ADVERTISEMENT

ಬನ್ನಂಜೆ ಸಂಜೀವ ಸುವರ್ಣರಿಗೆ ‘ಪಾರ್ತಿಸುಬ್ಬ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 10:41 IST
Last Updated 14 ಸೆಪ್ಟೆಂಬರ್ 2024, 10:41 IST
<div class="paragraphs"><p>ಬನ್ನಂಜೆ ಸಂಜೀವ ಸುವರ್ಣ</p></div>

ಬನ್ನಂಜೆ ಸಂಜೀವ ಸುವರ್ಣ

   

–ಪ್ರಜಾವಾಣಿ ವಾರ್ತೆ

ಉಡುಪಿ: ಕರ್ನಾಟಕ ಯಕ್ಷಗಾನ ಅಕಾಡೆಮಿಯ 2023ನೇ ಸಾಲಿನ ಪ್ರಶಸ್ತಿಗಳು ಪ್ರಕಟವಾಗಿದ್ದು, ‘ಪಾರ್ತಿಸುಬ್ಬ ಪ್ರಶಸ್ತಿ’ಗೆ ಯಕ್ಷಗಾನ ಗುರು ಉಡುಪಿಯ ಬನ್ನಂಜೆ ಸಂಜೀವ ಸುವರ್ಣ ಆಯ್ಕೆಯಾಗಿದ್ದಾರೆ.

ADVERTISEMENT

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಪ್ರಶಸ್ತಿ ಪಟ್ಟಿ ಬಿಡುಗಡೆ ಮಾಡಿದ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಪಾರ್ತಿಸುಬ್ಬ ಪ್ರಶಸ್ತಿಯು ₹1ಲಕ್ಷ ನಗದು ಒಳಗೊಂಡಿದೆ ಎಂದರು.

ಯಕ್ಷಗಾನ ಕಲಾವಿದರಾದ ದಿನೇಶ್‌ ಅಮ್ಮಣ್ಣಾಯ, ಎಂ. ಜಬ್ಬಾರ್‌ ಸಮೋ, ಪೊಲ್ಯ ಲಕ್ಷ್ಮಿನಾರಾಯಣ ಶೆಟ್ಟಿ, ಚೆನ್ನಪ್ಪ ಗೌಡ ಸಜಿಪ, ಮೂಡಲಪಾಯ ಯಕ್ಷಗಾನ ಭಾಗವತ ನಾರಾಯಣಪ್ಪ ಎ.ಆರ್. ಅವರನ್ನು ಅಕಾಡೆಮಿಯ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ತಲಾ ₹50 ಸಾವಿರ ನಗದು ಒಳಗೊಂಡಿದೆ ಎಂದು ತಿಳಿಸಿದರು.

ಅಕಾಡೆಮಿಯ ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ರಘುನಾಥ ಶೆಟ್ಟಿ ಬಾಯಾರು, ದಿವಾಕರ ದಾಸ ಕಾವಳಕಟ್ಟೆ, ಸುಬ್ರಾಯ ಪಾಟಾಳಿ ಸಂಪಾಜೆ, ನರಾಡಿ ಭೋಜರಾಜ ಶೆಟ್ಟಿ, ಸದಾನಂದ ಪ್ರಭು, ಹೊಳೆಮಗೆ ನಾಗಪ್ಪ ಮರಕಾಲ, ಶಿರಳಗಿ ತಿಮ್ಮಪ್ಪ ಹೆಗಡೆ, ಬಾಬು ಕುಲಾಲ್‌ ಹಳ್ಳಾಡಿ, ಶಿವಯ್ಯ, ಜೀಯಪ್ಪ ಅವರನ್ನು ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿಯು ತಲಾ ₹25 ಸಾವಿರ ನಗದನ್ನು ಒಳಗೊಂಡಿದೆ ಎಂದರು.

ದತ್ತಿನಿಧಿ ಪ್ರಶಸ್ತಿ ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ಪ್ರಶಸ್ತಿಗೆ ಗೋಪಾಲಕೃಷ್ಣ ಶಂಕರ ಭಟ್‌ ಜೋಗಿಮನೆ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ₹25ಸಾವಿರ ನಗದನ್ನು ಒಳಗೊಂಡಿದೆ ಎಂದು ವಿವರಿಸಿದರು.

2022ನೇ ಸಾಲಿನ ಪುಸ್ತಕ ಬಹುಮಾನಕ್ಕೆ ವಿದ್ವಾನ್‌ ಗಣಪತಿ ಭಟ್‌, ಮನೋರಮಾ ಬಿ.ಎನ್‌. ಹಾಗೂ 2023ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಸತೀಶ್‌ ಜಿ. ನಾಯ್ಕ ಮತ್ತು ಎಚ್‌ . ಸುಜಯೀಂದ್ರ ಹಂದೆ ಅವರನ್ನು ಆಯ್ಕೆ ಮಾಡಲಾಗಿದ್ದು, ಈ ಬಹುಮಾನವು ತಲಾ ₹25 ಸಾವಿರ ನಗದನ್ನು ಒಳಗೊಂಡಿದೆ ಎಂದು ಹೇಳಿದರು.

ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್‌ 2ನೇ ಅಥವಾ 3ನೇ ವಾರದಲ್ಲಿ ಮಂಗಳೂರಿನ ಟೌನ್‌ಹಾಲ್‌ನಲ್ಲಿ ನಡೆಯಲಿದೆ ಎಂದರು.

ಅಕಾಡೆಮಿ ರಿಜಿಸ್ಟ್ರಾರ್‌ ನಮ್ರತಾ ಎನ್‌., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.