ಬೈಂದೂರು: ಕಿರಿಮಂಜೇಶ್ವರ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ನಡೆದ ಪೋಷಣ್ ಮಾಸಾಚರಣೆ ಪೌಷ್ಟಿಕ ಆಹಾರಗಳ ಬಗ್ಗೆ ಮಾಹಿತಿ ಶಿಬಿರವು ನಾಗೂರಿನ ಶಾಂತೇರಿ ಕಾಮಾಕ್ಷಿ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆಯಿತು.
ಕಿರಿಮಂಜೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೇಖರ್ ಖಾರ್ವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿರಿಯರ ಸಾಂಪ್ರದಾಯಿಕ ಆಹಾರ ಪದ್ಧತಿ ಹಾಗೂ ನಮ್ಮ ಸುತ್ತಮುತ್ತ ಬೆಳೆಯುವ ಸೊಪ್ಪು, ತರಕಾರಿಗಳು ಪೋಷಕಾಂಶಗಳ ಆಗರವಾಗಿವೆ. ದಿನನಿತ್ಯದ ಆಹಾರದಲ್ಲಿ ಇದನ್ನು ಉಪಯೋಗಿಸುವುದರಿಂದ ನಮಗೆ ಪೌಷ್ಟಿಕಾಂಶಗಳ ಕೊರತೆ ಉಂಟಾಗದು ಎಂದರು.
ಅಂಗನವಾಡಿ ಮೇಲ್ವಿಚಾರಕಿ ರೇಖಾ ಮಾತನಾಡಿ, ಮಕ್ಕಳು, ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಪೌಷ್ಟಿಕಾಂಶವುಳ್ಳ ಆಹಾರ ಅಗತ್ಯ. ಯುವಜನರು ಸಾಂಪ್ರದಾಯಿಕ ಪೌಷ್ಟಿಕ ಆಹಾರ ಸೇವನೆ ಬಿಟ್ಟು ಪಾಶ್ಚಿಮಾತ್ಯ ಆಹಾರದ ಕಡೆಗೆ ಒಲವು ತೋರುತ್ತಿದ್ದಾರೆ. ಇದರಿಂದ ರಕ್ತಹೀನತೆ, ಅಪೌಷ್ಟಿಕತೆ, ಬೊಜ್ಜುತನ ಉಂಟಾಗುತ್ತದೆ. ಈ ದಿಸೆಯಲ್ಲಿ ಆಹಾರ ಕ್ರಮಗಳ ಅರಿವು ಮೂಡಿಸಲು ಕೇಂದ್ರ ಸರ್ಕಾರವು ಪೋಷಣ್ ಅಭಿಯಾನ ಜಾರಿಗೆ ತಂದಿದೆ ಎಂದರು.
ಮಹಿಳೆಯರು ಮನೆಯಿಂದ ತಯಾರಿಸಿ ತಂದಿದ್ದ ತಿಂಡಿಗಳ ಪ್ರದರ್ಶನ ಹಾಗೂ ಆಯ್ಕೆಯಾದ ತಿನಿಸುಗಳಿಗೆ ಬಹುಮಾನ ನೀಡಲಾಯಿತು. ಗರ್ಭಿಣಿಯರಿಗೆ ಸೀಮಂತ ನೆರವೇರಿಸಲಾಯಿತು.
ಕಿರಿಮಂಜೇಶ್ವರ ಗ್ರಾಮ ಪಂಚಾಯಿತಿ ಪಿಡಿಒ ರಾಜೇಶ್, ವೈದ್ಯಾಧಿಕಾರಿ ನಿಶಾ ರೆಬೆಲ್ಲೊ, ಕಿರಿಮಂಜೇಶ್ವರ ಗ್ರಾಮ ಪಂಚಾಯಿತಿ ಸದಸ್ಯರಾದ ರಾಜು ದೇವಾಡಿಗ, ಕೃಷ್ಣ ಖಾರ್ವಿ, ಈಶ್ವರ್ ದೇವಾಡಿಗ, ಆನಂದ ಪೂಜಾರಿ, ಸರಸ್ವತಿ ನಾಯರಿ, ನೇತ್ರಾವತಿ, ಶಶಿಕಲಾ, ಜಯಲಕ್ಷ್ಮಿ ಉಪಸ್ಥಿತರಿದ್ದರು.
ಅಂಗನವಾಡಿ ಕಾರ್ಯಕರ್ತೆ ಪ್ರವೀಣಾ ಹೊಸಹಿತ್ಲು ಸ್ವಾಗತಿಸಿದರು. ಪದ್ಮನಾಭ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣಾ ನಾಗೂರು ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.