ADVERTISEMENT

ಉಡುಪಿ | ‘ಅಸಲಿ ಕಂಚಿನ ಪರಶುರಾಮ ಮೂರ್ತಿ ನಿರ್ಮಾಣವಾಗಲಿ’: ಉದಯ್ ಕುಮಾರ್‌ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 5:17 IST
Last Updated 5 ಆಗಸ್ಟ್ 2025, 5:17 IST
ಉದಯ್ ಕುಮಾರ್‌ ಶೆಟ್ಟಿ
ಉದಯ್ ಕುಮಾರ್‌ ಶೆಟ್ಟಿ   

ಉಡುಪಿ: ‘ಕಾರ್ಕಳದ ಪ್ರಸಿದ್ಧಿಗೆ ಕಲಶಪ್ರಾಯವಾಗಬೇಕಿದ್ದ ಪರಶುರಾಮ ಥೀಮ್‌ ಪಾರ್ಕ್‌ ಶಾಸಕ ಸುನಿಲ್‌ ಕುಮಾರ್‌ ಅವರ ರಾಜಕೀಯ ಹಿತಾಸಕ್ತಿಗೆ ಬಲಿಯಾಗಿದೆ. ಬೈಲೂರಿನಲ್ಲಿ ಅಸಲಿ ಕಂಚಿನ ಮೂರ್ತಿ ನಿರ್ಮಾಣವಾಗಬೇಕು’ ಎಂದು ಕಾಂಗ್ರೆಸ್‌ ಮುಖಂಡ ಮುನಿಯಾಲು ಉದಯ್ ಕುಮಾರ್‌ ಶೆಟ್ಟಿ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಜನರ ನಂಬಿಕೆ ಉಳಿಯಬೇಕಾದರೆ ಅಲ್ಲಿ ಮತ್ತೆ ಪರಶುರಾಮ ಮೂರ್ತಿ ನಿರ್ಮಾಣವಾಗುವುದು ಅನಿವಾರ್ಯವಾಗಿದೆ. ಈ ಕಾರಣಕ್ಕೆ ಮೂರ್ತಿ ಪುನರ್‌ ನಿರ್ಮಾಣ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೇನೆ’ ಎಂದರು.

‘ನಾನು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದರಿಂದ ಶಾಸಕರು ಆತಂಕಕ್ಕೆ ಒಳಗಾಗಿದ್ದಾರೆ. ಅದಕ್ಕಾಗಿ ಅರ್ಜಿಗೆ ವಿನಾಕಾರಣ ವಿರೋಧ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

‘ಚುನಾವಣೆಯಲ್ಲಿ ಗೆಲ್ಲಬೇಕು ಎನ್ನುವ ದುರಾಲೋಚನೆಯಿಂದ  ಶಾಸಕರು ಪರಶುರಾಮ ಮೂರ್ತಿ ನಿರ್ಮಾಣ ಮಾಡಿ ಕಾರ್ಕಳದ ಜನತೆಗೆ ಮತ್ತು ಸರ್ಕಾರಕ್ಕೆ ಮೋಸ ಮಾಡಿದ್ದಾರೆ’ ಎಂದರು.

‘ಕಂಚಿನ ಮೂರ್ತಿ ನಿರ್ಮಾಣ ಮಾಡುತ್ತೇನೆಂದು ಜನತೆಗೆ ಮಾತು ನೀಡಿದ್ದ ಶಾಸಕರು, ಕಂಚಿನಿಂದ ಮೂರ್ತಿ ನಿರ್ಮಿಸದೆ ಫೈಬರ್‌ ಮತ್ತಿತರ ವಸ್ತುಗಳಿಂದ ನಿರ್ಮಾಣ ಮಾಡಿರುವುದು ಜನರಿಗೆ ಎಸಗಿದ ದ್ರೋಹ’ ಎಂದಿದ್ದಾರೆ.

‘ಕಂಚಿನಿಂದಲೇ ಪ್ರತಿಮೆ ನಿರ್ಮಾಣ ಮಾಡಲಾಗಿದೆ ಎಂದು ಶಾಸಕರು ಸಮರ್ಥನೆ ಮಾಡುತ್ತಾ ಬಂದಿದ್ದಾರೆ. ಆದರೆ ಪೊಲೀಸರು ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ಮೂರ್ತಿ ಕಂಚಿನದ್ದಲ್ಲ ಎಂಬ ವಿಚಾರ ಬಹಿರಂಗವಾಗಿದೆ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಕೃಷ್ಣಮೂರ್ತಿ ಆಚಾರ್ಯ, ಸೂರಜ್‌ ಶೆಟ್ಟಿ, ಸುಬಿತ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.