ಕಾಪು (ಪಡುಬಿದ್ರಿ): ಇಲ್ಲಿನ ಮೆಸ್ಕಾಂ ಕಚೇರಿಯಲ್ಲಿ ಶನಿವಾರ ನಡೆದ ಜನಸಂಪರ್ಕ ಸಭೆಯಲ್ಲಿ ಗ್ರಾಹಕರ ಕೊರತೆ ಎದ್ದುಕಂಡಿತು.
ಸೆಕ್ಷನ್ ಆಫೀಸರ್ಸ್, ಲೈನ್‌ಮೆನ್‌ಗಳು ಜನಸಂಪರ್ಕ ಸಭೆಯ ಬಗ್ಗೆ ಪುರಸಭೆ, ಗ್ರಾಮ ಪಂಚಾಯಿತಿ ಮತ್ತು ಜನಪ್ರತಿನಿಧಿಗಳಿಗೆ ಹಾಗೂ ಗ್ರಾಹಕರಿಗೆ ಪೂರಕ ಮಾಹಿತಿ ತಲುಪಿಸಬೇಕು. ಅವಶ್ಯ ಬಿದ್ದರೆ ಕರಪತ್ರ, ಬ್ಯಾನರ್‌ಗಳ ಮೂಲಕವೂ ಮಾಹಿತಿ ನೀಡಬೇಕು. ಮುಂದಿನ ಜನಸಂಪರ್ಕ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯ ಗ್ರಾಹಕರು ಪಾಲ್ಗೊಳ್ಳುವಂತೆ ಗಮನ ಹರಿಸಬೇಕು ಎಂದು ಉಡುಪಿ ಮೆಸ್ಕಾಂ ಪ್ರಭಾರ ಅಧೀಕ್ಷಕ ಎಂಜಿನಿಯರ್ (ಪ್ರಭಾರ) ನರಸಿಂಹ ಸೂಚಿಸಿದರು.
ಸ್ಮಾರ್ಟ್ ಕಾರ್ಡ್ ಮೀಟರ್ ಅಳವಡಿಕೆಗೆ ಗ್ರಾಹಕರಿಗೆ ಇರುವ ಗೊಂದಲದ ಬಗ್ಗೆ ಗ್ರಾಹಕ ಅನ್ವರ್ ಅಲಿ ಕಾಪು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ನರಸಿಂಹ ಅವರು, ಹೊಸ ವಿದ್ಯುತ್ ಸಂಪರ್ಕ ಪಡೆಯಲು ಗ್ರಾಹಕರಿಗೆ ಜ. 1ರಿಂದ ಸ್ಮಾರ್ಟ್ ಮೀಟರ್ ಅಳವಡಿಸುವುದು ಕಡ್ಡಾಯವಾಗಿದೆ. ಜನವರಿಯಿಂದ ಪಡೆಯುವ ಹೊಸ ವಿದ್ಯುತ್ ಸಂಪರ್ಕಕ್ಕೆ ಆದೇಶ ಬಂದಿದ್ದು, ದಾವಣಗೆರೆ ಮೂಲದ ಸಂಸ್ಥೆಗೆ ಗುತ್ತಿಗೆ ವಹಿಸಿಕೊಡಲಾಗಿದೆ. ಕಂಪನಿ, ಪ್ರತಿ ಡಿವಿಜನ್‌ನಲ್ಲಿ ಕೇಂದ್ರವನ್ನು ತೆರೆದು ಅಲ್ಲಿ ಸ್ಮಾರ್ಟ್ ಮೀಟರ್ ಪೂರೈಕೆ ಮಾಡಲಾಗುವುದು ಎಂದು ತಿಳಿಸಿದರು.
ಕೆಲವು ಕಡೆಗಳಲ್ಲಿ ಇರುವ ಲೈನ್‌ಮೆನ್‌ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅವರು ಖಾಸಗಿ ಕೆಲಸಕ್ಕೆ ನೀಡುವಷ್ಟು ಪ್ರಾಮುಖ್ಯತೆಯನ್ನು ಸರ್ಕಾರಿ ಕೆಲಸಕ್ಕೆ ನೀಡುತ್ತಿಲ್ಲ. ಈ ಬಗ್ಗೆ ದೂರು ನೀಡಿದರೂ ಪ್ರಯೋಜನವಿಲ್ಲ. 10–15 ವರ್ಷಗಳಿಂದ ಒಂದೇ ಕಡೆ ಕೆಲಸ ಮಾಡುತ್ತಿರುವವರನ್ನು ಬದಲಾಯಿಸಲು ಇಲಾಖೆ ಮುಂದಾಗಬೇಕಿದೆ ಎಂದು ಗ್ರಾಹಕರು ಆಗ್ರಹಿಸಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮೈಕಲ್ ರಮೇಶ್ ಡಿ‘ಸೋಜ ಮಾತನಾಡಿ, ಮುದರಂಗಡಿ, ಪಿಲಾರು, ಸಾಂತೂರು, ಕುತ್ಯಾರು ಪ್ರದೇಶಗಳಲ್ಲಿ ಹಳೇ ಟ್ರಾನ್ಸ್ ಫಾರ್ಮರ್‌ಗಳಿದ್ದು ಈ ಬಗ್ಗೆ ಮನವಿ ಸಲ್ಲಿಸಿದರೂ ಸ್ಪಂದನೆ ಸಿಕ್ಕಿಲ್ಲ. ಈ ಭಾಗದಲ್ಲಿ ಕಾಡು ಪ್ರಾಣಿಗಳ ಓಡಾಟವಿದ್ದು, ಇತ್ತೀಚಿನ ದಿನಗಳಲ್ಲಿ ಕಳ್ಳರ ಹಾವಳಿಯೂ ಹೆಚ್ಚಾಗಿದೆ. ಈ ಬಗ್ಗೆ ಕ್ರಮ ವಹಿಸುವಂತೆ ಮನವಿ ಮಾಡಿದರು.
ತಂತಿಗಳ ಬದಲಾವಣೆಗೆ ಆದ್ಯತೆಯ ಮೇರೆಗೆ ಕ್ರಮ ವಹಿಸಲಾಗುವುದು. ಮೆಸ್ಕಾಂನಲ್ಲಿ ಸಿಬ್ಬಂದಿಗಳ ಕೊರತೆಯಿರುವುದರಿಂದ ಕೆಲವೆಡೆ ಸಮರ್ಪಕ ಕಾರ್ಯನಿರ್ವಹಣೆಗೆ ಅಡ್ಡಿಯಾಗುತ್ತಿದೆ. ಈ ಬಗ್ಗೆ ಮೇಲಧಿಕಾರಿಗಳಿಗೆ ಪತ್ರ ಬರೆಯುವುದಾಗಿ ನರಸಿಂಹ ಉತ್ತರಿಸಿದರು.
ದಿನೇಶ್ ಮೂಳೂರು, ಮುಷ್ತಾಕ್ ಸಾಹೇಬ್, ಶ್ರೀನಿವಾಸ ಕಟಪಾಡಿ, ಶ್ರೀಧರ ಉಚ್ಚಿಲ ಮೊದಲಾದವರು ಸಮಸ್ಯೆಗಳ ಬಗ್ಗೆ ದೂರು ನೀಡಿದರು.
ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಸನ್ನ ಕುಮಾರ್, ಕಾಪು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅರವಿಂದ್ ಕೆ.ಎಸ್., ಸಹಾಯಕ ಎಂಜಿನಿಯರ್ ಆನಂದ್, ಕಾಪು ಸೆಕ್ಷನ್ ಆಫೀಸರ್ ಅಜಯ್, ಕಟಪಾಡಿ ಸೆಕ್ಷನ್ ಆಫೀಸರ್ ರಾಜೇಶ್, ಶಿರ್ವ ಸೆಕ್ಷನ್ ಆಫೀಸರ್ ಮಂಜಪ್ಪ, ಪಡುಬಿದ್ರಿ ಮತ್ತು ಮುದರಂಗಡಿ ಸೆಕ್ಷನ್ ಆಫೀಸರ್ ಮಕ್ತುಂ ಹುಸೇನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.