ಉಡುಪಿ: ಬೈಂದೂರು ವ್ಯಾಪ್ತಿಯ ಉಪ್ಪುಂದ ಬಳಿಯ ತಾರಾಪತಿ ಕಡಲ ಕಿನಾರೆಯಲ್ಲಿ ಆಲಿವ್ ರಿಡ್ಲಿ ಜಾತಿಗೆ ಸೇರಿದ ಕಡಲಾಮೆಯ ಮೊಟ್ಟೆಯಿಂದ ನೂರಕ್ಕೂ ಹೆಚ್ಚು ಮರಿಗಳು ಹೊರಬಂದು ಕಡಲು ಸೇರಿವೆ.
‘60 ದಿನಗಳ ಹಿಂದೆ ತಾರಾಪತಿ ಕಡಲು ಕಿನಾರೆಯಲ್ಲಿ ಆಮೆ ಮೊಟ್ಟೆ ಇಟ್ಟಿರುವ ಜಾಗವನ್ನು ಗುರುತಿಸಿ ಅದರ ಮೇಲೆ ಗೂಡನ್ನು ಸ್ಥಾಪಿಸಿದ್ದೆವು. ಸೋಮವಾರ ಬೆಳಿಗ್ಗೆ ಈ ಮೊಟ್ಟೆಗಳಿಂದ 100 ರಿಂದ 105 ರಷ್ಟು ಮರಿಗಳು ಹೊರಬಂದು ಸುರಕ್ಷಿತವಾಗಿ ಕಡಲು ಸೇರಿವೆ’ ಎಂದು ಬೈಂದೂರು ವಲಯ ಅರಣ್ಯಾಧಿಕಾರಿ ಸಂದೇಶ್ ಕುಮಾರ್ ತಿಳಿಸಿದ್ದಾರೆ.
ಬೈಂದೂರು ವ್ಯಾಪ್ತಿಯಲ್ಲಿ ಮೂರು ಕಡೆ ಗ್ರಾಮಸ್ಥರ ಸಹಕಾರದಲ್ಲಿ ಅರಣ್ಯ ಇಲಾಖೆಯು ಕಡಲಾಮೆಗಳ ಮೊಟ್ಟೆಗಳನ್ನು ಸಂರಕ್ಷಿಸಿದ್ದು, ಈಗಾಗಲೇ 300 ಕ್ಕೂ ಹೆಚ್ಚು ಮರಿಗಳು ಸುರಕ್ಷಿತವಾಗಿ ಸಮುದ್ರ ಸೇರಿವೆ ಎಂದು ಅವರು ವಿವರಿಸಿದರು.
ಕುಂದಾಪುರ ಅರಣ್ಯ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಕೆ., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಊರವರ ಸಹಕಾರದಲ್ಲಿ ಕಡಲಾಮೆ ಮೊಟ್ಟೆಗಳನ್ನು ಸಂರಕ್ಷಿಸಿದ್ದರು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.