ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿ ಪೇಟೆಯಲ್ಲಿ ನಿತ್ಯ ವಾಹನ ದಟ್ಟಣೆಯಿಂದ ಸಂಚಾರ ವ್ಯತ್ಯಯ ಉಂಟಾಗುತ್ತಿದ್ದು, ಸಾರ್ವಜನಿಕರು ಸಮಸ್ಯೆ ಅನುಭವಿಸುವಂತಾಗಿದೆ.
ಹೆದ್ದಾರಿ ವಿಸ್ತರಣೆಯ ವೇಳೆ ಪಡುಬಿದ್ರಿ ಪೇಟೆಯಲ್ಲಿ ಬೈಪಾಸ್ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿತ್ತು. ಆದರೆ ತೀವ್ರ ವಿರೋಧ ಹಾಗೂ ಬೈಪಾಸ್‌ನಿಂದ ಹಲವು ಕುಟುಂಬ ಭೂಮಿ ಕಳೆದುಕೊಳ್ಳಬೇಕಾಗುತ್ತದೆ ಎನ್ನುವ ಕಾರಣಕ್ಕೆ ಹೆದ್ದಾರಿ ಪ್ರಾಧಿಕಾರ ಬೈಪಾಸ್ ಯೋಜನೆ ಕೈಬಿಟ್ಟಿತ್ತು.
ಬೈಪಾಸ್ ಯೋಜನೆ ಕೈಬಿಟ್ಟ ಬಳಿಕ ಪಡುಬಿದ್ರಿಯಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಭಾರೀ ಬೇಡಿಕೆ ವ್ಯಕ್ತವಾಗಿದೆ. ಆದರೆ ಪ್ರಾಧಿಕಾರ ಪಡುಬಿದ್ರಿ ಪೇಟೆಯಲ್ಲಿಯೇ ರಾಷ್ಟ್ರೀಯ ಹೆದ್ದಾರಿಯನ್ನು ವಿಸ್ತರಿಸಿ ಚತುಷ್ಪಥ ಕಾಮಗಾರಿ ಕೈಗೆತ್ತಿಕೊಂಡಿತು.
ಪೇಟೆಯ ವರ್ತಕರ ಬೇಡಿಕೆಯಂತೆ ಪಡುಬಿದ್ರಿಯಲ್ಲಿ 60 ಮೀಟರ್ ಅಗಲವನ್ನು ಕಿರಿದಾಗಿಸಿ 45 ಮೀಟರ್‌ಗಳಲ್ಲೇ ಸರ್ವೀಸ್ ರಸ್ತೆಯೂ ಸೇರಿದಂತೆ ಹೆದ್ದಾರಿ ಡಿವೈಡರ್ ರಚನೆಯನ್ನು ಪೂರ್ಣಗೊಳಿಸಿತು. ಅದರ ಪರಿಣಾಮವಾಗಿ ಈ ಭಾಗದ ಸಾರ್ವಜನಿಕರು ನಿತ್ಯ ಸಮಸ್ಯೆ ಅನುಭವಿಸುತಿದ್ದಾರೆ.
ರಜಾ ದಿನಗಳಲ್ಲಿ ಹಾಗೂ ವಿಶೇಷ ಹಬ್ಬ, ಹರಿದಿನಗಳಲ್ಲಿ ಹೊರ ರಾಜ್ಯಗಳಿಂದ ಬರುವ ಪ್ರವಾಸಿಗರಿಂದ ವಾಹನಗಳ ಸಂಖ್ಯೆ ಹೆಚ್ಚಾಗುತಿದ್ದು, ಇದರಿಂದ ಕಾರ್ಕಳ-ಮಂಗಳೂರು-ಉಡುಪಿ ಕಡೆ ಸಂಚರಿಸುವ ವಾಹನಗಳು ಪಡುಬಿದ್ರಿ ಪೇಟೆಯ ಮುಖ್ಯ ಜಂಕ್ಷನ್‌ನಲ್ಲಿ ನಿಲುಗಡೆಯಾಗಿ ವಾಹನ ಸವಾರರು ಪರದಾಡುವ ಸ್ಥಿತಿ ಉಂಟಾಗಿದೆ.
ಇಲ್ಲಿ ನಿತ್ಯವೂ ಸುಗಮ ಸಂಚಾರಕ್ಕಾಗಿ ಪೊಲೀಸರು ಹಾಗೂ ಗೃಹರಕ್ಷಕದ ದಳದ ಸಿಬ್ಬಂದಿ ಹರಸಾಹಸ ಪಡುತ್ತಾರೆ. ಸಂಚಾರದಲ್ಲಿ ವ್ಯತ್ಯಯ ಉಂಟಾದಾಗ ಎರ್ಮಾಳು ಕಲ್ಸಂಕ ಹಾಗೂ ನಾಗರಾಜ ಎಸ್ಟೇಟ್‌ವರೆಗೆ ಮೈಲುದ್ದ ವಾಹನಗಳ ಸಾಲು ಕಂಡುಬರುತ್ತದೆ.
ಬೆಳೆಯುತ್ತಿರುವ ಪಟ್ಟಣ: ರಾಷ್ಟ್ರೀಯ ಹೆದ್ದಾರಿ 66 ಹಾಗೂ ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿ 1 ಅನ್ನು ಸಂಪರ್ಕಿಸುವ ರಸ್ತೆಯಾಗಿದೆ. ಎರಡೂ ಪ್ರಮುಖ ರಸ್ತೆ ಸೇರುವ ಜಂಕ್ಷನಲ್ಲಿ ನಿತ್ಯವೂ ಸಾರ್ವಜನಿಕರು ಸಮಸ್ಯೆ ಅನುಭವಿಸುತಿದ್ದಾರೆ.
ಕಾರ್ಕಳ ರಸ್ತೆಗೆ ಹೊಂದಿಕೊಂಡು ಕೈಗಾರಿಕಾ ಪ್ರದೇಶವಿದ್ದು ಅಲ್ಲಿ ವಿವಿಧ ಕಂಪನಿಗಳಿವೆ. ಈ ಕಂಪನಿಗಳ ಬೃಹತ್ ವಾಹನಗಳು ಅಧಿಕ ಸಂಖ್ಯೆಯಲ್ಲಿ ಸಂಚರಿಸುವುದರಿಂದ ಪಡುಬಿದ್ರಿ ಜಂಕ್ಷನ್‌ನಲ್ಲಿ ನಿತ್ಯ ವಾಹನ ದಟ್ಟಣೆ ಉಂಟಾಗುತ್ತಿದೆ.
ನಿಟ್ಟೆಯ ಎಂಜಿನಿಯರಿಂಗ್ ಕಾಲೇಜು ಹಾಗೂ ಹಲವು ಶಾಲೆಗಳ ವಾಹನಗಳು ಕಾರ್ಕಳ ರಸ್ತೆಯಲ್ಲಿ ಸಂಚರಿಸುತ್ತಿದೆ. ಪಡುಬಿದ್ರಿಯಲ್ಲಿ ಸಂಚಾರದಲ್ಲಿ ವ್ಯತ್ಯಯ ಉಂಟಾದಲ್ಲಿ ಶಾಲೆ, ಕಾಲೇಜು, ಕಚೇರಿಗೆ ತೆರಳುವವರು ತಡವಾಗಿ ತೆರಳಬೇಕಾದ ಅನಿವಾರ್ಯತೆ ಇದೆ.
‘ಪ್ರಸ್ತಾವನೆ ಸಲ್ಲಿಕೆ’
ಪಡುಬಿದ್ರಿ ಪೇಟೆ ಭಾಗದಲ್ಲಿ ಫ್ಲೈಓವರ್ ನಿರ್ಮಿಸಬೇಕೆಂದು ಈಗಾಗಲೇ ಪೊಲೀಸ್ ಇಲಾಖೆಯ ಮೂಲಕ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳ ವೀಕ್ಷಣೆ ನಡೆಸಿದ್ದಾರೆ. ಪಡುಬಿದ್ರಿ ಜಂಕ್ಷನ್‌ನಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ಇಬ್ಬರು ಗೃಹ ರಕ್ಷಕ ದಳದ ಸಿಬ್ಬಂದಿ ಹಾಗೂ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಕಾಪು ಪೊಲೀಸ್ ಠಾಣೆಯ ಮೂಲಗಳು ತಿಳಿಸಿವೆ.
‘ವಾಹನ ದಟ್ಟಣೆಗೆ ಪರಿಹಾರ ಬೇಕು’
ಪಡುಬಿದ್ರಿಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಇಲ್ಲಿ ಫ್ಲೈಓವರ್ ಅಥವಾ ಅಂಡರ್ ಪಾಸ್ ಆಗಲೇಬೇಕು. ಈ ಕುರಿತು ಗ್ರಾಮ ಪಂಚಾಯಿತಿಯಿಂದ ಹಲವು ಭಾರಿ ಜಿಲ್ಲಾಡಳಿತಕ್ಕೆ ಹಾಗೂ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದೆ. ಆದರೆ ಇದುವರೆಗೂ ಯಾವುದೇ ಸ್ಪಂದನ ವ್ಯಕ್ತವಾಗಿಲ್ಲ. ಪಡುಬಿದ್ರಿಯಲ್ಲಿ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿಯಿಂದ ನಿತ್ಯವೂ ಅಪಘಾಗಳು ಹೆಚ್ಚಾಗುತ್ತಿವೆ ಎನ್ನುತ್ತಾರೆ ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ವೈ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.