
ಶಿರ್ವ: ಕಟಪಾಡಿ ಸಮೀಪದ ಮೂಡಬೆಟ್ಟು ರಾಷ್ಟ್ರೀಯ ಹೆದ್ದಾರಿ 66 ಪಕ್ಕದಲ್ಲಿ ತುಳುನಾಡಿನ ಕಾರಣಿಕ ಪುರುಷರಾದ ಕೋಟಿ ಚೆನ್ನಯರು ಜಲಕ್ರೀಡೆಯಾಡಿದ ಕೆರೆ ಎಂಬ ಐತಿಹ್ಯವಿರುವ ಪಾಂಗಾಳ ಕಟ್ಟಿಕೆರೆ ಅಭಿವೃದ್ಧಿಗೆ ಕೊನೆಗೂ ಚಾಲನೆ ದೊರೆತಿದೆ.
ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಅವರ ಶಿಫಾರಸಿನ ಮೇರೆಗೆ ಸಣ್ಣ ನೀರಾವರಿ ಇಲಾಖೆಯಿಂದ ₹1.5 ಕೋಟಿ ಅನುದಾನದಡಿ ಕೆರೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನಡೆಯುವ ಮೂಲಕ ಜನರ ಬಹುದಿನಗಳ ಕನಸು ನನಸಾಗಲಿದೆ.
ಸಮೃದ್ಧ ನೀರಿನ ಒರತೆ ಹೊಂದಿದ್ದ ಕಟ್ಟಿಕೆರೆ ಹಲವು ವರ್ಷಗಳಿಂದ ಹೂಳು ತುಂಬಿಕೊಂಡು ನೀರಿನಮಟ್ಟ ಕುಸಿದು ಹೋಗಿತ್ತು. ಜನಪದ, ಐತಿಹಾಸಿಕ ಮಹತ್ವ ಹೊಂದಿರುವ ಈ ಕೆರೆಯ ಕಾಲು ಭಾಗದಷ್ಟು ಪ್ರದೇಶ ಹೆದ್ದಾರಿಯೊಂದಿಗೆ ವಿಲೀನಗೊಂಡಿತ್ತು.
ರಾಜವಂಶಸ್ಥರ ಕಾಲದಲ್ಲಿ ಕೇರಳ ಮಾದರಿ ಕೆಂಪುಕಲ್ಲಿನ ಆವರಣ ಗೋಡೆಯೊಂದಿಗೆ ನಿರ್ಮಾಣಗೊಂಡಿದ್ದ ಈ ಕೆರೆ ಅದೇ ಪರಿಸ್ಥಿತಿಯಲ್ಲಿ ಬದಲಾವಣೆ ಕಾಣದ ಐತಿಹಾಸಿಕ ಪಳೆಯುಳಿಕೆಯಾಗಿ ಉಳಿದುಕೊಂಡಿತ್ತು. ಇದೀಗ ಈ ಕೆರೆಗೆ ಕಾಯಕಲ್ಪ ದೊರೆತಿರುವುದು ಜನರಿಗೆ ಸಂತಸ ತಂದಿದೆ.
30 ಅಡಿಗಳಿಗೂ ಅಧಿಕ ಆಳವಿರುವ ವಿಶಾಲವಾದ ಈ ಕೆರೆಯಲ್ಲಿ ಬೇಸಿಗೆಯಲ್ಲಿ ನೀರಿನ ಪ್ರಮಾಣ ಕಡಿಮೆಯಿದ್ದರೂ ಮಳೆಗಾಲದಲ್ಲಿ ತುಂಬಿ ತುಳುಕುತ್ತದೆ. ಕಟ್ಟಿಕೆರೆ ಸಂಪೂರ್ಣವಾಗಿ ಅಭಿವೃದ್ಧಿಗೊಂಡಲ್ಲಿ ಈ ಪ್ರದೇಶದಲ್ಲಿನ ಅನೇಕ ಕೃಷಿ ಕುಟುಂಬಗಳಿಗೆ ನೀರಿನ ಆಶ್ರಯ ದೊರೆಯಲಿದೆ.
600 ವರ್ಷಗಳ ಹಿಂದೆ ಪಡುಮಲೆಯಿಂದ ಬಿಲ್ವಿದ್ಯೆ ಕಲಿಯಲು ಕೋಟಿ ಚನ್ನಯರು ಪಾಂಗಾಳ ಕಟ್ಟಿಕೆರೆ ಸಮೀಪದ ನಾನಯರ ಗರಡಿಗೆ ಬಂದಿರುವುದು ಜನಪದ ಇತಿಹಾಸದಲ್ಲಿ ಉಲ್ಲೇಖವಿದೆ. ಕೋಟಿ ಚನ್ನಯರು ಪ್ರಬುದ್ಧರಾದಾಗ ಮಾವ ಸಾಯನ ಬೈದ್ಯರಲ್ಲಿ ಬಿಲ್ವಿದ್ಯೆ ಕಲಿಯಲು ಯಾವ ಗರಡಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಪ್ರಶ್ನಿಸಿದರು. ಆಗ ಸಾಯನ ಬೈದ್ಯರು ತೆಂಕಣದಲ್ಲಿ ಪುತ್ತೂರು ತಾಲ್ಲೂಕಿನ ಪೇರ್ ಪೆರ್ಮುಂಡೆ ಗರಡಿಯಿದೆ. ಬಡಗಿನಲ್ಲಿ ಉಡುಪಿ ತಾಲ್ಲೂಕಿನ ಪಾಂಗಾಳ ನಾನಯರ ಗರಡಿಯಿದೆ ಎಂದು ಮಾಹಿತಿ ನೀಡಿದ್ದರು. ಅಂತಿಮವಾಗಿ ಕೋಟಿ ಚನ್ನಯರು ಪಾಂಗಾಳ ನಾನಯರ ಗರಡಿ ಆಯ್ಕೆ ಮಾಡಿ 12 ವರ್ಷಗಳ ಕಾಲ ಗುರು ಬಲಿಪ ನಾನಯ ಮತ್ತು ಪಿಲಿಪ ನಾನಯರಲ್ಲಿ ಬಿಲ್ವಿದ್ಯೆ, ಮಲ್ಲವಿದ್ಯೆ ಕಲಿತು ಕಟ್ಟಿಕೆರೆಯಲ್ಲಿ ಜಲಕ್ರೀಡೆ ಆಡುತ್ತಿದ್ದರು ಎಂದು ಜನಪದದಲ್ಲಿ ಉಲ್ಲೇಖವಿದೆ. ಕಟ್ಟಿಕೆರೆಯಲ್ಲಿ ಅನೇಕ ಮಲ್ಲ ಜಟ್ಟಿಗಳು ಈಜಾಟ ನಡೆಸಿದ್ದರಿಂದ ಜಟ್ಟಿಕೆರೆ ಎಂಬುದಾಗಿ ಕೂಡಾ ಹೆಸರಿತ್ತು ಎಂದು ಹೇಳಲಾಗುತ್ತಿದೆ.
ಐತಿಹಾಸಿಕ ನಾನಯರ ಗರಡಿ ಇತ್ತೀಚೆಗೆ ಪುನರ್ ನವೀಕರಣಗೊಂಡು ಭವ್ಯವಾಗಿ ಕಂಗೊಳಿಸುತ್ತಿದೆ. ಈ ಗರಡಿಗೆ ಸಂಬಂಧಪಟ್ಟ ಕಟ್ಟಿಕೆರೆಗೆ ಕಾಯಕಲ್ಪ ದೊರೆಯಬೇಕು ಎಂಬುದು ನಾನಯರ ಗರಡಿಗೆ ಸಂಬಂಧಪಟ್ಟವರ, ಗ್ರಾಮಸ್ಥರ ಮಹತ್ವಾಕಾಂಕ್ಷೆ ಆಗಿತ್ತು. ಈ ಕೆರೆಯು ಇತಿಹಾಸ ಪ್ರಸಿದ್ಧ ಕಟಪಾಡಿ ಕಂಬಳ ನಡೆಸುವ ಕಟಪಾಡಿ ಬೀಡು ಮನೆತನ, ಮೂಡಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಪಟ್ಟಿದೆ.
ಐತಿಹಾಸಿಕ ಸ್ಮಾರಕ ಉಳಿಸಿಕೊಳ್ಳುವ ಪ್ರಯತ್ನ: ‘ಐತಿಹಾಸಿಕ, ವೀರ ಪುರುಷರಾದ ಕೋಟಿ ಚನ್ನಯರು ಸಾಧಕ ವಿದ್ಯೆಗಳನ್ನು ಕಲಿತ ಪವಿತ್ರವಾದ ಕಟ್ಟಿಕೆರೆಯನ್ನು ಅಭಿವೃದ್ಧಿಗೊಳಿಸಲು ಉದ್ದೇಶಿಸಲಾಗಿದೆ. ಸಣ್ಣ ನೀರಾವರಿ ಇಲಾಖೆಯಿಂದ ₹1.5 ಕೋಟಿ ಅನುದಾನದಡಿ ಅಭಿವೃದ್ಧಿಗೊಳಿಸುವ ಮೂಲಕ ಪುರಾತನ ಆಸ್ತಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ’ ಎಂದು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.