ADVERTISEMENT

ಕರಾವಳಿ ಭತ್ತ ಕೃಷಿಗೆ ಏಕಿಲ್ಲ ಪ್ರತ್ಯೇಕ ನೀತಿ: ಕರಾವಳಿ ರೈತರ ಪ್ರಶ್ನೆ

ಹೊಯ್ಗೆಗೆ ಪ್ರತ್ಯೇಕ ನೀತಿ; ಭತ್ತಕ್ಕೆ ಏಕಿಲ್ಲ

ಬಾಲಚಂದ್ರ ಎಚ್.
Published 7 ನವೆಂಬರ್ 2021, 19:30 IST
Last Updated 7 ನವೆಂಬರ್ 2021, 19:30 IST
ಭತ್ತದ ತೆನೆ
ಭತ್ತದ ತೆನೆ   

ಉಡುಪಿ: ಕರಾವಳಿಯಲ್ಲಿ ಭತ್ತದ ಕೃಷಿಯೇ ದೊಡ್ಡ ಸವಾಲು. ಅತಿವೃಷ್ಟಿಯ ಆತಂಕ, ಕಾಡು ಪ್ರಾಣಿಗಳ ಉಪಟಳ, ಕೃಷಿ ಕಾರ್ಮಿಕರ ಅಲಭ್ಯತೆ, ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳ ಹೀಗೆ, ನಾಟಿಯಿಂದ ಕೊಯ್ಲಿನವರೆಗೂ ಸವಾಲುಗಳನ್ನು ಎದುರಿಸಿಯೇ ರೈತ ಭತ್ತ ಬೆಳೆಯಬೇಕು. ಬೆಳೆದ ನಂತರವೂ ಸೂಕ್ತ ಬೆಲೆಗಾಗಿ ಮಧ್ಯವರ್ತಿಗಳ ಮುಂದೆ ಅಂಗಲಾಚಬೇಕು.

ಕರಾವಳಿ ರೈತರ ಬಗ್ಗೆ ಆಳುವ ಸರ್ಕಾರಗಳ ನಿರ್ಲಕ್ಷ್ಯದಿಂದ ಜಿಲ್ಲೆಯ ರೈತರು ಭತ್ತದ ಕೃಷಿಗೆ ಬೆನ್ನುಮಾಡುತ್ತಿದ್ದಾರೆ. ಭತ್ತದ ಗದ್ದೆಗಳು ಅಡಿಕೆ ತೋಟಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಕೃಷಿ ಭೂಮಿ ಕಾಂಕ್ರೀಟ್‌ ಕಾಡುಗಳಾಗಿ ಬದಲಾಗುತ್ತಿವೆ. ಸಾವಿರಾರು ಹೆಕ್ಟೇರ್ ಭತ್ತದ ಕೃಷಿ ಭೂಮಿ ಕಣ್ಮರೆಯಾಗಿದೆ.

ಪರಿಸ್ಥಿತಿ ಮುಂದೆಯೂ ಬದಲಾಗದಿದ್ದರೆ, ಜಿಲ್ಲೆಯಿಂದ ಭತ್ತದ ಕೃಷಿ ಕಣ್ಮರೆಯಾಗಲಿದ್ದು, ಕರಾವಳಿಯ ಜನರು ಅಕ್ಕಿಗಾಗಿ ನೆರೆಯ ಜಿಲ್ಲೆಗಳನ್ನು ಆಶ್ರಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಇಂತಹ ಸ್ಥಿತಿ ಬರುವ ಮುನ್ನ ಎಚ್ಚೆತ್ತುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಎಚ್ಚರಿಸುತ್ತಾರೆ ರೈತ ಮುಖಂಡರು.

ADVERTISEMENT

ಪರಿಹಾರ ಏನು?

ಸರ್ಕಾರ ತಕ್ಷಣ ಕರಾವಳಿಯ ಭತ್ತ ಬೆಳೆಗಾರರ ಹಿತ ಕಾಯಬೇಕು. ಜಿಲ್ಲೆಯಲ್ಲಿ ಭತ್ತ ಕಟಾವು ಆರಂಭವಾಗುತ್ತಿದ್ದಂತೆ ಬೆಂಬಲ ಬೆಲೆಯಡಿ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಇದರಿಂದ ಮಾರುಕಟ್ಟೆಯಲ್ಲಿ ಭತ್ತಕ್ಕೆ ದರ ಹೆಚ್ಚಾಗಲಿದ್ದು, ರೈತರ ಶೋಷಣೆ ತಪ್ಪಲಿದೆ. ಜತೆಗೆ, 2019ರಲ್ಲಿ ಜಾರಿಯಾಗಿದ್ದ ಕರಾವಳಿ ಪ್ಯಾಕೇಜ್ ಮತ್ತೆ ಅನುಷ್ಠಾನಕ್ಕೆ ಬರಬೇಕು. ಎಲ್ಲ ಭತ್ತ ಬೆಳೆಗಾರರಿಗೂ ಪ್ರೋತ್ಸಾಹ ಧನ ಸಿಗಬೇಕು ಎಂದು ಒತ್ತಾಯಿಸುತ್ತಾರೆ ರೈತ ನಾಯಕರು.

ಇಡೀ ರಾಜ್ಯದಲ್ಲಿ ಎಂಒ–4 ಗುಣಮಟ್ಟದ ಭತ್ತದ ತಳಿ ಬೆಳೆಯುವುದು ಕರಾವಳಿಯಲ್ಲಿ ಮಾತ್ರ. ಮಾರುಕಟ್ಟೆಯಲ್ಲಿ ಕಜೆ ಅಕ್ಕಿ ಕೆಜಿಗೆ ₹ 45 ದರ ವಿದ್ದರೂ ಮಧ್ಯವರ್ತಿಗಳು, ಮಿಲ್ ಮಾಲೀಕರು ರೈತರಿಂದ ಕೆ.ಜಿ ಭತ್ತಕ್ಕೆ ₹ 13 ರಿಂದ 14 ರೂಪಾಯಿಗೆ ಖರೀದಿಸುತ್ತಾರೆ. ಭತ್ತ ಅಕ್ಕಿಯಾಗುವ ಹಂತದಲ್ಲಿ ಲಭ್ಯವಾಗುವ ಉಪ ಉತ್ಪನ್ನಗಳಿಂದ ಲಾಭ ಮಾಡಿಕೊಳ್ಳುತ್ತಾರೆ. ತೌಡಿನಿಂದ ಎಣ್ಣೆ ತೆಗೆದರೆ, ಭತ್ತದ ಉಮಿ ಇಟ್ಟಿಗೆ ಭಟ್ಟಿ, ಮಂಡಕ್ಕಿ ಭಟ್ಟಿಗೆ ಬಳಕೆಯಾಗಿ, ಬೂದಿಯೂ ಗೊಬ್ಬರವಾಗಿ ಮಾರಾಟವಾಗುತ್ತದೆ. ಆದರೂ ರೈತರಿಗೆ ಸಿಗುವುದು ಬಿಡಿಗಾಸು.

ಕರಾವಳಿಯಲ್ಲಿ ಜನಪ್ರತಿನಿಧಿಗಳು ಹೊಯ್ಗೆಗೆ ಪ್ರತ್ಯೇಕ ನೀತಿ ಮಾಡಲು ಸಾಧ್ಯವಾದರೆ, ಭತ್ತಕ್ಕೆ ಮಾಡಲು ಸಾಧ್ಯವಿಲ್ಲ ಏಕೆ ? ಹೊಯ್ಗೆಯ ಮೇಲಿನ ಕಾಳಜಿ ಭತ್ತದ ಮೇಲೆ ಏಕಿಲ್ಲ ಎಂದು ಪ್ರಶ್ನಿಸುತ್ತಾರೆ ರೈತ ನಾಯಕರು.

ಹೊರ ರಾಜ್ಯಗಳಿಂದ ಕಜೆ ಭತ್ತವನ್ನು ಖರೀದಿಸದಂತೆ ಹಾಗೂ ಜಿಲ್ಲೆಯ ರೈತರಿಂದಲೇ ಖರೀದಿಸುವಂತೆ ಜಿಲ್ಲಾಡಳಿತ ಆದೇಶ ಹೊರಡಿಸಬೇಕು. ಭತ್ತ ಖರೀದಿ ಕೇಂದ್ರಗಳ ಮೂಲಕ ಎಂಒ 4 ಭತ್ತವನ್ನು ಖರೀದಿಸಿ, ಪಡಿತರ ವ್ಯವಸ್ಥೆಯ ಮೂಲಕ ವಿತರಿಸಬೇಕು. ನೆರೆಯ ಕೇರಳದಲ್ಲಿ ಕ್ವಿಂಟಲ್ ಭತ್ತಕ್ಕೆ ₹ 2,740 ಬೆಂಬಲ ಬೆಲೆ ನೀಡುತ್ತಿದ್ದು, ಅದೇ ಮಾದರಿ ಜಾರಿ ಮಾಡಬೇಕು. ಬೆಳೆದ ಬೆಳೆಗೆ ಯೋಗ್ಯವಾದ ಬೆಲೆ ಕೊಡಲು ಯೋಗ್ಯತೆ ಇಲ್ಲ ಎಂದ ಮೇಲೆ ಹಡಿಲುಭೂಮಿ ಕೃಷಿಗೆ ರೈತರನ್ನು ಒತ್ತಾಯಿಸುವುದೇಕೆ ಎಂದು ಪ್ರಶ್ನಿಸುತ್ತಾರೆ ರೈತ ಹೋರಾಟಗಾರ ಶಿವಮೂರ್ತಿ.

ಇದ್ದೂ ಇಲ್ಲದಂತಾದ ಎಪಿಎಂಸಿ

ಉಡುಪಿಯಲ್ಲಿ ಎಪಿಎಂಸಿ ಇದೆ ಎಂಬ ವಿಚಾರವೇ ಬಹಳಷ್ಟು ರೈತರಿಗೆ ತಿಳಿದಿಲ್ಲ. ಮೂರ್ನಾಲ್ಕು ಗೋದಾಮುಗಳನ್ನು ಹೊರತು ಪಡಿಸಿ ಯಾವುದೇ ಸೌಲಭ್ಯಗಳು ಎಪಿಎಂಸಿಯಲ್ಲಿ ಇಲ್ಲ. ಕರಾವಳಿಯ ರೈತರ ಪಾಲಿಗೆ ಎಪಿಎಂಸಿ ಇದ್ದೂ ಇಲ್ಲದಂತಾಗಿದೆ. ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಗೆ ಹಾಕಿರುವ ನಿಯಮಗಳೂ ಅವೈಜ್ಞಾನಿಕ. 50 ಕೆ.ಜಿ ಚೀಲದಲ್ಲಿ ಭತ್ತ ತರಬೇಕು ಎಂಬ ನಿಯಮವಿದೆ. ಮಾರುಕಟ್ಟೆಯಲ್ಲಿ 50 ಕೆ.ಜಿ ಚೀಲಕ್ಕೆ 50 ದರವಿದ್ದು, ಎಪಿಎಂಸಿ ರೈತನಿಗೆ ಮರುಪಾವತಿಸುವುದು ಚೀಲಕ್ಕೆ ಕೇವಲ ₹ 10. ತೇವಾಂಶ ಇದ್ದರೆ ಭತ್ತ ತೆಗೆದುಕೊಳ್ಳುವುದಿಲ್ಲ. ಮಳೆಗಾಲದಲ್ಲಿ ಭತ್ತ ಒಣಗಿಸುವುದು ಹೇಗೆ. ಇಂತಹ ಅವೈಜ್ಞಾನಿಕ ನಿಯಮಗಳಿಂದ ರೈತರು ಖರೀದಿ ಕೇಂದ್ರಗಳತ್ತ ಸುಳಿಯುವುದಿಲ್ಲ ಎಂದು ದೂರುತ್ತಾರೆ ರೈತರು.

ಖರೀದಿ ಕೇಂದ್ರಗಳಲ್ಲಿ ಖರೀದಿಯಾದ ಭತ್ತ

ವರ್ಷ–ಬೆಂಬಲ ಬೆಲೆ–ಖರೀದಿಸಿದ ಭತ್ತ (ಕ್ವಿಂಟಲ್‌ಗಳಲ್ಲಿ)

2011–12– ₹ 1,580–13,034

2013–14– ₹ 1,600–696

2014–15– ₹ 1,360–0

2015–16– ₹ 1,410–280

2016–17– ₹ 1,470–0

2017–18– ₹ 1,590–0

2018–19– ₹ 1,750–0

2019–20– ₹ 1,815–0

2020–21– ₹ 1,868–0

2021–22– ₹ 1,940–0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.