ADVERTISEMENT

ಉಡುಪಿ: ಕಡಲಾಮೆ ಮೊಟ್ಟೆಗೆ ಅರಣ್ಯ ಇಲಾಖೆ ಕಣ್ಗಾವಲು

ಮೊದಲ ಪ್ರಯತ್ನ ಯಶಸ್ವಿ: ಸಮುದ್ರ ಸೇರಿದ 300ಕ್ಕೂ ಅಧಿಕ ಆಲಿವ್‌ ರಿಡ್ಲಿ ಮರಿಗಳು

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2025, 5:56 IST
Last Updated 3 ಏಪ್ರಿಲ್ 2025, 5:56 IST
ಅರಣ್ಯ ಇಲಾಖೆಯ ಬೈಂದೂರು ವಲಯದ ವತಿಯಿಂದ ಬೀಚ್‌ನಲ್ಲಿ ಮಾಹಿತಿ ಫಲಕ ಅಳವಡಿಸಿರುವುದು
ಅರಣ್ಯ ಇಲಾಖೆಯ ಬೈಂದೂರು ವಲಯದ ವತಿಯಿಂದ ಬೀಚ್‌ನಲ್ಲಿ ಮಾಹಿತಿ ಫಲಕ ಅಳವಡಿಸಿರುವುದು   

ಉಡುಪಿ: ಅಳಿವಿನಂಚಿನಲ್ಲಿರುವ ಆಲಿವ್‌ ರಿಡ್ಲಿ ಪ್ರಭೇದದ ಕಡಾಲಾಮೆ ಮೊಟ್ಟೆಗಳಿಗೆ ಅರಣ್ಯ ಇಲಾಖೆಯ ಕುಂದಾಪುರ ವಿಭಾಗದ ಬೈಂದೂರು ವಲಯವು ಇದೇ ಮೊದಲ ಬಾರಿಗೆ ಗೂಡುಗಳನ್ನಿಟ್ಟು ಸಂರಕ್ಷಿಸುವ ಮೂಲಕ 300ಕ್ಕೂ ಹೆಚ್ಚು ಕಡಲಾಮೆ ಮರಿಗಳು ಸುರಕ್ಷಿತವಾಗಿ ಸಮುದ್ರ ಸೇರುವಂತೆ ಮಾಡಿದೆ.

ಅರಣ್ಯ ಇಲಾಖೆಯ ಕುಂದಾಪುರ ವಿಭಾಗದ ಅಧೀನದಲ್ಲಿ ಬರುವ ಉಡುಪಿ ಹಾಗೂ ಕುಂದಾಪುರ ವಲಯದಲ್ಲಿ ಈ ಹಿಂದೆಯೂ ಕಡಲಾಮೆ ಮೊಟ್ಟೆಗಳನ್ನು ಸಂರಕ್ಷಿಸುವ ಕೆಲಸ ನಡೆದಿತ್ತು. ಆದರೆ ಬೈಂದೂರು ವ್ಯಾಪ್ತಿಯಲ್ಲಿ ಇದೇ ಮೊದಲ ಬಾರಿ ಕಡಲಾಮೆ ಮೊಟ್ಟೆಗಳನ್ನು ಸರಂಕ್ಷಿಸುವ ಕೆಲಸ ನಡೆದಿದೆ.

ಬೈಂದೂರು ವ್ಯಾಪ್ತಿಯಲ್ಲಿ ಸಾರ್ವಜನಿಕರು ಮತ್ತು ಸಂಘಟನೆಗಳ ವತಿಯಿಂದ ಸುಮುದ್ರ ತೀರದ ಸ್ವಚ್ಛತಾ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು, ಈ ಕಾರಣದಿಂದ ಕಡಲಾಮೆಗಳು ಮೊಟ್ಟೆ ಇರಿಸಲು ಬೈಂದೂರು ವ್ಯಾಪ್ತಿಗೂ ಬಂದಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆಯ ಮೂಲಗಳು ಹೇಳಿವೆ.

ADVERTISEMENT

ಬೈಂದೂರು ವಲಯದಲ್ಲಿ ಮರವಂತೆ ಕಡಲ ಕಿನಾರೆಯಲ್ಲಿ ಒಂದು ಕಡೆ ಮತ್ತು ತಾರಾಪತಿ ಕಡಲ ಕಿನಾರೆಯಲ್ಲಿ ಎರಡು ಕಡೆ ಕಡಲಾಮೆ ಮೊಟ್ಟೆಗಳನ್ನು ಸಂರಕ್ಷಿಸಲಾಗಿತ್ತು. ಈ ಮೊಟ್ಟೆಗಳಿಂದ ಮರಿಗಳು ಹೊರಬಂದು ಕಡಲು ಸೇರಿವೆ.

ಮೊದಲಿಗೆ ಅರಣ್ಯ ಇಲಾಖೆಯ ವತಿಯಿಂದ ಕಡಲಾಮೆಯ ಬಗ್ಗೆ ಸ್ಥಳೀಯ ಮೀನುಗಾರರಲ್ಲಿ ಜಾಗೃತಿ ಮೂಡಿಸಲಾಗಿತ್ತು ಮತ್ತು ಸಮುದ್ರ ತೀರದಲ್ಲಿ ಮಾಹಿತಿ ಫಲಕಗಳನ್ನೂ ಸ್ಥಾಪಿಸಲಾಗಿತ್ತು. ಕಡಲಾಮೆಗಳು ಮೊಟ್ಟೆ ಇಟ್ಟಿರುವ ಸ್ಥಳಗಳನ್ನು ಗುರುತಿಸುವ ಕಾರ್ಯದಲ್ಲಿ ಸ್ಥಳೀಯರ ಸಹಕಾರ ಮಹತ್ವದ್ದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕಡಲಾಮೆ ಮೊಟ್ಟೆ ಇಟ್ಟಿರುವ ಜಾಗವನ್ನು ಗುರುತಿಸಿ, ಗೂಡನ್ನು ಅಳವಡಿಸದಿದ್ದರೆ ನಾಯಿಗಳು ಆ ಮೊಟ್ಟೆಗಳಿಗೆ ಹಾನಿ ಮಾಡುವ ಸಾಧ್ಯತೆ ಹೆಚ್ಚು. ಅಲ್ಲದೆ ಮನುಷ್ಯರು ನಡೆದಾಡುವಾಗಲೂ ಮೊಟ್ಟೆಗಳು ಒಡೆದು ಹೋಗುವ ಸಾಧ್ಯತೆಗಳೂ ಇರುತ್ತವೆ. ಮರಿಗಳು ಮೊಟ್ಟಯಿಂದ ಹೊರಬಂದು ಸಮುದ್ರ ಸೇರುವ ಹೊತ್ತಿನಲ್ಲೂ ನಾಯಿ, ಹದ್ದುಗಳ ದಾಳಿಗೆ ಒಳಗಾಗುವ ಸಾಧ್ಯತೆಯೂ ಹೆಚ್ಚಿರುತ್ತದೆ ಎನ್ನುತ್ತವೆ ಅರಣ್ಯ ಇಲಾಖೆ ಮೂಲಗಳು.

ಕಡಲಾಮೆಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿ ಸಂರಕ್ಷಿಸಲ್ಪಟ್ಟಿದ್ದು, ಅದರ ಆವಾಸ ಸ್ಥಾನಗಳಿಗೆ ಹಾನಿ ಉಂಟುಮಾಡುವುದು, ಮೊಟ್ಟೆಗಳನ್ನು ಸಂಗ್ರಹಿಸುವುದು, ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ ಎಂಬ ವಿಚಾರವನ್ನು ಅರಣ್ಯ ಇಲಾಖೆಯು ಸಮುದ್ರ ತೀರದ ನಿವಾಸಿಗಳಿಗೆ, ಮೀನುಗಾರರಿಗೆ ತಿಳಿಸಿ ಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡಿದೆ.

‘ಬೈಂದೂರು ವ್ಯಾಪ್ತಿಯ ಮರವಂತೆ ಮತ್ತು ತಾರಾಪತಿ ಸಮುದ್ರ ತೀರದಲ್ಲಿ ಕಡಲಾಮೆ ಮೊಟ್ಟೆ ಇಟ್ಟಿರುವ ಜಾಗವನ್ನು ಗುರುತಿಸಿದ ಬಳಿಕ ನಾವು ಆ ಜಾಗಕ್ಕೆ ಗೂಡನ್ನು ಅಳವಡಿಸಿದೆವು. ಪ್ರತಿದಿನ ನಮ್ಮ ಸಿಬ್ಬಂದಿ ಅಲ್ಲಿಗೆ ಭೇಟಿ ನೀಡುತ್ತಿದ್ದರು. ಕೊನೆಯ ಹದಿನೈದು ದಿವಸಗಳ ಕಾಲ ಗೂಡಿನ ಬಳಿ ಸಿಬ್ಬಂದಿಯನ್ನು ರಾತ್ರಿ ಪಾಳಿಯಲ್ಲಿ ನೇಮಕ ಮಾಡಿದ್ದೆವು. 50ರಿಂದ 60 ದಿನ ದಾಟಿದ ಮೇಲೆ ಮೊಟ್ಟೆಯಿಂದ ಕಡಲಾಮೆ ಮರಿಗಳು ಹೊರಬರುತ್ತವೆ’ ಎಂದು ಬೈಂದೂರು ವಲಯ ಅರಣ್ಯಾಧಿಕಾರಿ ಸಂದೇಶ್‌ ಕುಮಾರ್‌ ತಿಳಿಸಿದರು.

ಕಡಲಾಮೆ ಮೊಟ್ಟೆ ಇಟ್ಟಿರುವ ಸ್ಥಳದಲ್ಲಿ ಗೂಡು ಅಳವಡಿಸಿರುವುದು

‘ಸಮುದ್ರದಲ್ಲಿ ಜೆಲ್ಲಿ ಫಿಶ್‌ಗಳ ಸಂಖ್ಯೆ ಹೆಚ್ಚಾದಾಗ ಕೆಲವು ಬಗೆಯ ಮೀನುಗಳ ಸಂತತಿ ಕ್ಷೀಣಿಸುತ್ತದೆ. ಕಡಲಾಮೆಗಳು ಜೆಲ್ಲಿ ಫಿಶ್‌ಗಳನ್ನು ತಿನ್ನುವುದರಿಂದ ಅದರ ಸಂತತಿ ಹೆಚ್ಚಾದಂತೆ ಮೀನುಗಾರರಿಗೆ ಅನುಕೂಲ ಹೆಚ್ಚು. ಈ ಕುರಿತು ಮೀನುಗಾರರಲ್ಲಿ ಜಾಗೃತಿ ಮೂಡಿಸಿದ್ದೇವೆ’ ಎನ್ನುತ್ತಾರೆ ಅವರು.

ಕಡಲಾಮೆ ಮರಿಗಳು
ಉಡುಪಿ ಕುಂದಾಪುರ ಬೈಂದೂರು ವ್ಯಾಪ್ತಿಯಲ್ಲಿ ಕಡಲಾಮೆಗಳ ಮೊಟ್ಟೆಗಳನ್ನು ಸಂರಕ್ಷಿಸಿ ಮರಿಗಳು ಸುರಕ್ಷಿತವಾಗಿ ಸಮುದ್ರ ಸೇರುವಂತೆ ಮಾಡಲಾಗಿದೆ. ಕಡಲಾಮೆಗಳ ಸಂರಕ್ಷಣೆಗೆ ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು
ಗಣಪತಿ ಕೆ ಕುಂದಾಪುರ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ
ಸ್ವಚ್ಛ ಜಾಗ ಆಯ್ದುಕೊಳ್ಳುವ ಕಡಲಾಮೆ
ಕಡಲಾಮೆಗಳು ನವೆಂಬರ್‌ನಿಂದ ಜನವರಿವರೆಗೆ ಮೊಟ್ಟೆಯಿಡಲು ಸಮುದ್ರ ತೀರದತ್ತ ಬರುತ್ತವೆ. ಸಮುದ್ರದ ಅಲೆ ತಲುಪುವ ಜಾಗದಿಂದ 50ರಿಂದ 100 ಅಡಿ ದೂರದಲ್ಲಿ ಕಸ ಇರದ ಸ್ವಚ್ಛ ಜಾಗವನ್ನು ಮೊಟ್ಟೆ ಇಡಲು ಆಯ್ದುಕೊಳ್ಳುವ ಕಡಲಾಮೆ ಯಾವುದೇ ಅಪಾಯವಿಲ್ಲ ಎನ್ನುವುದನ್ನು ಮೊದಲು ಖಾತ್ರಿ ಪಡಿಸಿಕೊಳ್ಳುತ್ತದೆ. ಕಡಲಾಮೆಯು ಕಾಲುಗಳ ಸಹಾಯದಿಂದ ಮರಳು ಅಗೆದು 3ರಿಂದ 4 ಅಡಿ ಹೊಂಡದೊಳಗೆ 100ರಿಂದ 120 ಮೊಟ್ಟೆಗಳನ್ನು ಇಟ್ಟು ಮರಳನ್ನು ಪುನಃ ಮುಚ್ಚುತ್ತದೆ. ಅಲ್ಲೇನೂ ಕುರುಹು ಸಿಗದಂತೆ ತನ್ನ ಹೆಜ್ಜೆ ಗುರುತುಗಳನ್ನು ಗೊಂದಲಕಾರಿಯಾಗಿ ಮೂಡಿಸಿ ಕಡಲಿಗೆ ಮರಳುತ್ತದೆ ಎಂದು ಬೈಂದೂರು ವಲಯ ಅರಣ್ಯಾಧಿಕಾರಿ ಸಂದೇಶ್‌ ಕುಮಾರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.