ADVERTISEMENT

ನರೇಗಾ ಯೋಜನೆ ಕಟ್ಟುಪಾಡುಗಳು ಜನಸ್ನೇಹಿ ಅಲ್ಲ: ರಮೇಶ್ ಶೆಟ್ಟಿ ವಕ್ವಾಡಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 6:27 IST
Last Updated 18 ಡಿಸೆಂಬರ್ 2025, 6:27 IST
ರಮೇಶ್ ಶೆಟ್ಟಿ ವಕ್ವಾಡಿ
ರಮೇಶ್ ಶೆಟ್ಟಿ ವಕ್ವಾಡಿ   

ಕುಂದಾಪುರ: ‘ಸರ್ಕಾರದ ಯೋಜನೆಗಳು ಸುಲಭದ ರೀತಿಯಲ್ಲಿ ಜನಸಾಮಾನ್ಯರಿಗೆ ದೊರಕುವ ಹಾಗೆ ಇರಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಸರ್ಕಾರದ ಯೋಜನೆಗಳನ್ನು ಪಡೆಯಲು ಜನಸಾಮಾನ್ಯರನ್ನು ಹಿಂಸಿಸಲಾಗುತ್ತಿದೆ’ ಎಂದು ತಾಲ್ಲೂಕು ಕೆಡಿಪಿ ಸದಸ್ಯ ರಮೇಶ್ ಶೆಟ್ಟಿ ವಕ್ವಾಡಿ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಯೋಜನೆಗಳು ಘೋಷಣೆಗಳಾಗಿ ಪ್ರಚಾರ ಪಡೆಯಬೇಕು. ಆದರೆ, ಜನ ಅದರ ಪ್ರಯೋಜನ ಪಡೆಯಬಾರದು ಎನ್ನುವ ಧ್ಯೇಯವನ್ನು ಸರ್ಕಾರಗಳು ಹೊಂದಿರುವಂತೆ ಕಾಣುತ್ತಿದೆ. ಇದೀಗ ಕೇಂದ್ರ ಸರ್ಕಾರ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಹೆಸರು ಬದಲಾವಣೆ ಮಾಡಿ, ಹಲವು ಕಟ್ಟುಪಾಡುಗಳನ್ನು ವಿಧಿಸಿ ಯೋಜನೆಯನ್ನು ಜನಸಾಮಾನ್ಯರು ಪಡೆಯದಂತೆ ಮಾಡುವ ಪಿತೂರಿ ನಡೆಯುತ್ತಿದೆ. ಕಠಿಣವಾದ ನಿಬಂಧನೆ ಹೇರಿ ಅಧಿಕಾರಶಾಹಿ ನೀತಿಯನ್ನು ಜಾರಿಗೊಳಿಸಿ, ಯೋಜನೆಯ ಫಲಾನುಭವಿಗಳನ್ನು ಜೀತದಾಳುಗಳಾಗಿ ನಡೆಸಿಕೊಳ್ಳುವ ಹುನ್ನಾರ ಮಾಡಲಾಗುತ್ತಿದೆ. ಇದರಿಂದಾಗಿ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನ ಆಗುತ್ತಿಲ್ಲ. ಕೂಲಿ, ಕಚ್ಚಾ ಸಾಮಗ್ರಿಗಳ ಹಣಕ್ಕಾಗಿ ವರ್ಷಗಟ್ಟಲೆ ಕಾಯಬೇಕಾದ ಅನಿವಾರ್ಯತೆ ಇದೆ ಎಂದು ದೂರಿದರು.

ಯೋಜನೆಯ ಲಾಭ ಪಡೆಯಲು ಕೆಲಸಕ್ಕಿಂತ ಮೊದಲೇ ಬೋರ್ಡ್ ಹಾಕಿ ಅದಕ್ಕೆ ಬಂಡವಾಳ ಹೂಡಿ, ಕೆಲಸ ಮಾಡಿದ ಜನರಿಗೆ ತಾವೇ ಸಂಬಳ ಕೊಟ್ಟು ಸರ್ಕಾರದ ಮುಂದೆ ದಯನೀಯವಾಗಿ ಬೇಡುವ ಪರಿಸ್ಥಿತಿ ಬಂದಿದೆ. ಫೇಸ್ ರೀಡಿಂಗ್, ಸೆಟಲೈಟ್ ಗೂಢಚಾರಿಕೆ ವ್ಯವಸ್ಥೆಗಳು ಈ ಯೋಜನೆಯ ಮೂಲ ಉದ್ದೇಶದ ದಾರಿಯನ್ನೇ ಬದಲಾಯಿಸುತ್ತಿದೆ. ಅನವಶ್ಯಕ ಕಟ್ಟುಪಾಡುಗಳಿಂದಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಯೋಜನೆಯ ಅನುಷ್ಠಾನವೇ ಆಗದ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ತಿಳಿಸಿದರು. 

ADVERTISEMENT

ಈ ಬಗ್ಗೆ ಸಂಸದರು, ಶಾಸಕರು ಧ್ವನಿ ಎತ್ತಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಯೋಜನೆಯ ಅನುಷ್ಠಾನ ಆಗಬೇಕು. ಸರ್ಕಾರದ ಯೋಜನೆಯ ಹೆಸರು ಬದಲಾವಣೆಯೊಂದಿಗೆ ಅದನ್ನು ಹಳ್ಳ ಹಿಡಿಸುವ ಕೆಲಸ ಮಾಡಬಾರದು ಎಂದು ಅವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.