
ಪರ್ಯಾಯ ದರ್ಬಾರ್‌ಗೂ ಮೊದಲು ಅರಳು ಗದ್ದಿಗೆ ಸಾಂಪ್ರಾದಯಿಕ ದರ್ಬಾರ್ ನಡೆಯಿತು
ಉಡುಪಿ: ‘ನಮ್ಮ ಧರ್ಮದ ಮೂಲ ಗ್ರಂಥಗಳು ವೇದಗಳು. ಅವುಗಳ ರಕ್ಷಣೆ ಮತ್ತು ಪೋಷಣೆಯಿಂದ ಭಗವಂತ ಸಂತೃಪ್ತನಾಗುತ್ತಾನೆ. ವೇದ ಪಂಡಿತರ ಪೋಷಣೆಗೆ ಪರ್ಯಾಯದಲ್ಲಿ ಆದ್ಯತೆ ನೀಡಲಾಗುವುದು’ ಎಂದು ಪರ್ಯಾಯ ಶೀರೂರು ಮಠದ ವೇದವರ್ಧನ ಶ್ರೀಪಾದರು ಹೇಳಿದರು.
ಸರ್ವಜ್ಞ ಪೀಠಾರೋಹಣದ ಬಳಿಕ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಭಾನುವಾರ ನಡೆದ ಸಾಂಪ್ರದಾಯಿಕ ದರ್ಬಾರ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ವೇದಗಳು ನಮಗೆ ಅರ್ಥವಾಗುವುದಿಲ್ಲ ಎಂಬ ಕಾರಣಕ್ಕೆ ಮಹಾಭಾರತ, ರಾಮಾಯಣ, ಭಗವದ್ಗೀತೆ ಮೊದಲಾದ ಗ್ರಂಥಗಳು ಅದರ ಅರ್ಥ ಹೇಳಲು ಬಂದಿವೆ’ ಎಂದರು.
‘ವೇದವನ್ನು ನಾವು ಉಳಿಸಬೇಕು ಆ ಮೂಲಕ ಕೃಷ್ಣನ ಅನುಗ್ರಹಕ್ಕೆ ಪಾತ್ರವಾಗಬೇಕು. ನಮ್ಮ ಪರ್ಯಾಯದ ಎರಡು ವರ್ಷಗಳಲ್ಲಿ ಈ ಕೆಲಸ ನಡೆಯಲಿದೆ’ ಎಂದು ತಿಳಿಸಿದರು.
‘ಕೃಷ್ಣನ ಪೂಜೆ ಮಾಡುವುದು ದೊಡ್ಡ ಯಾಗ ಮಾಡಿದಂತೆ. ಮಧ್ವಾಚಾರ್ಯಾರು ಕೃಷ್ಣನನ್ನು ಬರೀ ಪೂಜೆ ಮಾಡುವುದಕ್ಕಾಗಿ ಪ್ರತಿಷ್ಠಾಪಿಸಿಲ್ಲ, ಪೂಜೆಯ ಜೊತೆಗೆ ಕೃಷ್ಣನ ಸಂದೇಶವೂ ನಮಗೆ ಗೊತ್ತಾಗಬೇಕೆಂಬುದು ಅವರ ಉದ್ದೇಶವಾಗಿತ್ತು’ ಎಂದರು.
‘ಮಧ್ವಾಚಾರ್ಯರು ಜನರ ಸೇವೆ ಮತ್ತು ಜನಾರ್ದನನ ಸೇವೆ ಮಾಡಬೇಕು ಎಂದು ಹೇಳಿದ್ದಾರೆ. ಎಲ್ಲರೊಳಗೂ ಪರಮಾತ್ಮ ಇದ್ದಾನೆ ಎಂಬ ಚಿಂತನೆ ನಮ್ಮಲ್ಲಿ ಮೂಡಲು ಜನರ ಸೇವೆ ಮಾಡಬೇಕು. ಎಲ್ಲಾ ಮುನುಷ್ಯರನ್ನೂ, ಪ್ರಾಣಿಗಳನ್ನೂ ಪ್ರೀತಿಸುವ ಮೂಲಕ ಪರಮಾತ್ಮನ ಆರಾಧನೆ ಮಾಡಬೇಕು’ ಎಂದು ತಿಳಿಸಿದರು.
ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಶ್ರೀಪಾದರು, ಪಲಿಮಾರು ಮಠದ ಹಿರಿಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಕಾಣಿಯೂರು ಮಠದ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಸೋದೆ ಮಠದ ವಿಶ್ವವಲ್ಲಭತೀರ್ಥ ಶ್ರೀಪಾದರು, ಅದಮಾರು ಮಠದ ಕಿರಿಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹಾಗೂ ಫಲಿಮಾರು ಮಠದ ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ದರ್ಬಾರ್‌ನಲ್ಲಿ ಪಾಲ್ಗೊಂಡಿದ್ದರು.
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳಿ, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.