ADVERTISEMENT

ಕಾರ್ಕಳದ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಕಳವು; ಶಾಸಕರ ಸಂಚು: ಉದಯ್ ಕುಮಾರ್ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 2:59 IST
Last Updated 7 ಜನವರಿ 2026, 2:59 IST
ಉದಯ್ ಕುಮಾರ್ ಶೆಟ್ಟಿ
ಉದಯ್ ಕುಮಾರ್ ಶೆಟ್ಟಿ   

ಉಡುಪಿ: ‘ಕಾರ್ಕಳದ ಬೈಲೂರಿನ ಪರಶುರಾಮ ಥೀಮ್ ಪಾರ್ಕ್‌ನಿಂದ ತಾಮ್ರದ ಹೊದಿಕೆ ಕಳವಾಗಿರುವ ಪ್ರಕರಣವು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಇದು ಶಾಸಕ ಸುನಿಲ್‌ ಕುಮಾರ್‌ ಮಾಡಿದ ಸಂಚಾಗಿರಬಹುದು’ ಎಂದು ಕಾಂಗ್ರೆಸ್‌ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗುವ ಮೊದಲೇ ಸುನಿಲ್‌ ಕುಮಾರ್‌ ಅವರು ತಮ್ಮ ಫೇಸ್‌ಬುಕ್‌ ಖಾತೆಯ ಮೂಲಕ ಕಳ್ಳತನವಾಗಿರುವ ಕುರಿತು ಮಾಹಿತಿ ಹಂಚಿಕೊಂಡಿದ್ದು ಹೇಗೆ? ಪ್ರಥಮ ಮಾಹಿತಿ ಅವರಿಗೆ ಹೇಗೆ ಸಿಕ್ಕಿತು’ ಎಂದು ಅವರು ಪ್ರಶ್ನಿಸಿದರು.

‘ಮರುದಿನ ಶಾಸಕರು ಮತ್ತು ತಂಡ ಪರಶುರಾಮ ಮೂರ್ತಿ ಇರುವ ಬೆಟ್ಟಕ್ಕೆ ಹೋಗಿ ಮಾಧ್ಯಮದವರ ಜೊತೆ ಮಾತನಾಡಿರುವ ವಿಚಾರಗಳನ್ನು ಗಮನಿಸಿದರೆ ಇದು ಪೂರ್ವಯೋಜಿತ ಕೃತ್ಯ ಎನ್ನುವುದು ದೃಢವಾಗುತ್ತದೆ’ ಎಂದರು.

ADVERTISEMENT

‘ಬೆಟ್ಟದ ಸಭಾಂಗಣವೊಂದರಲ್ಲಿ ಲಕ್ಷಾಂತರ ಮೌಲ್ಯದ ಸೊತ್ತುಗಳಿದ್ದರೂ ಅದನ್ನು ಬಿಟ್ಟು, ಕಟ್ಟಡದ ಮೇಲ್ಚಾವಣಿಗೆ ಹಾಕಿದ 30 ತಾಮ್ರದ ತಗಡುಗಳನ್ನು ಕಳವು ಮಾಡಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ’ ಎಂದು ಹೇಳಿದ್ದಾರೆ.

‘ಪರಶುರಾಮ ಥೀಮ್‌ ಪಾರ್ಕ್‌ ಪ್ರವಾಸಿ ಕೇಂದ್ರವಾಗಬೇಕು ಎಂಬ ಉದ್ದೇಶದಿಂದ ನಾನು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೇನೆ. ಮತ್ತು ₹5 ಲಕ್ಷ ಪಾವತಿಸಿದ್ದೇನೆ’ ಎಂದರು.

‘ಥೀಮ್‌ ಪಾರ್ಕ್‌ ಯೋಜನೆಯನ್ನು ಆರಂಭಿಸುವಾಗಲೇ ಸುನಿಲ್‌ ಕುಮಾರ್‌ ಅವರು ಪ್ರಮಾಣಿಕವಾಗಿ ಪ್ರತಿಮೆ ನಿರ್ಮಿಸಿದ್ದರೆ, ಇಂದು ಇಂತಹ ದುಃಸ್ಥಿತಿ ಬರುತ್ತಿರಲಿಲ್ಲ’ ಎಂದು ತಿಳಿಸಿದರು.

‘ಥೀಮ್‌ ಪಾರ್ಕ್‌ನಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಬೇಕೆಂದು ಹೋರಾಟಗಾರರು ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ, ಅಳವಡಿಸದಿರುವುದು ಜಿಲ್ಲಾಡಳಿತದ ಬೇಜವಾಬ್ದಾರಿಯಾಗಿದೆ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಶುಭದ್‌ ರಾವ್‌, ಗೋಪಿನಾಥ್‌ ಭಟ್‌, ಭಾನು ಭಾಸ್ಕರ್‌ ಪೂಜಾರಿ ಉಪಸ್ಥಿತರಿದ್ದರು.