
ಹೆಬ್ರಿ: ಹೆಬ್ರಿಯ ಜೀವನದಿ ಸೀತಾನದಿಯ ಅಣೆಕಟ್ಟೆಯಲ್ಲಿ ನೀರು ಸಮೃದ್ಧವಾಗಿದ್ದು, ಈ ಬಾರಿ ಬೇಸಿಗೆಯಲ್ಲಿ ನೀರಿನ ಬವಣೆ ಎದುರಾಗದು ಎಂಬ ವಿಶ್ವಾಸದಲ್ಲಿ ಗ್ರಾಮ ಪಂಚಾಯಿತಿ ಇದೆ.
ಗ್ರಾಮದ ಕಲ್ಲಿಲ್ಲು ಎಂಬಲ್ಲಿರುವ ಅಣೆಕಟ್ಟೆ ಪೂರ್ಣ ತುಂಬಿರುವುದು ಗ್ರಾಮಸ್ಥರ ಮೊಗದಲ್ಲಿ ಸಂತಸ ಮೂಡಿಸಿದೆ. ಐದು ವರ್ಷಗಳ ಹಿಂದೆ ಹೆಬ್ರಿಯಲ್ಲಿ ನೀರಿನ ಸಮಸ್ಯೆ ಕಾಡಿತ್ತು. ಖಾಸಗಿ ಬಾವಿ, ಕೊಳವೆ ಬಾವಿಗಳಿಂದ ನೀರು ಸಂಗ್ರಹಿಸಿ ಟ್ಯಾಂಕರ್ ಮೂಲಕ ಗ್ರಾಮಸ್ಥರ ಮನೆಗೆ ನೀರು ಸರಬರಾಜು ಮಾಡಲಾಗಿತ್ತು.
ಪ್ರಸ್ತುತ ಬಹುತೇಕ ಮನೆಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮೂಲಕ ನೀರು ಸರಬರಾಜು ಆಗುತ್ತಿದೆ. ಕೆಲವು ಮನೆಗಳಲ್ಲಿ ಸ್ವಂತ ಬಾವಿ, ಕೊಳವೆಬಾವಿಗಳು ಇವೆ. ಹೆಬ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 7,200ರಷ್ಟು ಜನಸಂಖ್ಯೆ ಇದ್ದು, 2 ಸಾವಿರ ಕುಟುಂಬಗಳು ಇವೆ. 1,200 ಕುಟುಂಬಗಳು ಪಂಚಾಯಿತಿಯ ನಳದ ನೀರಿನ ಸಂಪರ್ಕ ಪಡೆದಿವೆ. ಈ ತನಕ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಿಯೂ ನೀರಿನ ಸಮಸ್ಯೆ ಕಂಡು ಬಂದಿಲ್ಲ ಎನ್ನುತ್ತವೆ ಪಂಚಾಯಿತಿ ಮೂಲಗಳು.
ಸರ್ಕಾರದ ಮಾರ್ಗಸೂಚಿಯಿಂದ ಬೇಸಿಗೆಯನ್ನು ಎದುರಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಾಲ್ಕು ವರ್ಷಗಳಿಂದ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗಿಲ್ಲ. ಜಲಮೂಲಗಳಲ್ಲಿ ಸಾಕಷ್ಟು ನೀರು ಇರುವುದರಿಂದ ಈ ಬಾರಿಯೂ ಸಮಸ್ಯೆ ಬರಲಾರದು. ಸೀತಾನದಿ ಅಣೆಕಟ್ಟೆಯಲ್ಲಿ ಭರಪೂರ ನೀರು ಇದೆ. ವಾರಾಹಿಯಿಂದ ಮನೆ ಮನೆಗೆ ನೀರು ಸರಬರಾಜು ಮಾಡುವ ಜಲಜೀವನ್ ಮಿಷನ್ ಯೋಜನೆಯಡಿ ನೀರು ಪೂರೈಕೆಯಾಗುತ್ತದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸದಾಶಿವ ಸೇರ್ವೆಗಾರ್ ತಿಳಿಸಿದರು.
ಮುಂಜಾಗ್ರತಾ ಕ್ರಮವಾಗಿ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿದ್ದೇವೆ. ಒಂದೊಮ್ಮೆ ನೀರಿನ ಸಮಸ್ಯೆ ಎದುರಾದಲ್ಲಿ ನೀರಿನ ವ್ಯವಸ್ಥೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ.ಸದಾಶಿವ ಸೇರ್ವೆಗಾರ್ ಪಿಡಿಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.