ADVERTISEMENT

ಕ್ವಿಂಟಲ್ ಭತ್ತಕ್ಕೆ ₹ 2,540 ಬೆಲೆ ನಿಗದಿ: ಜಿಲ್ಲಾಧಿಕಾರಿ ಕೂರ್ಮಾರಾವ್

ನ. 21ರಿಂದ ಭತ್ತ ಖರೀದಿ ನೋಂದಣಿ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2022, 16:30 IST
Last Updated 18 ನವೆಂಬರ್ 2022, 16:30 IST
ಎಂ.ಕೂರ್ಮಾರಾವ್, ಜಿಲ್ಲಾಧಿಕಾರಿ
ಎಂ.ಕೂರ್ಮಾರಾವ್, ಜಿಲ್ಲಾಧಿಕಾರಿ   

ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ಬೆಳೆಯಲಾಗುವ ಕಜೆ, ಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ, ಉಮಾ, ಅಭಿಲಾಷ ಮತ್ತು ಎಂಒ 4 ಭತ್ತದ ತಳಿಗಳನ್ನು ಜಿಲ್ಲೆಯ ರೈತರಿಂದ ಖರೀದಿಸಿ, ಕುಚ್ಚಲಕ್ಕಿಯನ್ನಾಗಿ ಪರಿವರ್ತಿಸಿ, ಪಡಿತರದಲ್ಲಿ ವಿತರಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿರುವುದರಿಂದ ನ.21ರಿಂದ ನೋಂದಣಿ ಆರಂಭವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಿಳಿಸಿದ್ದಾರೆ.

ಪ್ರಸಕ್ತ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕೇಂದ್ರ ಸರ್ಕಾರ ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಲ್‌ಗೆ ₹ 2,040 ಹಾಗೂ ಗ್ರೇಡ್ ‘ಎ’ ಭತ್ತಕ್ಕೆ ₹ 2,060 ಕನಿಷ್ಠ ಬೆಂಬಲ ಬೆಲೆಯ ಜತೆಗೆ ಸ್ಥಳೀಯ ತಳಿಗಳ ಭತ್ತಕ್ಕೆ ಪ್ರತಿ ಕ್ವಿಂಟಲ್‌ಗೆ ₹ 500 ಪ್ರೋತ್ಸಾಹ ಧನ ನೀಡಿ ಖರೀದಿಸಲಾಗುವುದು ಎಂದರು.

ಜಿಲ್ಲೆಯ ರೈತರಿಂದ ಪ್ರತಿ ಎಕರೆಗೆ ಗರಿಷ್ಠ 16 ಕ್ವಿಂಟಲ್‌ನಂತೆ ಗರಿಷ್ಠ 40 ಕ್ವಿಂಟಲ್‌ ಖರೀದಿಸಲಾಗುವುದು. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಖರೀದಿ ಏಜೆನ್ಸಿಯನ್ನಾಗಿ ನೇಮಿಸಲಾಗಿದೆ.

ADVERTISEMENT

ರೈತರ ನೋಂದಣಿ ಕಾರ್ಯವನ್ನು ಉಡುಪಿ, ಕುಂದಾಪುರ ಹಾಗೂ ಕಾರ್ಕಳ ಕೃಷಿ ಮಾರುಕಟ್ಟೆ ಸಮಿತಿಯ ಎ.ಪಿ.ಎಂ.ಸಿ ಯಾರ್ಡ್‌ನಲ್ಲಿ ಹಾಗೂ ಕಾಪು, ಬ್ರಹ್ಮಾವರ, ಕೋಟ, ಬೈಂದೂರು ಹಾಗೂ ಅಜೆಕಾರು ರೈತ ಸಂಪರ್ಕ ಕೇಂದ್ರಗಳಲ್ಲಿ, ಕುಂದಾಪುರ ತಾಲ್ಲೂಕು ವಂಡ್ಸೆ ವಿ.ಎಸ್.ಎಸ್.ಎನ್ ಹಾಗೂ ಹೆಬ್ರಿ ತಾಲ್ಲೂಕು ಕಚೇರಿಯಲ್ಲಿ ನಡೆಯಲಿದೆ. ಡಿ.1 ರಿಂದ ಫೆ.28 ರವರೆಗೆ ಭತ್ತ ಖರೀದಿ ನಡೆಯಲಿದೆ.

ಜಿಲ್ಲೆಯ ರೈತರು ಫ್ರೂಟ್ಸ್ ತಂತ್ರಾಂಶದ ಗುರುತಿನ ಸಂಖ್ಯೆ, ಆಧಾರ್ ಜೋಡಣೆಯ ಬ್ಯಾಂಕ್ ಖಾತೆಯ ಮಾಹಿತಿಯನ್ನು ನೋಂದಣಿ ಕೇಂದ್ರದಲ್ಲಿ ಕೊಟ್ಟು ನೋಂದಾಯಿಸಿಕೊಳ್ಳಬಹುದು.

ಗುಣಮಟ್ಟ ಪರಿವೀಕ್ಷಕರು ಸರ್ಕಾರದ ಮಾನದಂಡದಂತೆ ಎಫ್‌ಎಕ್ಯೂ ಗುಣಮಟ್ಟ ಹೊಂದಿರುವ ಭತ್ತವನ್ನು ಪರಿಶೀಲಿಸಿ, ಖರೀದಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.