ADVERTISEMENT

ಉಡುಪಿ | ಹಡಿಲುಬಿದ್ದ ಗದ್ದೆಗಳಲ್ಲಿ ಭತ್ತ ಕೃಷಿ

ನಾಟಿ ಪ್ರಮಾಣ ಕಳೆದ ವರ್ಷಕ್ಕಿಂತ 2 ಪಟ್ಟು ಹೆಚ್ಚಳ: ಕೃಷಿಯತ್ತ ಚಿತ್ತ

ಬಾಲಚಂದ್ರ ಎಚ್.
Published 6 ಜುಲೈ 2020, 19:30 IST
Last Updated 6 ಜುಲೈ 2020, 19:30 IST
ಭತ್ತದ ನಾಟಿ ಕಾರ್ಯ (ಸಾಂದರ್ಭಿಕ ಚಿತ್ರ)
ಭತ್ತದ ನಾಟಿ ಕಾರ್ಯ (ಸಾಂದರ್ಭಿಕ ಚಿತ್ರ)   

ಉಡುಪಿ: ಕೊರೊನಾ ಸೋಂಕು ಹೆಚ್ಚಾದ ಬಳಿಕ ಮುಂಬೈ, ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ಬದುಕುಕೊಟ್ಟಿಕೊಂಡಿದ್ದ ಹೆಚ್ಚಿನವರು ತವರಿಗೆ ಮರಳಿದ್ದು, ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಜತೆಗೆ ಸಕಾಲಕ್ಕೆ ಮುಂಗಾರು ಪ್ರವೇಶವಾಗಿರುವುದರಿಂದ ಈ ವರ್ಷ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಭತ್ತದ ನಾಟಿ ನಡೆದಿದೆ.

ಕಳೆದ ವರ್ಷ ಈ ಅವಧಿಯಲ್ಲಿ 5,600 ಹೆಕ್ಟೇರ್‌ನಷ್ಟು ಭತ್ತದ ನಾಟಿಯಾಗಿತ್ತು. ಈ ವರ್ಷ 14,115 ಹೆಕ್ಟೇರ್ ಬಿತ್ತನೆಯಾಗಿದೆ. ಕಳೆದ ವರ್ಷಕ್ಕಿಂತ 2 ಪಟ್ಟಿಗೂ ಹೆಚ್ಚಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಕೆಂಪೇಗೌಡ ಅಂಕಿ ಅಂಶಗಳ ಸಹಿತ ಮಾಹಿತಿ ನೀಡಿದರು.

ಕೃಷಿಯತ್ತ ಚಿತ್ತ:

ADVERTISEMENT

ಕೊರೊನಾ ಸೋಂಕು ಜಿಲ್ಲೆಯಮತ್ಸ್ಯೋದ್ಯಮ, ಪ್ರವಾಸೋದ್ಯಮ, ಮೂಲಸೌಕರ್ಯ ಕ್ಷೇತ್ರಕ್ಕೆ ಬಲವಾದ ಪೆಟ್ಟುಕೊಟ್ಟರೂ, ಕೃಷಿ ಚಟುವಟಿಕೆಗಳಿಗೆ ಪೂರಕವಾಗಿದೆ. ಹೊರ ರಾಜ್ಯಗಳಲ್ಲಿ ಹೋಟೆಲ್‌, ಸಣ್ಣ ಕೈಗಾರಿಕೆ ಸೇರಿದಂತೆ ಇತರೆಡೆಗಳಲ್ಲಿ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದವರು ಮರಳಿ ಉದ್ಯೋಗಕ್ಕೆ ಹೋಗುವ ಮನಸ್ಸು ಮಾಡುತ್ತಿಲ್ಲ.

ಸ್ವಂತ ಊರಿನಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡು, ಉಪ ಕಸುಬುಗಳ ಮೂಲಕ ಬದುಕು ಕಟ್ಟಿಕೊಳ್ಳಲು ಮುಂದಾಗುತ್ತಿದ್ದಾರೆ. ಪರಿಣಾಮ, ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಹೆಚ್ಚಾಗಿವೆ ಎಂದು ಅಭಿಪ್ರಾಯಪಟ್ಟರು.

ಸಕಾಲಕ್ಕೆ ಮಳೆ:

ಕಳೆದ ವರ್ಷ ಜಿಲ್ಲೆಗೆ ತಡವಾಗಿ ಮುಂಗಾರು ಪ್ರವೇಶಿಸಿತ್ತು. ಕಳೆದ ವರ್ಷದ ಜೂನ್‌ನಲ್ಲಿ ವಾಡಿಕೆಯಂತೆ 112.7 ಸೆ.ಮೀ ಮೀಟರ್ ಮಳೆಯಾಗಬೇಕಿತ್ತು. ಆದರೆ, ಬಿದ್ದಿದ್ದು 63.4 ಸೆ.ಮೀ ಮಾತ್ರ. ಅನಾವೃಷ್ಟಿಯಿಂದ ಭತ್ತದ ನಾಟಿ ಕಾರ್ಯಕ್ಕೆ ತೀವ್ರ ಹಿನ್ನಡೆಯಾಗಿತ್ತು.

ಈ ವರ್ಷ ಜೂನ್‌ನಿಂದ ಜುಲೈ 3ರವರೆಗೂ ವಾಡಿಕೆಯ 140 ಸೆ,ಮೀ ಮಳೆಯ ಬದಲಾಗಿ, 123.5 ಸೆ.ಮೀ ಮಳೆಯಾಗಿದೆ. ಶೇ 90ಕ್ಕಿಂತ ಹೆಚ್ಚಿನ ಪ್ರಮಾಣದ ಮಳೆಯಾಗಿರುವುದು ಭತ್ತದ ಕೃಷಿಗೆ ಅನುಕೂಲವಾಗಿದೆ.

ಬಿತ್ತನೆ ಬೀಜಕ್ಕೂ ಬೇಡಿಕೆ:

‘ಕಳೆದ ವರ್ಷ 2,000 ಕ್ವಿಂಟಲ್ ಬಿತ್ತನೆ ಬೀಜ ಮಾರಾಟವಾಗಿತ್ತು. ಈ ವರ್ಷ 2,518 ಕ್ವಿಂಟಲ್‌ ಮಾರಾಟವಾಗಿದ್ದು, ಇನ್ನೂ ರೈತರಿಂದ ಬೇಡಿಕೆ ಇತ್ತು. ಹಡಿಲುಬಿದ್ದ ಗದ್ದೆಗಳಿಗೂ ಭತ್ತದ ಕೃಷಿ ವಿಸ್ತಾರವಾಗಿರುವುದನ್ನು ಕಾಣಬಹುದು’ ಎಂದು ಕೆಂಪೇಗೌಡ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 36,000 ಹೆಕ್ಟೇರ್ ಭತ್ತದ ಕ್ಷೇತ್ರವಿದ್ದು, ಕಳೆದ ವರ್ಷ 35,000 ಹೆಕ್ಟೇರ್ ನಾಟಿ ನಡೆದಿತ್ತು. ಈ ವರ್ಷ ಕನಿಷ್ಠ 500 ರಿಂದ 600 ಹೆಕ್ಟೇರ್ ಭತ್ತದ ಕೃಷಿ ಹೆಚ್ಚಾಗುವ ನಿರೀಕ್ಷೆ ಇದೆ. 900 ಟನ್‌ ರಸಗೊಬ್ಬರ ದಾಸ್ತಾನಿದ್ದು, ಕೊರತೆ ಇಲ್ಲ ಎಂದು ತಿಳಿಸಿದರು.

ಕೃಷಿ ಕಾರ್ಮಿಕರ ಲಭ್ಯತೆ:

ಕರಾವಳಿಯಲ್ಲಿ ಪ್ರತಿವರ್ಷ ಕೃಷಿ ಕಾರ್ಮಿಕರ ಸಮಸ್ಯೆ ಹೆಚ್ಚು ಬಾಧಿಸುತ್ತಿತ್ತು. ಕಾರ್ಮಿಕರ ಅಲಭ್ಯತೆಯಿಂದ ನೂರಾರು ಹೆಕ್ಟೇರ್ ಭೂಮಿ ಹಡಿಲು ಬೀಳುತ್ತಿತ್ತು. ಈ ವರ್ಷ ಕೊರೊನಾದಿಂದ ಹೊರ ರಾಜ್ಯಗಳಲ್ಲಿ ದುಡಿಯುತ್ತಿದ್ದ ಹೆಚ್ಚಿನವರು ಕೆಲಸ ಕಳೆದುಕೊಂಡು ಊರಿಗೆ ಮರಳಿರುವುದರಿಂದ, ಸಮಯ ವ್ಯರ್ಥ ಮಾಡುವ ಬದಲು ಪೋಷಕರ ಜತೆ ಕೃಷಿಯಲ್ಲಿ ಕೈಜೋಡಿಸಿದ್ದಾರೆ. ಪರಿಣಾಮ, ಕೃಷಿ ಕಾರ್ಮಿಕರ ಸಮಸ್ಯೆ ತೀರಾ ಕಡಿಮೆಯಾಗಿದೆ.

ಕೆಂಪೇಗೌಡ, ಕೃಷಿ ಇಲಾಖೆ ಜಂಟಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.