ಕಾಪು (ಪಡುಬಿದ್ರಿ): ತಾಲ್ಲೂಕಿನ ಪಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ವಿವಿಧೋದ್ದೇಶ ಸೈಕ್ಲೋನ್ ಶೆಲ್ಟರ್‌ನ ಮೌಲ್ಯಮಾಪನ ನಡೆಸಲು ನೀತಿ ಆಯೋಗದ ಮೌಲ್ಯ ಮಾಪಕ ಅನಂತ ಪಂತ್ ತಂಡ ಮಂಗಳವಾರ ಭೇಟಿ ನೀಡಿತು.
ಚಂಡಮಾರುತ, ನೆರೆ, ಬರ ಮೊದಲಾದ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಸಂಬಂಧ 2017ರಲ್ಲಿ ಶೆಲ್ಟರ್ ಅನ್ನು ಸ್ಥಾಪಿಸಲಾಗಿತ್ತು. ಇಲ್ಲಿನ ಕೋಣೆಗಳು, ಅಡುಗೆ ಮನೆ, ಶೌಚಾಲಯ, ನೀರಿನ ವ್ಯವಸ್ಥೆಯನ್ನು ಮೌಲ್ಯಮಾಪಕರು ಪರಿಶೀಲಿಸಿದರು.
ಸಂತ್ರಸ್ತರ ರಕ್ಷಣೆಗೆ ಶ್ಲಾಘನೆ: ಅನಂತ ಪಂತ್ ಮಾತನಾಡಿ, ಸಂತ್ರಸ್ತರಿಗೆ ಉತ್ತಮ ಸವಲತ್ತು ನೀಡಿ, ರಕ್ಷಣಾ ಕಾರ್ಯಾಚರಣೆ ಮಾಡಿರುವುದು ಶ್ಲಾಘನೀಯ. ಕಾಪು ತಾಲ್ಲೂಕಿನಲ್ಲಿ ಈ ಕೇಂದ್ರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ತಹಶೀಲ್ದಾರ್ ಪ್ರತಿಭಾ ಆರ್. ನೇತೃತ್ವದಲ್ಲಿ ರಕ್ಷಣಾ ಕಾರ್ಯ ಮತ್ತು ಕಾಳಜಿ ಕಾರ್ಯ ಅತ್ಯುತ್ತಮವಾಗಿ ನಡೆಯುತ್ತಿದೆ ಎಂದರು.
ಸಂವಾದ: ಅನಂತ ಪಂತ್ ಅವರು ತಾಲ್ಲೂಕಿನ ಜನರೊಂದಿಗೆ ಸಂವಾದ ನಡೆಸಿ ಮೌಲ್ಯಮಾಪನ ಪ್ರಶ್ನಾವಳಿಗಳ ಮೂಲಕ ಉತ್ತರ ಪಡೆದರು.
ಕಾಪು ತಾಲ್ಲೂಕು ಆಡಳಿತ ಮತ್ತು ಪುರಸಭೆಯು ನೆರೆಯ ಸಂದರ್ಭದಲ್ಲಿ ಉತ್ತಮ ಸ್ಪಂದನೆ ನೀಡುತ್ತಾರೆ. ಮಳೆಗಾಲದಲ್ಲಿ ಸದಾ ಸಂಪರ್ಕದಲ್ಲಿರುತ್ತಾರೆ. ಗ್ರಾಮ ಆಡಳಿತಾಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಪುರಸಭೆ ಮುಖ್ಯಾಧಿಕಾರಿ, ತಹಶೀಲ್ದಾರ್ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಿ ಸಂತ್ರಸ್ತರಿಗೆ ಆಸರೆಯಾಗುತ್ತಾರೆ. ನಿಮ್ಮ ಜೊತೆಗೆ ನಾವಿದ್ದೇವೆ ಎಂಬ ಆತ್ಮ ಸ್ಥೈರ್ಯ ತುಂಬುತ್ತಾರೆ ಎಂದು ಸಾರ್ವಜನಿಕರು ಹೇಳಿದರು.
ತಹಶೀಲ್ದಾರ್ ಪ್ರತಿಭಾ ಆರ್. ಮಾತನಾಡಿ, ಮಳೆಗಾಲಕ್ಕೆ ಮೊದಲೇ ತಾಲ್ಲೂಕಿನಲ್ಲಿ ಸಿದ್ಧತೆ ಮಾಡಿಕೊಂಡಿದ್ದೇವೆ. ಸೈಕ್ಲೋನ್ ಶೆಲ್ಟರ್ ಕೇಂದ್ರಗಳನ್ನು ಸರ್ವ ಸನ್ನದ್ಧ ಪರಿಕರಗಳೊಂದಿಗೆ ವ್ಯವಸ್ಥೆ ಮಾಡಿದ್ದು, ನೆರೆ ಸಂತ್ರಸ್ತರ ರಕ್ಷಣೆಯೇ ನಮ್ಮ ಆದ್ಯತೆ. ಆತ್ಮವಿಶ್ವಾಸ ತುಂಬಲು ಎಲ್ಲ ಅಧಿಕಾರಿಗಳೊಂದಿಗೆ ನೆರೆ ಸಂತ್ರಸ್ತರ ರಕ್ಷಣಾ ಕಾರ್ಯದಲ್ಲಿ ತೊಡಗುತ್ತೇವೆ. ಈಗ ನೀತಿ ಆಯೋಗದ ಮೌಲ್ಯಮಾಪಕರು ನಮ್ಮ ಕಾರ್ಯಾಚರಣೆ ಬಗ್ಗೆ ಪ್ರಶಂಸೆ ನೀಡಿರುವುದು ಸ್ಫೂರ್ತಿ ತಂದಿದೆ ಎಂದರು.
ಮೌಲ್ಯಮಾಪನ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ನಾಗರಾಜ್, ಜಿಲ್ಲಾ ಪ್ರಕೃತಿ ವಿಪತ್ತು ನಿರ್ವಹಣಾ ವಿಭಾಗದ ಅಧಿಕಾರಿ ರವಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಪುರಸಭೆ ಸದಸ್ಯರು, ಶಾಲೆಯ ಅಡುಗೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತರು, ಕಂದಾಯ ನಿರೀಕ್ಷಕರಾದ ಇಜ್ಜಾರ್ ಸಾಬಿರ್, ವೆಂಕಟೇಶ್, ಗ್ರಾಮ ಸಹಾಯಕ ದಿಲೀಪ್ ಭಾಗವಹಿಸಿದ್ದರು.
ಸಾರ್ವಜನಿಕರ ಅಳಲು
ನೆರೆ ಉಂಟಾದಾಗ ಎಲ್ಲ ಅಧಿಕಾರಿಗಳು ದೌಡಾಯಿಸುತ್ತಾರೆ. ಆದರೆ ನೆರೆ ಇಳಿದ ನಂತರ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಯಾರೂ ಇರುವುದಿಲ್ಲ. ವಿದ್ಯುತ್ ಸಂಪರ್ಕ ರಸ್ತೆ ಸಂಪರ್ಕ ಇದೆಯೇ ಎಂಬುದರ ಬಗ್ಗೆ ಗಮನ ಹರಿಸಿ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.