ADVERTISEMENT

ಭತ್ತದ ಎರಡನೇ ಬೆಳೆಗೆ ರೈತರ ನಿರಾಸಕ್ತಿ

ಭತ್ತದ ಬೆಳೆಗೆ ಸವಾಲುಗಳು ಹಲವು: ತರಕಾರಿ, ಶೇಂಗಾ, ಉದ್ದಿನ ಬೆಳೆಯತ್ತ ಜಿಲ್ಲೆಯ ರೈತರ ಚಿತ್ತ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 4:16 IST
Last Updated 13 ಡಿಸೆಂಬರ್ 2025, 4:16 IST
ಭತ್ತದ ಬೆಳೆ 
ಭತ್ತದ ಬೆಳೆ    

ಉಡುಪಿ: ಕಾರ್ಮಿಕರ ಕೊರತೆ, ನೀರಿನ ಸಮಸ್ಯೆ, ಕಾಡು ಪ್ರಾಣಿಗಳ ಹಾವಳಿಯಿಂದಾಗಿ ಕರಾವಳಿ ಜಿಲ್ಲೆಯಾದ ಉಡುಪಿಯಲ್ಲಿ ಭತ್ತದ ಎರಡನೇ ಬೆಳೆಯತ್ತ ಹೆಚ್ಚಿನ ರೈತರು ನಿರಾಸಕ್ತಿ ತೋರುತ್ತಿದ್ದಾರೆ.

ಬಹುತೇಕ ರೈತರು ತರಕಾರಿ, ಶೇಂಗಾ, ಉದ್ದಿನ ಬೆಳೆಯನ್ನು ಬೆಳೆಯುವತ್ತ ಆಸಕ್ತಿ ತೋರುತ್ತಿದ್ದಾರೆ. ಎರಡನೇ ಬೆಳೆಯನ್ನು ಕೆಲವೇ ರೈತರು ಬೆಳೆಯುವುದರಿಂದ ಕೊಯ್ಲಿನ ಸಂದರ್ಭದಲ್ಲಿ ಕಟಾವು ಯಂತ್ರಗಳ ಲಭ್ಯತೆಯೂ ಇರುವುದಿಲ್ಲವೆಂಬ ಕಾರಣಕ್ಕೂ ಹಲವರು ಎರಡನೇ ಬೆಳೆಯತ್ತ ಗಮನ ಹರಿಸುತ್ತಿಲ್ಲ.

ಈ ಬಾರಿ ಭತ್ತದ ಮೊದಲ ಬೆಳೆಯ ಕಟಾವು ಸಂದರ್ಭದಲ್ಲಿ ಮಳೆ ಸುರಿದ ಪರಿಣಾಮ ಹಲವೆಡೆ ಬೆಳೆ ನಾಶವಾಗಿತ್ತು. ಮಳೆಯಿಂದಾಗಿ ಭತ್ತದ ಪೈರುಗಳು ನೆಲಕ್ಕೊರಗಿದ ಪರಿಣಾಮ ಯಂತ್ರದ ಮೂಲಕ ಕಟಾವು ಮಾಡಲೂ ಕೆಲವೆಡೆ ಸಮಸ್ಯೆಯಾಗಿತ್ತು.

ADVERTISEMENT

‘ಹಿಂದೆ ಜಿಲ್ಲೆಯಲ್ಲಿ ಭತ್ತದ ಮೂರು ಬೆಳೆ ಬೆಳೆಯಲಾಗುತ್ತಿತ್ತು. ಅನಂತರ ಅದು ಎರಡು ಬೆಳೆಗಳಿಗೆ ಸೀಮಿತವಾಗಿತ್ತು. ಈಗ ಒಂದೇ ಬೆಳೆ ಬೆಳೆಯಲಷ್ಟೇ ರೈತರು ಆಸಕ್ತಿ ತೋರುತ್ತಿದ್ದಾರೆ. ಜಿಲ್ಲೆಯ ಒಟ್ಟು ಭತ್ತ ಬೆಳೆಗಾರರಲ್ಲಿ ಕೇವಲ ಶೇ 10ರಷ್ಟು ರೈತರು ಮಾತ್ರ ಭತ್ತದ ಎರಡನೇ ಬೆಳೆ ಬೆಳೆಯುತ್ತಾರೆ’ ಎಂದು ಭತ್ತ ಬೆಳೆಗಾರ ನಿತ್ಯಾನಂದ ನಾಯಕ್‌ ಶಿರ್ವ ಹೇಳುತ್ತಾರೆ.

‘ಭತ್ತದ ಮೊದಲ ಬೆಳೆ ಅಕ್ಟೋಬರ್‌ ತಿಂಗಳಲ್ಲಿ ಕೊಯ್ಲಿಗೆ ಬರುತ್ತದೆ. ಈ ಸಂದರ್ಭದಲ್ಲಿ ಮಳೆಯೂ ಬರುವುದರಿಂದ ಬಹುತೇಕ ರೈತರು ಹೊಲದಿಂದಲೇ ಭತ್ತವನ್ನು ಮಿಲ್‌ಗಳಿಗೆ ಮಾರಾಟ ಮಾಡುತ್ತಾರೆ. ಭತ್ತವನ್ನು ಒಣಗಿಸುವ ವ್ಯವಸ್ಥೆ, ಗೋದಾಮು ವ್ಯವಸ್ಥೆ ಇಲ್ಲದ ಕಾರಣ ರೈತರು ಕಡಿಮೆ ಬೆಲೆಗೆ ಭತ್ತವನ್ನು ಮಾರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತಿದೆ. ಈ ವೇಳೆ ಸರ್ಕಾರವು ಭತ್ತಕ್ಕೆ ಬೆಂಬಲ ಬೆಲೆಯನ್ನೂ ನಿಗದಿ ಮಾಡಿರುವುದಿಲ್ಲ’ ಎಂದೂ ಅವರು ಹೇಳುತ್ತಾರೆ.

‘ಕರಾವಳಿ ಭಾಗದಲ್ಲಿ ಭತ್ತದ ಬೆಳೆಗೆ ಸೆಪ್ಟೆಂಬರ್ ತಿಂಗಳಲ್ಲಿ ಬೆಂಬಲ ಬೆಲೆ ನಿಗದಿ ಮಾಡಿ ಭತ್ತ ಖರೀದಿ ಕೇಂದ್ರ ಆರಂಭಿಸುವ ಪ್ರಕ್ರಿಯೆ ಶುರು ಮಾಡಿದರೆ ರೈತರಿಗೆ ಅನುಕೂಲವಾಗಲಿದೆ. ಆದರೆ ಸಂಬಂಧಪಟ್ಟವರು ಈ ಕುರಿತು ಗಮನ ಹರಿಸುವುದಿಲ್ಲ. ಡಿಸೆಂಬರ್‌ ತಿಂಗಳಲ್ಲಿ ಖರೀದಿ ಕೇಂದ್ರ ಆರಂಭಿಸಿದರೆ. ಆ ವೇಳೆಗೆ ರೈತರು ಭತ್ತವನ್ನು ಮಾರಾಟ ಮಾಡಿರುತ್ತಾರೆ’ ಎಂದೂ ಅವರು ತಿಳಿಸಿದ್ದಾರೆ.

‘ಜಿಲ್ಲೆಯಲ್ಲಿ ಭತ್ತದ ಬೆಳೆಗೆ ಸೂಕ್ತ ಪ್ರೋತ್ಸಾಹ ಸಿಗುತ್ತಿಲ್ಲ ಇದರಿಂದ ಹೆಚ್ಚಿನ ರೈತರು ಈ ಬೆಳೆ ಬೆಳೆಯಲು ಹಿಂಜರಿಯುತ್ತಿದ್ದಾರೆ. ನವೆಂಬರ್‌ ತಿಂಗಳಲ್ಲಿ ಎರಡನೇ ಬೆಳೆಯ ಭತ್ತವನ್ನು ಬಿತ್ತನೆ ಮಾಡಿದರೆ ಫೆಬ್ರುವರಿ, ಮಾರ್ಚ್‌ ತಿಂಗಳಲ್ಲಿ ಕಟಾವಿಗೆ ಬರುತ್ತದೆ. ಜಿಲ್ಲೆಯಲ್ಲಿ ಹೆಚ್ಚಿನ ರೈತರು ಬಾವಿ ನೀರನ್ನೇ ಆಶ್ರಯಿಸಿದ್ದಾರೆ. ಕೆಲವೆಡೆ ನೀರಿನ ಸಮಸ್ಯೆ ತಲೆದೋರುತ್ತಿರುವುದು ಕೂಡ ರೈತರು ಎರಡನೇ ಬೆಳೆಯಿಂದ ವಿಮುಖರಾಗಲು ಕಾರಣವಾಗಿದೆ’ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ತಿಳಿಸಿದರು.

ಅಳವಡಿಕೆಯಾಗದ ಹಲಗೆ

ಜಿಲ್ಲೆಯಲ್ಲಿ ಬೇಸಿಗೆ ವೇಳೆ ಕೃಷಿ ಚಟುವಟಿಕೆಗಳಿಗೆ ಕಿಂಡಿ ಅಣೆಕಟ್ಟೆಗಳೂ ನೀರಿನಾಸರೆಯಾಗುತ್ತವೆ. ಆದರೆ ಈ ಬಾರಿ ಹಲವೆಡೆ ಇನ್ನೂ ಕಿಂಡಿ ಅಣೆಕಟ್ಟೆಗಳಿಗೆ ಹಲಗೆ ಅಳವಡಿಸದಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಡಿಸೆಂಬರ್‌ ತಿಂಗಳಲ್ಲಿ ಕಿಂಡಿ ಅಣೆಕಟ್ಟೆಗಳಿಗೆ ಹಲಗೆ ಅಳವಡಿಸದಿದ್ದರೆ ನೀರು ಬತ್ತಿ ಹೋಗುವ ಸಾಧ್ಯತೆ ಇರುತ್ತದೆ. ಕೆಲವೆಡೆ ಉಪ್ಪು ನೀರು ಅಣೆಕಟ್ಟೆಗಳ ಮೂಲಕ ಕೃಷಿ ಪ್ರದೇಶಗಳಿಗೂ ಬರುವ ಸಾಧ್ಯತೆ ಇದೆ ಎಂದು ರೈತರು ತಿಳಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಯಲ್ಲೂ ಕಿಂಡಿ ಅಣೆಕಟ್ಟೆಗಳು ಮಹತ್ವದ ಪಾತ್ರ ವಹಿಸುತ್ತವೆ. ಕೆಲವೆಡೆ ಭತ್ತದ ಎರಡನೇ ಬೆಳೆಗೂ ಇದರ ನೀರನ್ನು ಬಳಸುವ ರೈತರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.