ಪಡುಬಿದ್ರಿ: ಉಸ್ತುವಾರಿ ಸಚಿವರಿಂದ ಉದ್ಘಾಟನೆ ನೆರವೇರಬೇಕಿದ್ದ ಪಲಿಮಾರು ಅಂಗನವಾಡಿ ಕಟ್ಟಡದ ಉದ್ಘಾಟನೆ ಸಚಿವರಿಗೆ ಸಮಯದ ಕೊರತೆಯಿಂದಾಗಿ ಶಾಸಕರಿಂದ ಶುಕ್ರವಾರ ನೆರವೇರಿತು.
ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗವಾಗಿ ಕಟ್ಟಡವು ₹16.35 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿತ್ತು. 3 ತಿಂಗಳ ಹಿಂದೆಯೇ ನಿರ್ಮಾಣಗೊಂಡಿರುವ ಕಟ್ಟಡದ ಉದ್ಘಾಟನೆಗೆ ಸರ್ಕಾರದ ಶಿಷ್ಟಾಚಾರ ಪಾಲನೆಯಿಂದ ಉಸ್ತುವಾರಿ ಸಚಿವರಿಗಾಗಿ ಎರಡೆರಡು ಬಾರಿ ಉದ್ಘಾಟನೆ ಮುಂದೂಡಲ್ಪಟ್ಟಿತ್ತು.
ಎಲ್ಲೂರು ಗ್ರಾಮದ ಕುಂಜೂರು, ಪಲಿಮಾರಿನ ಅಂಗನವಾಡಿ ಕೇಂದ್ರ ಉದ್ಘಾಟನೆಗೆ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಸಚಿವರ ಜಿಲ್ಲಾ ಪ್ರವಾಸದ ವೇಳೆ ಉದ್ಘಾಟಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಆ. 15ರಂದು ದಿನ ನಿಗದಿಯಾಗಿತ್ತು. ಸಚಿವರ ಕಾರ್ಯಕ್ರಮ ಪಟ್ಟಿಯಲ್ಲಿ ಕುಂಜೂರು ಅಂಗನವಾಡಿ ಉದ್ಘಾಟನೆ ಮಧ್ಯಾಹ್ನ 2.45 ಮತ್ತು ಪಲಿಮಾರು ಅಂಗನವಾಡಿ ಉದ್ಘಾಟನೆ 3.30ಕ್ಕೆ ಎಂದು ನಿಗದಿ ಮಾಡಲಾಗಿತ್ತು. ಕೊನೆ ಗಳಿಗೆಯಲ್ಲಿ ಕುಂಜೂರು ಅಂಗನವಾಡಿ ಕಟ್ಟಡ ಉದ್ಘಾಟಿಸಿದ ಸಚಿವೆ ಪಲಿಮಾರು ಕಾರ್ಯಕ್ರಮ ಕೈಬಿಟ್ಟು ವಿಮಾನ ನಿಲ್ದಾಣಕ್ಕೆ ತೆರಳಿದರು. ಅವರ ಬರುವಿಕೆಯ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದ ಅಧಿಕಾರಿಗಳು, ಪಲಿಮಾರು ಗ್ರಾಮಾಡಳಿತ, ಗ್ರಾಮಸ್ಥರು ನಿರಾಸೆಗೊಳಗಾದರು.
ಕಟ್ಟಡ ಉದ್ಘಾಟನೆಗಾಗಿ ಬಿಜೆಪಿ ಬೆಂಬಲಿತ ಗ್ರಾಮಾಡಳಿತದಿಂದ ಉಸ್ತುವಾರಿ ಸಚಿವೆ, ಶಾಸಕರ ಭಾವಚಿತ್ರವಿದ್ದ ಫ್ಲೆಕ್ಸ್ ಅಳವಡಿಸಿದ್ದರೆ, ಕಾಂಗ್ರೆಸ್ ಕಾರ್ಯಕರ್ತರಿಂದ ಸಚಿವೆ, ಮುಖಂಡ ವಿನಯ ಕುಮಾರ್ ಸೊರಕೆ ಅವರ ಭಾವಚಿತ್ರದ ಫ್ಲೆಕ್ಸ್ ಅಳವಡಿಸಲಾಗಿತ್ತು.
ಶಾಸಕರಿಂದ ಉದ್ಘಾಟನೆ: ಸಚಿವರು ವಿಮಾನ ನಿಲ್ದಾಣಕ್ಕೆ ತೆರಳಿದ್ದರಿಂದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಪಲಿಮಾರಿಗೆ ಬಂದು ಅಂಗನವಾಡಿ ಕೇಂದ್ರ ಉದ್ಘಾಟಿಸಿದರು. ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್, ಮುಖಂಡ ವಿನಯ ಕುಮಾರ್ ಸೊರಕೆ, ಗ್ರಾ.ಪಂ. ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಉಪಾಧ್ಯಕ್ಷ ರಾಯೇಶ್ವರ ಪೈ, ತಹಶೀಲ್ದಾರ್ ಪ್ರತಿಭಾ ಆರ್, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಶ್ಯಾಮಲಾ, ಪಿಡಿಒ ಶಶಿಧರ ಆಚಾರ್ಯ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನವೀನಚಂದ್ರ ಸುವರ್ಣ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಿರಣ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.