯಕಾರಿ ತಿರುವುಗಳು ಇರದಂತೆ ನೇರ ಹೆದ್ದಾರಿ ನಿರ್ಮಾಣ ಮಾಡುವ ಭರವಸೆ ನೀಡಲಾಗಿತ್ತು. ಆದರೆ ಹೆದ್ದಾರಿಯನ್ನು ನೇರಗೊಳಿಸುವ ಬದಲು ಎರ್ಮಾಳು ಕಲ್ಸಂಕ ಪಡುಬಿದ್ರಿ ಪೇಟೆ ಹೆಜಮಾಡಿ ಉಚ್ಚಿಲ ಮೂಳೂರು ಕಾಪುವಿನಲ್ಲಿ ತಿರುವುಗಳನ್ನು ನಿರ್ಮಿಸಲಾಗಿದೆ ಇದರಿಂದ ಅಪಘಾತಗಳು ಹೆಚ್ಚಾಗಿವೆ. ಕಾಪುವಿನ ಪಾಂಗಾಳ ಸೇತುವೆಯ ಬಳಿ ಕೋತಲ್‌ಕಟ್ಟೆಯಿಂದಲೇ ತಿರುವುಗೊಳಿಸಲಾಗಿದೆ. ಮೂಳೂರು ಉಚ್ಚಿಲ ಎರ್ಮಾಳು ಪಡುಬಿದ್ರಿಯಲ್ಲಿ ಹೆದ್ದಾರಿಯನ್ನು ನೇರಗೊಳಿಸುವ ಬದಲು ತಿರುವುಗೊಳಿಸಲಾಗಿದೆ. ತಿರುವುಗಳ ಕಾರಣ ಉಚ್ಚಿಲ ಜಂಕ್ಷನ್ ಕಾಪು ಎರ್ಮಾಳು ಪಡುಬಿದ್ರಿ ಅಪಘಾತಗಳ ಕೇಂದ್ರವಾಗಿದೆ ಎನ್ನುತ್ತಾರೆ ಸಾರ್ವಜನಿಕರು. ಚತುಷ್ಪಥ ಹೆದ್ದಾರಿ ಕಾಮಗಾರಿ ವೇಳೆ ತೆರೆಯಲಾಗಿದ್ದ ಮೂಳೂರು ಮತ್ತು ಎರ್ಮಾಳ್ ಜಂಕ್ಷನ್ (ತಿರುವು) ಹಾಗೂ ಉಚ್ಚಿಲ ಪಣಿಯೂರು ರಸ್ತೆ ಸೇರುವ ಜಂಕ್ಷನ್‌ನ ತಿರುವು ವಾಹನ ಸವಾರರಿಗೆ ಅಪಾಯಕಾರಿಯಾಗಿ ಕಾಡುತ್ತಿದೆ. ಈ ಭಾಗದಲ್ಲಿ ನಾಲ್ಕೂ ದಿಕ್ಕುಗಳಿಂದ ವಾಹನಗಳು ಏಕಕಾಲಕ್ಕೆ ಬಂದು ಹೆದ್ದಾರಿ ಪ್ರವೇಶಿಸುತ್ತಿರುವುದರಿಂದ ನಿರಂತರ ಅಪಘಾತಗಳು ಸಂಭವಿಸುತ್ತಿವೆ.

ರಸ್ತೆ ದಾಟಲು ಹರಸಾಹಸ ಬ್ರಹ್ಮಾವರ: ಇಲ್ಲಿನ ಮಹೇಶ್‌ ಆಸ್ಪತ್ರೆ ಜಂಕ್ಷನ್‌ನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟುವಾಗ ಅಪಘಾತ ನಡೆದು ಖಾಸಗಿ ಶಾಲಾ ವಿದ್ಯಾರ್ಥಿ ಮೃತಪಟ್ಟ ಘಟನೆ ಈಚೆಗೆ ನಡೆದಿತ್ತು. ದುರಂತದ ಅನಂತರ ಜನಾಕ್ರೋಶ ತೀವ್ರಗೊಂಡ ಪರಿಣಾಮ ಅಧಿಕಾರಿಗಳು ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆ ಪರಿಹರಿಸಲು ಮುಂದಾಗಿದ್ದಾರೆ ಆದರೆ ಅಂತಹದ್ದೇ ಅಪಾಯಕಾರಿ ಜಂಕ್ಷನ್‌ವೊಂದು ಕೋಟ ಹೈಸ್ಕೂಲ್‌ ಬಳಿಯೂ ಇದೆ. ಇಲ್ಲಿ ಕೂಡ ಸದಾ ಅಪಘಾತಗಳು ನಡೆಯುತ್ತಿರುತ್ತವೆ. ಕೋಟ ಮೂರ್ಕೈ ಜಂಕ್ಷನ್‌ನಲ್ಲಿ ಪ್ರಮುಖವಾಗಿ ವಿವೇಕ ವಿದ್ಯಾಸಂಸ್ಥೆ ಇದೆ. ಕೋಟ-ಬನ್ನಾಡಿ ಜಿಲ್ಲಾ ಮುಖ್ಯ ರಸ್ತೆಯು ಈ ಭಾಗದಲ್ಲಿ ಸಂಧಿಸುತ್ತದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬರುವ ವಾಹನಗಳನ್ನು ಗಮನಿಸಿಕೊಂಡು ರಸ್ತೆ ದಾಟುವುದು ವಿದ್ಯಾರ್ಥಿಗಳಿಗೆ ಸ್ಥಳೀಯರಿಗೆ ಸಾಕಷ್ಟು ತ್ರಾಸದಾಯಕವಾಗಿದೆ. ಕೋಟ ಅಮೃತೇಶ್ವರೀ ಜಂಕ್ಷನ್ ಸಾಲಿಗ್ರಾಮ ಜಂಕ್ಷನ್ ತೆಕ್ಕಟ್ಟೆ ಜಂಕ್ಷನ್ ಕೂಡ ಅಪಾಯಕಾರಿಯಾಗಿ ಪರಿಣಮಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.