ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ `ಕಬ್ಬದುಳುಮೆ ಹಳಗನ್ನಡ ಕಾವ್ಯದೋದು ಕಮ್ಮಟ'ದಲ್ಲಿ ಮಂಗಳೂರು ವಿವಿಯ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ.ನಾಗಪ್ಪ ಗೌಡ ಸಮಾರೋಪ ಭಾಷಣ ಮಾಡಿದರು.
ಹೆಬ್ರಿ: ‘ಗತಕಾಲದ ಬದುಕು, ಮೌಲ್ಯಗಳಿಂದ ತುಂಬಿಕೊಂಡ ಹಳಗನ್ನಡ ಕಾವ್ಯಗಳನ್ನು ಭಾಷೆಯ ಕಾರಣಕ್ಕೆ ಹಳತೆಂದು ಬದಿಗಿಡಬಾರದು. ಕಾಲದ ಅರಿವಿನೊಂದಿಗೆ ಈ ಕಾಲದ ಬೇಕು– ಬೇಡಗಳನ್ನು ಪರಿಶೀಲಿಸಿಕೊಂಡು ಹಣತೆಯಾಗಿ ಬಳಸಿಕೊಳ್ಳಬೇಕು’ ಎಂದು ಮಂಗಳೂರು ವಿಶ್ವವಿದ್ಯಾನಿಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ನಾಗಪ್ಪ ಗೌಡ ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಕಾರದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ರಥಬೀದಿ ಗೆಳೆಯರು ಉಡುಪಿ, ಹಿರಿಯಡ್ಕ ಸರ್ಕಾರಿ ಪ್ರಥಮ ದರ್ಜೆ ಮತ್ತು ಪದವಿಪೂರ್ವ ಕಾಲೇಜು ಸಹಯೋಗದಲ್ಲಿ ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ‘ಕಬ್ಬದುಳುಮೆ ಹಳಗನ್ನಡ ಕಾವ್ಯದೋದು ಕಮ್ಮಟ'ದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.
ನಾವು ಬದುಕುತ್ತಿರುವ ಸಮಾಜ ಬದುಕಿನ ಬೇರುಗಳ ಸಾಂಸ್ಕೃತಿಕ ವಿವೇಚನೆಗಾಗಿ ಹಳಗನ್ನಡ ಪಠ್ಯಗಳಿಗೆ ಹತ್ತಿರವಾಗಬೇಕಾದ ಅಗತ್ಯ ಇರುವುದರಿಂದ ಶಿಕ್ಷಕರು, ವಿದ್ಯಾರ್ಥಿಗಳು ಅವುಗಳೊಂದಿಗೆ ಭಯ ಇಲ್ಲದ ನಿರ್ಭೀತ ಪ್ರೀತಿಯ ಆಪ್ತಸಂಬಂಧವೊಂದನ್ನು ಬೆಳೆಸಿ ಕೊಳ್ಳಬೇಕಾಗಿದೆ ಎಂದರು.
ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಾರುತಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗ ಮುಖ್ಯಸ್ಥೆ ಸೌಮ್ಯಲತಾ ಪಿ, ಐಕ್ಯುಎಸಿ ಸಂಚಾಲಕ ಲಿತಿನ್ ಬಿ.ಎಂ., ಪದವಿಪೂರ್ವ ಕಾಲೇಜಿನ ರಮೇಶ್ ನಾಯಕ್ ಭಾಗವಹಿಸಿದ್ದರು. ಶಿಬಿರಾರ್ಥಿಗಳು ಅನುಭವ ಹಂಚಿಕೊಂಡರು. ಅವರಿಗೆ ಪ್ರಮಾಣಪತ್ರ ವಿತರಿಸಲಾಯಿತು.
ವಿಚಾರಗೋಷ್ಠಿಯಲ್ಲಿ ಪ್ರೊ.ರಾಮಲಿಂಗಪ್ಪ ಬೇಗೂರು ‘ಹಳಗನ್ನಡ ಕಾವ್ಯ ಓದಿನ ಸವಾಲು ಮತ್ತು ಸಾಧ್ಯತೆಗಳು’, ಪ್ರೊ.ಜಯಪ್ರಕಾಶ ಶೆಟ್ಟಿ `ಪದವಿಪೂರ್ವ ಪಠ್ಯ ಮತ್ತು ಹಳಗನ್ನಡ ಕಾವ್ಯ ಭಾಗ’ ಕುರಿತು ವಿಚಾರ ಮಂಡಿಸಿದರು. ಉಪನ್ಯಾಸಕರಾದ ರಾಮಾಂಜಿ, ರವಿಚಂದ್ರ ಬಾಯರಿ ಗೋಷ್ಠಿ ನಿರ್ವಹಿಸಿದರು. ಕೃಷ್ಣ ಸಾಸ್ತಾನ ಅವರು ಕುವೆಂಪು ಗೀತೆಗಾಯನ ನಡೆಸಿದರು.
ಉಡುಪಿ ರಥಬೀದಿ ಗೆಳೆಯರು ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು. ಪ್ರಾಂಶುಪಾಲ ಪ್ರೊ.ಜಯಪ್ರಕಾಶ ಶೆಟ್ಟಿ ವಂದಿಸಿದರು. ಸಾಹಿತ್ಯ ಅಕಾಡೆಮಿ ಜಿಲ್ಲಾ ಚಕೋರ ವೇದಿಕೆ ಸಂಚಾಲಕಿ ಶಾಲಿನಿ ಯು.ಬಿ. ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.