ADVERTISEMENT

ಉಡುಪಿ | ಬಂಗಾರವು ತೇಜಸ್ಸು, ಪರಿಶುದ್ಧಿಯ ಪ್ರತೀಕ: ಪುತ್ತಿಗೆ ಶ್ರೀ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 7:59 IST
Last Updated 27 ಡಿಸೆಂಬರ್ 2025, 7:59 IST
ಪಾರ್ಥಸಾರಥಿ ಸುವರ್ಣ ರಥದ ಶೋಭಾಯಾತ್ರೆ ನಡೆಯಿತು
ಪಾರ್ಥಸಾರಥಿ ಸುವರ್ಣ ರಥದ ಶೋಭಾಯಾತ್ರೆ ನಡೆಯಿತು   

ಉಡುಪಿ: ಲೋಹಗಳಲ್ಲಿ ಅತ್ಯಂತ ಶ್ರೇಷ್ಠವಾದ ಲೋಹ ಚಿನ್ನವಾಗಿದೆ. ಯಾವ ಕಾಲದಲ್ಲೂ ಅದು ಮಲಿನವಾಗದೆ ಶುದ್ಧವಾಗಿರುತ್ತದೆ ಮತ್ತು ತೇಜಸ್ಸಿನ, ಪರಿಶುದ್ಧಿಯ ಪ್ರತೀಕವಾಗಿದೆ. ಅಂತಹ ಪರಿಶುದ್ಧ ವಸ್ತುವಿನಿಂದ ದೇವರ ಆರಾಧನೆ ಮಾಡಬೇಕು ಎಂಬ ಉದ್ದೇಶದಿಂದ ದೇವರಿಗೆ ಚಿನ್ನದ ರಥ ಸಮರ್ಪಣೆ ಮಾಡಲಾಗಿದೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶುಕ್ರವಾರ ನಡೆದ ಪಾರ್ಥಸಾರಥಿ ಸುವರ್ಣ ರಥದ ಸಮರ್ಪಣೋತ್ಸವದಲ್ಲಿ ಅವರು ಮಾತನಾಡಿದರು.

ಪೂಜೆಯಲ್ಲೂ ಚಿನ್ನದ ವಸ್ತುಗಳಿಗೆ ಮಹತ್ವವಿದೆ. ಕನಕಪ್ರಿಯ ಕೃಷ್ಣನಿಗೆ ಚಿನ್ನದ ರಥ ಸಮರ್ಪಣೆ ಮಾಡಬೇಕೆಂಬುದು ನಮ್ಮ ಪರ್ಯಾಯದ ಸಂಕಲ್ಪವೂ ಆಗಿತ್ತು ಎಂದರು.

ADVERTISEMENT

ಕೃಷ್ಣ ಮಠದ ಸಮಗ್ರ ಅಭಿವೃದ್ಧಿ ಮಾಡಬೇಂಬ ಎಂಬ ಉದ್ದೇಶದಿಂದ 60 ಸ್ನಾನಗೃಹಗಳನ್ನು ಹಾಗೂ ಫ್ಲೈಓವರ್‌ ನಿರ್ಮಿಸಲಾಗಿದೆ. ಕೃಷ್ಣನ ಉಡುಪಿ ಸುಂದರ ಉಡುಪಿಯಾಗಬೇಕೆಂಬ ಉದ್ದೇಶದಿಂದ ನಮ್ಮ ಪರ್ಯಾಯದಲ್ಲಿ ಶ್ರಮಿಸಿದ್ದೇವೆ ಎಂದು ತಿಳಿಸಿದರು.

ಮಂತ್ರಾಲಯ ಶ್ರೀ ರಾಘವೇಂದ್ರ ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥ ಶ್ರೀಪಾದರು, ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಶಾಸಕ ಯಶ್‌ಪಾಲ್‌ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್‌, ನ್ಯಾ. ಗುರುರಾಜ್‌, ಹರಿದಾಸ್ ಭಟ್‌, ಗೋ. ಮಧುಸೂದನ್‌, ರಾಜೇಶ್‌ ಶೆಟ್ಟಿ, ಹರಿನಾರಾಯಣ ಅಸ್ರಣ್ಣ, ರಾಮಕೃಷ್ಣ ಆಚಾರ್ಯ, ಗಿರಿಧರ, ಜ್ಞಾನೇಶ್ವರ್‌, ಪಾದೇಬೆಟ್ಟು ಸುಬ್ರಹ್ಮಣ್ಯ ಆಚಾರ್ಯ, ಸೂರ್ಯನಾರಾಯಣ ಉಪಾಧ್ಯಾಯ, ಜಯಕರ ಶೆಟ್ಟಿ , ಮಠದ ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ಉಪಸ್ಥಿತರಿದ್ದರು. ಗೋಪಾಲಾಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ನಗರದ ಜೋಡುಕಟ್ಟೆಯಿಂದ ರಾಜಾಂಗಣದ ವರೆಗೆ ಸುವರ್ಣ ರಥದ ಶೋಭಾಯಾತ್ರೆ ನಡೆಯಿತು. ಮಂತ್ರಾಲಯ ಶ್ರೀ ರಾಘವೇಂದ್ರ ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥ ಶ್ರೀಪಾದರು ಶೋಭಾಯಾತ್ರೆಗೆ ಚಾಲನೆ ನೀಡಿದರು.

Highlights - ಮಂತ್ರಾಲಯ ಶ್ರೀಗಳಿಗೆ ಪುತ್ತಿಗೆ ಶ್ರೀಗಳಿಂದ ಸನ್ಮಾನ ವೈಭವದ ಸುವರ್ಣ ರಥ ಶೋಭಾಯಾತ್ರೆ ರಾಜಾಂಗಣದಲ್ಲಿ ಸಂಗೀತ ಕಾರ್ಯಕ್ರಮ

Cut-off box - ‘ಭಗವದ್ಗೀತೆ ಎಲ್ಲರಿಗೂ ಮನನೀಯ’ಮಂತ್ರಾಲಯ ಶ್ರೀ ರಾಘವೇಂದ್ರ ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥ ಶ್ರೀಪಾದರು ಮಾತನಾಡಿ ಭಗವದ್ಗೀತೆಯ ತ್ವತ್ವ ಸಿದ್ಧಾಂತ ಎಲ್ಲರಿಗೂ ಮನನೀಯವಾದುದು. ಕರ್ತವ್ಯ ಪ್ರಜ್ಞೆ ಮೂಡಿಸಿ ಕರ್ತವ್ಯ ವಿಮುಖತೆ ಪರಿಹಾರ ಮಾಡುವ ಅದರ ತತ್ವಗಳು ಮನುಕುಲಕ್ಕೆ ಅಗತ್ಯ ಎಂದರು. ಶ್ರೀಕೃಷ್ಣನು ಅರ್ಜುನನ್ನು ನಿಮಿತ್ತವಾಗಿಟ್ಟುಕೊಂಡು ಇಡೀ ಜಗತ್ತಿಗೆ ಭಗವದ್ಗೀತೆಯ ಸಂದೇಶವನ್ನು ಉಣಬಡಿಸಿದ್ದಾನೆ ಎಂದು ಹೇಳಿದರು. ಗೀತೆಯ ಮಹತ್ವವನ್ನು ಪ್ರತಿಯೊಬ್ಬರಿಗೂ ತಲುಪಿಸುವ ಕೆಲಸವನ್ನು ಪುತ್ತಿಗೆ ಶ್ರೀಗಳು ಮಾಡಿದ್ದಾರೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.