ಉಡುಪಿ: ದೇಶದ ಅಧಿಕಾರ ಚುಕ್ಕಾಣಿ ಹಿಡಿದ ರಾಜಕೀಯ ಪಕ್ಷಗಳು ದಶಕಗಳಿಂದ ಮುಸ್ಲಿಮರ ಬಗ್ಗೆ ಮೊಸಳೆ ಕಣ್ಣೀರು ಸುರಿಸಿದವೇ ವಿನಾ ಮುಸ್ಲಿಮರನ್ನು ಮೇಲೆತ್ತುವ ಕೆಲಸ ಮಾಡಲಿಲ್ಲ ಎಂದು ರಾಜ್ಯ ವಕ್ಫ್‌ಬೋರ್ಡ್ ಸದಸ್ಯ ಎನ್.ಕೆ.ಮುಹಮ್ಮದ್ ಶಾಫಿ ಸಹದಿ ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ಮುಸ್ಲಿಂ ಜಮಾತ್ ನಗರದ ಲಿಗಾಡೋ ಹೋಟೆಲ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಜಾ ಭಾರತ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಹಿಂದೂಗಳಿಗೆ ಹೋಲಿಸಿದರೆ ಮುಸ್ಲಿಮರ ಸ್ಥಿತಿ ತೀರಾ ಶೋಚನೀಯವಾಗಿದೆ ಎಂದು ಸ್ವಾತಂತ್ರ್ಯ ಪೂರ್ವದಲ್ಲೇ ಬ್ರಿಟಿಷರು ಹೇಳಿದ್ದರು. ಅಲ್ಲಿಂದ ಇಲ್ಲಿಯವರೆಗೂ ಮುಸ್ಲಿಮರಿಗೆ ಹಿಂದುಳಿದವರು ಎಂಬ ಹಣೆಪಟ್ಟಿ ಕಟ್ಟಿ ಕೂರಿಸಲಾಯಿತೇ ಹೊರತು, ಅಭಿವೃದ್ಧಿಗೆ ಒತ್ತು ನೀಡಲಿಲ್ಲ. ಪರಿಣಾಮ ರಾಜ್ಯದಲ್ಲಿ 22 ಲಕ್ಷ ಮುಸ್ಲಿಂ ಕುಟುಂಬಗಳು ಇಂದಿಗೂ ಸ್ಲಂಗಳಲ್ಲಿ ವಾಸವಾಗಿದ್ದಾರೆ ಎಂದರು.
ರಾಜ್ಯದಲ್ಲಿ 85 ಲಕ್ಷ ಮುಸಲ್ಮಾನರಿದ್ದರೂ ಕೇವಲ 7 ಶಾಸಕರಿದ್ದಾರೆ. ಒಬ್ಬ ಸಂಸದನೂ ಇಲ್ಲ. ಐಎಎಸ್, ಐಪಿಎಸ್ ಅಧಿಕಾರಿಗಳ ಸಂಖ್ಯೆಯೂ ತೀರಾ ಕಡಿಮೆ ಇದೆ. ಒಕ್ಕಲಿಗ, ಲಿಂಗಾಯತ, ಬ್ರಾಹ್ಮಣ ಸಮಾಜಕ್ಕೆ ಹೋಲಿಸಿದರೆ ಮುಸ್ಲಿಮರು ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಪ್ರಾತಿನಿಧ್ಯ ಪಡೆಯುವಲ್ಲಿ ಹಿಂದೆ ಬಿದ್ದಿದ್ದಾರೆ. ಈ ಬಗ್ಗೆ ಗಂಭೀರ ಚಿಂತನೆ ನಡೆಯಬೇಕು ಎಂದರು.
ಶೇ 51ರಷ್ಟು ಮುಸ್ಲಿಂ ಮಕ್ಕಳು ಪ್ರಾಥಮಿಕ ಶಿಕ್ಷಣದಿಂದ ವಂಚಿತರಾಗಿದ್ದು, ಅನಕ್ಷರತೆಯ ಪ್ರಮಾಣ ಹೆಚ್ಚಾಗಿದೆ. ವಿಧಾನಸಭೆ, ರಾಜ್ಯಸಭೆ, ಲೋಕಸಭೆಯಲ್ಲಿ ಮುಸ್ಲಿಂ ಜನಪ್ರತಿನಿಧಿಗಳ ಸಂಖ್ಯೆ ಕಡಿಮೆ ಇದೆ. ರಾಜಕೀಯವಾಗಿ ಬಲಿಷ್ಠರಾದರೆ ಮಾತ್ರ ಜನಾಂಗಕ್ಕೆ ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದರು.
ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ನಿಂದ ಮಾತ್ರವಲ್ಲ; ಹಿಂದೂ ಮುಸ್ಲಿಂ ಭಾವೈಕ್ಯತೆಗೆ, ಸೌಹಾರ್ದತೆಗೆ, ಸಾಮರಸ್ಯಕ್ಕೆ ಧಕ್ಕೆ ತರುವಂತಹ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ. ರಾಜಕೀಯ ನಾಯಕರು ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಈಡೇರಿಸಲು ದೇಶದಲ್ಲಿ ದ್ವೇಷ ಹರಡುವಂತಹ ಕೆಲಸಗಳಿಗೆ ಕೈಹಾಕಿದ್ದಾರೆ ಎಂದರು.
ದೇಶದಲ್ಲಿ ಯಾವುದೇ ಕಾಯ್ದೆ, ಕಾನೂನುಗಳು ಜಾರಿಯಾದರೂ ಸಂವಿಧಾನದ ಮೂಲ ಆಶಯಗಳಿಗೆ ಚ್ಯುತಿಯಾಗದಂತೆ ಅನುಷ್ಠಾನಗೊಳಿಸಬೇಕು. ದ್ವೇಷದ ಬದಲು ಪ್ರೀತಿ, ಸೌಹಾರ್ದ ಹರಡಬೇಕು. ಈ ನಿಟ್ಟಿನಲ್ಲಿ ಮುಸ್ಲಿಂ ಜಮಾತ್ ರಾಜ್ಯದಾದ್ಯಂತ ಪ್ರಜಾ ಭಾರತ ಅಭಿಯಾನ ಹಮ್ಮಿಕೊಂಡಿದೆ ಎಂದರು.
ಡಾ.ಮಹಮ್ಮದ್ ಫಾಝಿಲ್ ರಜ್ವಿ ಮಾತನಾಡಿ, ಮುಸ್ಲಿಮರು ತಂದೆ ತಾಯಿಗಳನ್ನು ಪ್ರೀತಿಸುವಷ್ಟೆ ಭಾರತವನ್ನೂ ಪ್ರೀತಿಸುತ್ತಾರೆ. ಇಲ್ಲಿನ ಸಂಸ್ಕೃತಿ, ಆಚರಣೆಗಳನ್ನು ಗೌರವಿಸುತ್ತಾರೆ. ಧರ್ಮಗಳ ಮಧ್ಯೆ ವೈಷಮ್ಯ ಬಿತ್ತುವ ಕೆಲಸವನ್ನು ರಾಜಕೀಯ ಪಕ್ಷಗಳು ಮಾಡಬಾರದು ಎಂದು ಕಿವಿಮಾತು ಹೇಳಿದರು.
ಪ್ರೊ.ಇಜಾಝ್ ಅಹಮದ್ ಬಳ್ಳಾರಿ, ಅಬೂಬಕ್ಕರ್ ಸಿದ್ದೀಕ್, ಯಹ್ಯೂಬ್ ಯೂಸುಫ್, ಮೌಲಾನಾ ನಜೀರ್ ಅಝರಿ, ಹಾಜಿ ಅಬೂಬಕ್ಕರ್, ಸಯ್ಯದ್ ಫರೀದ್, ಸಯ್ಯದ್ ಜುನೈದ್,ಸಯ್ಯದ್ ತಂಙಳ್, ಮಹಮ್ಮದ್ ನಯೀಮ್, ಮನ್ಸೂರ್, ಹಾಜಿ ಅಬ್ದುಲ್ಲ, ಶೇಖ್ ಗೌಸ್, ಅಬ್ದುರ್ ರೆಹಮಾನ್, ಮಹಮ್ಮದ್ ಮೌಲಾ, ಅಬ್ದುರ್ ರೆಹಮಾನ್ ರಝ್ವಿ, ಬಶೀಲ್ ಅಲಿ, ಸುಭಾನ್ ಅಹಮ್ಮದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.