ADVERTISEMENT

ಪಡುಬಿದ್ರಿ | 'ಸಮಸ್ಯೆ ಪರಿಹಾರಕ್ಕೆ ತಿಂಗಳ ಗಡುವು'

ಪಡುಬಿದ್ರಿಯಲ್ಲಿ ಜನರ ಸಂಚಾರಕ್ಕೆ ಮೇಲ್ಸೇತುವೆ ನಿರ್ಮಿಸಿ: ಕರವೇ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 6:46 IST
Last Updated 1 ಆಗಸ್ಟ್ 2025, 6:46 IST
ರಾಷ್ಟ್ರೀಯ ಹೆದ್ದಾರಿ 66ರ ಸಮಸ್ಯೆ ಪರಿಹರಿಸಲು ಆಗ್ರಹಿಸಿ ರಕ್ಷಣಾ ವೇದಿಕೆಯ ಮುಖಂಡರು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರಿಗೆ ಮನವಿ ಸಲ್ಲಿಸಿದರು
ರಾಷ್ಟ್ರೀಯ ಹೆದ್ದಾರಿ 66ರ ಸಮಸ್ಯೆ ಪರಿಹರಿಸಲು ಆಗ್ರಹಿಸಿ ರಕ್ಷಣಾ ವೇದಿಕೆಯ ಮುಖಂಡರು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರಿಗೆ ಮನವಿ ಸಲ್ಲಿಸಿದರು   

ಕಾಪು (ಪಡುಬಿದ್ರಿ): ರಾಷ್ಟ್ರೀಯ ಹೆದ್ದಾರಿ 66ರ ಅವೈಜ್ಞಾನಿಕ ಕಾಮಗಾರಿಯಿಂದ ಜನಸಾಮಾನ್ಯರು ನಿತ್ಯ ಸಮಸ್ಯೆ ಅನುಭವಿಸುತಿದ್ದು, ಹೆದ್ದಾರಿಯ ಸಮಸ್ಯೆಗಳನ್ನು ಒಂದು ತಿಂಗಳೊಳಗೆ ಪರಿಹರಿಸಬೇಕು, ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರವೀಣ್ ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಸಿದೆ.

ಕಾಪು ಪ್ರೆಸ್‌ಕ್ಲಬ್‌ನಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾ ಘಟಕದ ಗೌರವಾಧ್ಯಕ್ಷ ಅನ್ಸಾರ್ ಅಹಮದ್,
ಹೆಜಮಾಡಿ- ಪಡುಬಿದ್ರಿ ಸರ್ವಿಸ್ ರಸ್ತೆಯ ಕಾಮಗಾರಿ ವಿಳಂಬವಾಗುತ್ತಿದೆ. ಕಾಮಗಾರಿಯ ಸರ್ವೆ ಹಾಗೂ ಇನ್ನಿತರ ಪ್ರಕ್ರಿಯೆಗಳನ್ನು ಶೀಘ್ರ ಮುಗಿಸಿ ಟೆಂಡರ್ ಕರೆದು, 30 ದಿನದೊಳಗೆ ಕಾಮಗಾರಿ ಪ್ರಾರಂಭಿಸಬೇಕು.‌ ಪಡುಬಿದ್ರಿ ಪರಿಸರದಲ್ಲಿ ಆಗಾಗ ಅಪಘಾತ ಸಂಭವಿಸುತ್ತಿದ್ದು, ಇದನ್ನು ತಡೆಗಟ್ಟಲು ಸಾರ್ವಜನಿಕರ ಬಹು ವರ್ಷಗಳ ಬೇಡಿಕೆಯಾದ ಮೇಲ್ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.

ರಾಷ್ಟ್ರೀಯ ಹೆದ್ದಾರಿ ಯುದ್ದಕ್ಕೂ ಕೆಟ್ಟು ಹೋಗಿರುವ ಬೀದಿದೀಪ ದುರಸ್ತಿ, ಪಡುಬಿದ್ರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಾಹನಗಳಿಗೆ ಈ ಹಿಂದಿನಂತೆ ಉಚಿತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಸುಂಕ ವಸೂಲಾತಿ ಕೇಂದ್ರದ ಬಳಿ ಸಾರ್ವಜನಿಕರಿಗೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ಕ್ರಮಕೈಗೊಳ್ಳಬೇಕು. ಆಂಬುಲೆನ್ಸ್ ವ್ಯವಸ್ಥೆಗೊಳಿಸಬೇಕು. ಇವೆಲ್ಲ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ಸಂಘಟನೆಗಳನ್ನು ಸೇರಿಸಿಕೊಂಡು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಹೇಳಿದರು.

ADVERTISEMENT

ಟೋಲ್ ಕೇಂದ್ರದಲ್ಲಿ ಮೂಲಸೌಕರ್ಯ ಸಹಿತ ಹಲವಾರು ಸಮಸ್ಯೆಗಳಿವೆ. ಈ ಬಗ್ಗೆ ಅಲ್ಲಿನ ಅಧಿಕಾರಿಗಳಿಗೆ ತಿಳಿಸಿದರೆ ನಿರ್ಲಕ್ಷ್ಯ ಮಾಡುತ್ತಾರೆ. ಇದೇ ಧೋರಣೆ ಮುಂದುವರಿಸಿದರೆ ತಕ್ಕ ಉತ್ತರ ನೀಡಲಾಗುವುದು ಎಂದು ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ನಿಝಾಮ್ ಅಹಮದ್ ಹೇಳಿದರು.

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅವರಿಗೆ ಮನವಿ ಸಲ್ಲಿಸಲಾಯಿತು. ಅವರು ಬೇಡಿಕೆಗೆ ಸ್ಪಂದಿಸುವ ಭರವಸೆ ನೀಡಿದರು.

‘ಅರೆಬೆತ್ತಲೆ ಪ್ರತಿಭಟನೆ’ ಹೆದ್ದಾರಿಯಲ್ಲಿ ಎಲ್ಲೆಡೆ ಹೊಂಡಗಳು ಇದ್ದು ಅಪಘಾತಗಳು ಹೆಚ್ಚುತ್ತಿವೆ. ಶನಿವಾರದ ಒಳಗೆ ಎಲ್ಲ ಹೊಂಡಗಳನ್ನು ಮುಚ್ಚಬೇಕು. ಇಲ್ಲದಿದ್ದಲ್ಲಿ ಮುಂದೆ ಅರೆಬೆತ್ತಲೆ ಪ್ರತಿಭಟನೆ ನಡೆಸಿ ಕರವೇ ಮೂಲಕ ಅದನ್ನು ಮುಚ್ಚಲಾಗುವುದು ಅನ್ಸಾರ್ ಅಹಮದ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.