ಉಡುಪಿ: ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಬೈಂದೂರು ಹಾಗೂ ಕುಂದಾಪುರ ತಾಲ್ಲೂಕಿನ ಕೆಲವು ಗ್ರಾಮ ಪಂಚಾಯಿತಿ ಸದಸ್ಯರು ಸೋಮವಾರ ನಡೆದ ದಕ್ಷಿಣ ಕನ್ನಡ -ಉಡುಪಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನಪರಿಷತ್ ಉಪ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ.
ಬೈಂದೂರು ತಾಲ್ಲೂಕಿನ ಜಡ್ಕಲ್ ಗ್ರಾಮ ಪಂಚಾಯಿತಿಯ ಎಲ್ಲಾ 18 ಮಂದಿ ಸದಸ್ಯರು ಹಾಗೂ ಕುಂದಾಪುರ ತಾಲ್ಲೂಕಿನ ಕೆರಾಡಿ ಪಂಚಾಯಿತಿಯ ಎಲ್ಲಾ 14 ಮಂದಿ ಸದಸ್ಯರು ಮತದಾನ ಬಹಿಷ್ಕರಿಸಿದ್ದಾರೆ.
ಕುಂದಾಪುರ ತಾಲ್ಲೂಕಿನ ಚಿತ್ತೂರಿನಲ್ಲಿ ಇಬ್ಬರು ಸದಸ್ಯರಷ್ಟೇ ಮತದಾನ ಮಾಡಿದ್ದಾರೆ. ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಉಳಿದ ಆರು ಮಂದಿ ಮತದಾನ ಮಾಡಿಲ್ಲ. ಇಡೂರು ಕುಂಜ್ಞಾಡಿ ಗ್ರಾಮ ಪಂಚಾಯಿತಿಯ 12 ಸದಸ್ಯರ ಪೈಕಿ ಎಂಟು ಮಂದಿಯಷ್ಟೇ ಮತದಾನ ಮಾಡಿದ್ದಾರೆ.
ಕುಂದಾಪುರ ತಾಲ್ಲೂಕಿನ ಗೋಳಿಹೊಳೆ ಗ್ರಾಮ ಪಂಚಾಯಿತಿಯಲ್ಲಿ 16 ಮಂದಿ ಸದಸ್ಯರಲ್ಲಿ ಐದು ಮಂದಿಯಷ್ಟೇ ಮತದಾನ ಮಾಡಿದ್ದಾರೆ. ಆಲೂರು ಗ್ರಾಮ ಪಂಚಾಯಿತಿಯ 14 ಮಂದಿ ಸದಸ್ಯರಲ್ಲಿ ಐದು ಮಂದಿಯಷ್ಟೇ ಮತ ಚಲಾಯಿಸಿದ್ದಾರೆ.
ಹೆಚ್ಚುವರಿ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್., ಸಹಾಯಕ ಆಯುಕ್ತ ಮಹೇಶ್ಚಂದ್ರ ಅವರು ಮತದಾನ ಬಹಿಷ್ಕಾರಕ್ಕೆ ಕರೆ ನೀಡಿದ್ದ ಗ್ರಾಮ ಪಂಚಾಯಿತಿಗಳ ಸದಸ್ಯರ ಮನವೊಲಿಸಲು ಯತ್ನಿಸಿದ್ದರೂ ಪ್ರಯೋಜನವಾಗಿಲ್ಲ.
ಕಸ್ತೂರಿ ರಂಗನ್ ವರದಿಯಿಂದ ತಮ್ಮ ಗ್ರಾಮಗಳನ್ನು ಹೊರಗಿಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಈ ಗ್ರಾಮ ಪಂಚಾಯಿತಿಗಳ ಸದಸ್ಯರು ಆಗ್ರಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.