ADVERTISEMENT

ಪಂಚಗಂಗಾವಳಿಯಲ್ಲಿ ಕಡಲ ಹಕ್ಕಿ ಕಲರವ

ಪಕ್ಷಿಪ್ರಿಯರಿಗೆ ಮುದ ನೀಡುತ್ತಿವೆ ಗ್ರೇಟರ್‌ ಕ್ರೆಸ್ಟೆಡ್‌ ಟರ್ನ್‌, ಸೀಗಲ್‌ ಹಕ್ಕಿಗಳು

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 5:47 IST
Last Updated 22 ನವೆಂಬರ್ 2025, 5:47 IST
ಪಂಚಗಂಗಾವಳಿ ನದಿಯ ಬಾನೆತ್ತರದಲ್ಲಿ ಕಡಲ ಹಕ್ಕಿಗಳ ಹಾರಾಟ
ಪಂಚಗಂಗಾವಳಿ ನದಿಯ ಬಾನೆತ್ತರದಲ್ಲಿ ಕಡಲ ಹಕ್ಕಿಗಳ ಹಾರಾಟ   

ಉಡುಪಿ: ಕುಂದಾಪುರದ ಪಂಚಗಂಗಾವಳಿ ನದಿ ಹಾಗೂ ಅದರ ವಿಶಾಲ ಹಿನ್ನೀರು ಪ್ರದೇಶವು ಸಾವಿರಾರು ಕಡಲ ಹಕ್ಕಿಗಳ ತಾಣವಾಗಿ, ಪಕ್ಷಿಪ್ರಿಯರನ್ನು ಆಕರ್ಷಿಸುತ್ತಿದೆ.

ಕೋಡಿ, ಉಪ್ಪಿನ ಕುದ್ರು ಮೊದಲಾದೆಡೆ ನದಿಯಲ್ಲಿ ಇಳಿತದ ವೇಳೆ ತಲೆಯೆತ್ತುವ ಮರಳು ದಿಬ್ಬಗಳಲ್ಲಿ ಕಡಲ ಹಕ್ಕಿಗಳಾದ ಗ್ರೇಟರ್‌ ಕ್ರೆಸ್ಟೆಡ್‌ ಟರ್ನ್‌, ಲೆಸ್ಸರ್‌ ಕ್ರೆಸ್ಟೆಡ್‌ ಟರ್ನ್‌ ಹಾಗೂ ಬ್ರೌನ್‌ ಹೆಡೆಡ್‌ ಗಲ್‌, ಬ್ಲ್ಯಾಕ್‌ ಹೆಡೆಡ್‌ ಗಲ್ ಪ್ರಬೇಧದ ಸಾವಿರಾರು ಹಕ್ಕಿಗಳು ಬೀಡುಬಿಡುತ್ತವೆ.

ಈ ಹಕ್ಕಿಗಳ ಕಲರವ ಆಲಿಸಲು, ರೆಕ್ಕೆ ಬಿಚ್ಚಿ ಹಾರುವ ದೃಶ್ಯವನ್ನು ದಾಖಲಿಸಿಕೊಳ್ಳಲು ರಾಜ್ಯದ ವಿವಿಧೆಡೆಯಿಂದ ಹಕ್ಕಿಗಳ ಛಾಯಾಗ್ರಹಣ ಮಾಡುವವರು, ಹಕ್ಕಿ ವೀಕ್ಷಕರು ಇಲ್ಲಿಗೆ ಬರುತ್ತಾರೆ.

ADVERTISEMENT

ಕುಂದಾಪುರದ ಕೆಲವು ದೋಣಿಯವರು ಪಕ್ಷಿಪ್ರಿಯರನ್ನು ಹೊಳೆಯ ನಡುವಿನ ದಿಬ್ಬಗಳ ಬಳಿ ಕರೆದೊಯ್ಯುತ್ತಾರೆ. ಇದರಿಂದ ಪಕ್ಷಿಪ್ರಿಯರು ಹಕ್ಕಿಗಳ ಚಿನ್ನಾಟವನ್ನು ಹತ್ತಿರದಿಂದ ನೋಡಿ ಆನಂದಿಸುತ್ತಾರೆ.

ಕುಂದಾಪುರದ ಹಿನ್ನೀರು ಪ್ರದೇಶಗಳಲ್ಲಿ ಕಡಲ ಹಕ್ಕಿಗಳು ವರ್ಷಪೂರ್ತಿ ಕಾಣಸಿಗುತ್ತವೆ. ಕೆಲವು ಪ್ರಬೇಧದ ಸೀಗಲ್‌ಗಳು ಮಾತ್ರ ವಲಸೆ ಬರುವ ಹಕ್ಕಿಗಳಾಗಿವೆ ಎನ್ನುತ್ತಾರೆ ಪಕ್ಷಿವೀಕ್ಷಕರು.

ಹಿನ್ನೀರು ಪ್ರದೇಶದಲ್ಲಿ ಯಥೇಚ್ಛವಾಗಿ ಸಿಗುವ ಮತ್ಸಸಂಪತ್ತು ಹಕ್ಕಿಗಳನ್ನು ಆಕರ್ಷಿಸುತ್ತವೆ. ಈ ಕಾರಣಕ್ಕೆ ಅಲ್ಲಿ ಸಾವಿರಾರು ಹಕ್ಕಿಗಳು ಬೀಡು ಬಿಡುತ್ತವೆ ಎಂದೂ ಹೇಳುತ್ತಾರೆ.

ಐದು ನದಿಗಳು ಸೇರುವ ಪಂಚಗಂಗಾವಳಿ ನದಿಯು ಕುಂದಾಪುರದಲ್ಲಿ ಸಮುದ್ರವನ್ನು ಸೇರುತ್ತವೆ. ಪಂಚಗಂಗಾವಳಿಯ ಹಿನ್ನೀರಿನಲ್ಲಿ ಕಾಂಡ್ಲಾ ವನಗಳಿದ್ದು. ಇದು ಕೂಡ ನೂರಾರು ಪ್ರಬೇಧಗಳ ಹಕ್ಕಿಗಳಿಗೆ ಆಶ್ರಯತಾಣವಾಗಿದೆ.

ಪಂಚ ಗಂಗಾವಳಿ ನದಿಯ ಕಾಂಡ್ಲಾವನದ ನಡುವೆ ದೋಣಿ ವಿಹಾರ ಮಾಡಿದರೂ ಹಲವು ಪ್ರಬೇಧದ ಹಕ್ಕಿಗಳು ಕಾಣ ಸಿಗುತ್ತವೆ. ಅದಕ್ಕಾಗಿ ದೋಣಿ ವಿಹಾರಕ್ಕೆಂದು ಬರುವ ಪ್ರವಾಸಿಗರೂ ಇದ್ದಾರೆ. ಕೋಡಿಯಿಂದಲೂ ಕೆಲವು ಬೋಟ್‌ನವರು ಪ್ರವಾಸಿಗರನ್ನು ಕಡಲ ಹಕ್ಕಿಗಳು ಕಾಣಸಿಗುವ ಮರಳಿನ ದಿಬ್ಬದ ಸಮೀಪ ಕರೆದೊಯ್ಯುತ್ತಾರೆ. ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಬಂದರೆ ಸಾವಿರಾರು ಹಕ್ಕಿಗಳನ್ನು ನೋಡಬಹುದು ಎನ್ನುತ್ತಾರೆ ಸ್ಥಳೀಯರು.

ಹಿನ್ನೀರಿನಲ್ಲಿ ನೀರಿನ ಪ್ರಮಾಣ ಹೆಚ್ಚಾದಾಗ ಗ್ರೇಟರ್‌ ಕ್ರೆಸ್ಟೆಡ್‌ ಟರ್ನ್‌ ಹಕ್ಕಿಗಳು ಮೀನುಗಾರರು ನೆಟ್ಟಿರುವ ಕಂಬಗಳಲ್ಲಿ ಸಾಲು ಸಾಲಾಗಿ ಕುಳಿತಿರುತ್ತವೆ. ನೀರಿನ ಮಟ್ಟ ಇಳಿಕೆಯದಾಗ ಮರಳಿನ ದಿಬ್ಬಗಳತ್ತ ತೆರಳುತ್ತವೆ. ಒಮ್ಮೆಲೆ ಸಾವಿರಾರು ಹಕ್ಕಿಗಳು ಆಕಾಶಕ್ಕೆ ಹಾರುವ ದೃಶ್ಯವು ನೋಡುಗರಿಗೆ ಮುದ ನೀಡುತ್ತವೆ.

ಗ್ರೇಟರ್‌ ಕ್ರೆಸ್ಟೆಡ್‌ ಟರ್ನ್‌
ಗ್ರೇಟರ್‌ ಕ್ರೆಸ್ಟೆಡ್‌ ಟರ್ನ್‌
ಕಂಬಗಳಲ್ಲಿ ವಿರಮಿಸುತ್ತಿರುವ ಕಡಲ ಹಕ್ಕಿಗಳು

ಅಳಿವೆ ಪ್ರದೇಶದಲ್ಲಿ ಆಹಾರ ಹುಡುಕುವ ಬಾನಾಡಿಗಳು ವಲಸೆ ಕಡಲ ಹಕ್ಕಿಗಳೂ ಗೋಚರ

‘ಮರಳಿನ ದಿಬ್ಬದಲ್ಲಿ ಹಕ್ಕಿಗಳ ಗುಂಪು’

‘ಸೀಗಲ್‌ ಹಕ್ಕಿಗಳು ಗಾತ್ರದಲ್ಲಿ ದೊಡ್ಡದಿರುತ್ತವೆ ಆದರೆ ಗ್ರೇಟರ್‌ ಕ್ರೆಸ್ಟೆಡ್‌ ಟರ್ನ್‌ ಹಕ್ಕಿಗಳು ಸ್ವಲ್ಪ ಸಣ್ಣದಿರುವ ಕಾರಣ ಅವುಗಳು ಹಿನ್ನೀರಿನಲ್ಲಿ ಮೀನುಗಾರರು ನೆಟ್ಟಿರುವ ಕಂಬಗಳಲ್ಲಿಯೂ ಕೂರುತ್ತವೆ. ಇದರಿಂದ ಆ ಹಕ್ಕಿಗಳನ್ನು ನದಿ ದಡದಿಂದಲೂ ನೋಡಬಹುದಾಗಿದೆ. ಆದರೆ ದೋಣಿಯಲ್ಲಿ ತೆರಳಿ ಮರಳಿನ ದಿಬ್ಬದ ಕಡೆ ಹೋದರೆ  ಹಕ್ಕಿಗಳ ಗುಂಪನ್ನು ಹತ್ತಿರದಿಂದ ನೋಡಬಹುದಾಗಿದೆ’ ಎಂದು ಪಕ್ಷಿ ತಜ್ಞ ವಿ. ಲಕ್ಷ್ಮಿ ನಾರಾಯಣ ಉಪಾಧ್ಯ ತಿಳಿಸಿದರು. ‘ಕುಂದಾಪುರ ಪರಿಸರದ ಹಿನ್ನೀರು ಪ್ರದೇಶಗಳಲ್ಲಿ ಚಳಿಗಾಲದಲ್ಲಿ ಹೆಚ್ಚಾಗಿ ಕಡಲ ಹಕ್ಕಿಗಳು ಕಾಣಸಿಗುತ್ತವೆ. ಕರಾವಳಿಯಲ್ಲಿ ಮಲೆಗಾಲದಲ್ಲಿ ಬಿರುಸಿನ ಮಳೆ ಇರುವುದರಿಂದ ಆ ಸಂದರ್ಭದಲ್ಲಿ ಕೆಲವು ಹಕ್ಕಿಗಳು ಕಾಣಸಿಗುವುದಿಲ್ಲ’ ಎನ್ನುತ್ತಾರೆ ಅವರು. ‘ಕುಂದಾಪುರದ ವ್ಯಾಪ್ತಿಯ ಹಿನ್ನೀರು ಪ್ರದೇಶಕ್ಕೆ ಪ್ರತಿವರ್ಷ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹಕ್ಕಿಗಳೂ ಬರುತ್ತವೆ. ಕ್ರ್ಯಾಬ್‌ ಪ್ಲೋವರ್‌ ಹಕ್ಕಿಯನ್ನೂ ನಾವು ಇಲ್ಲಿ ಗುರುತಿಸಿದ್ದೇವೆ’ ಎಂದೂ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.