
ಮಂದಾರ್ತಿ(ಬ್ರಹ್ಮಾವರ): ತಾಲ್ಲೂಕಿನ ಹೆಗ್ಗುಂಜೆ ಗ್ರಾಮ ಪಂಚಾಯಿತಿಯಲ್ಲಿ ಪೂರ್ಣ ಪ್ರಮಾಣದ ಅವಧಿಗೆ ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿಯನ್ನು ನೇಮಿಸುವಂತೆ ಹೆಗ್ಗುಂಜೆ ಶಿರೂರು ಗ್ರಾಮದ ಗ್ರಾಮಸ್ಥರಿಂದ ಆಗ್ರಹ ಕೇಳಿ ಬಂದಿದೆ.
ಬ್ರಹ್ಮಾವರ ತಾಲ್ಲೂಕು ಕೇಂದ್ರದಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ಹೆಗ್ಗುಂಜೆ ಗ್ರಾ.ಪಂ. ಸುಮಾರು 5 ಸಾವಿರ ಜನಸಂಖ್ಯೆ ಹೊಂದಿದೆ. ಪ್ರಸಿದ್ಧ ಪುಣ್ಯ ಕ್ಷೇತ್ರ ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನವೂ ಸೇರಿದಂತೆ ಶಿಕ್ಷಣ ಸಂಸ್ಥೆಗಳು, ವ್ಯವಸಾಯ ಸೇವಾ ಸಹಕಾರಿ ಸಂಘ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಇಲ್ಲಿದೆ.
ಶಿರೂರು, ಮಂದಾರ್ತಿ, ಹೆಗ್ಗುಂಜೆಯ ಜನತೆ ಪ್ರತಿದಿನ ಒಂದಿಲ್ಲ ಒಂದು ಕೆಲಸಕ್ಕೆ ಪಂಚಾಯಿತಿಗೆ ಬರುತ್ತಾರೆ. ಆದರೆ ಕಳೆದ ಮೂರ್ನಾಲ್ಕು ತಿಂಗಳಿನಿಂದ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿದ್ದು, ಇದೀಗ ಪ್ರಭಾರ ಪಿಡಿಒ ಅವರನ್ನು ನಿಯುಕ್ತಿಗೊಳಿಸಲಾಗಿದೆ. ಇನ್ನೊಂದೆಡೆ ಕಾರ್ಯದರ್ಶಿ ಅವರನ್ನು ನಿಯುಕ್ತಿ ಗೊಳಿಸಲಾಗಿದೆಯಾದರೂ ಅವರ ಆರೋಗ್ಯ ಸರಿ ಇಲ್ಲದ ಕಾರಣ ರಜೆಯಲ್ಲಿದ್ದು, ಆ ಹುದ್ದೆಗೂ ಪ್ರಭಾರ ಕಾರ್ಯದರ್ಶಿಯವರನ್ನು ನೇಮಿಸಲಾಗಿದೆ.
ಇದರಿಂದ ಗ್ರಾಮೀಣ ಭಾಗದ ಜನರು 9/11, ಕಟ್ಟಡ ನಿರ್ಮಾಣದ ಪರವಾನಗಿ ಮುಂತಾದ ಅಗತ್ಯ ಕೆಲಸಗಳಿಗೆ ಕಾಯಬೇಕಾದ ಪರಿಸ್ಥಿತಿ ಇದೆ. ಆದ್ದರಿಂದ ಇಲ್ಲಿ ಪೂರ್ಣ ಪ್ರಮಾಣದಲ್ಲಿ ಪಿಡಿಒ ಮತ್ತು ಕಾರ್ಯದರ್ಶಿಯನ್ನು ನೇಮಿಸಿ ಜನರ ಸಮಸ್ಯೆಗೆ ಕೂಡಲೇ ಪರಿಹಾರ ಒದಗಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪಂಚಾಯಿತಿ ಅಧ್ಯಕ್ಷ ರಾಮಕೃಷ್ಣ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 1800 ಕ್ಕೂ ಅಧಿಕ ಮನೆಗಳಿವೆ. ಮೂಲ ಹಕ್ಕುಗಳಿಗಾಗಿ ಜನರು ಅವಲಂಬಿಸಿಕೊಂಡಿರುವ ಗ್ರಾಮ ಪಂಚಾಯಿತಿಯಲ್ಲಿ ಕಾಯಂ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಯ ಅವಶ್ಯಕತೆ ಎದ್ದು ತೋರುತ್ತಿದೆ’ ಎಂದು ತಿಳಿಸಿದರು.
‘ಉದ್ಯೋಗ ಹಾಗೂ ದೂರದೂರಿನಲ್ಲಿ ವಾಸವಾಗಿರುವ ಸ್ಥಳೀಯ ಗ್ರಾಮಸ್ಥರು ತಮ್ಮ ಕೆಲಸಗಳಿಗಾಗಿ ಪಂಚಾಯಿತಿಗೆ ಭೇಟಿ ನೀಡಿದಾಗ ಅಧಿಕಾರಿಗಳಿಲ್ಲದೆ ವಾಪಾಸ್ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಗ್ರಾಮಸ್ಥ ಪ್ರಮೋದ್ ಶೆಟ್ಟಿ ತಿಳಿಸಿದರು.
‘ಮಂದಾರ್ತಿ ಜಾತ್ರೆ ಮತ್ತು ಇನ್ನಿತರ ಉತ್ಸವದ ಸಂದರ್ಭದಲ್ಲಿ ಪಂಚಾಯಿತಿಯು ಪ್ರಮುಖ ಪಾತ್ರವಹಿಸುತ್ತದೆ. ಇಲ್ಲಿ ಆಡಳಿತ ವ್ಯವಸ್ಥೆ ನೋಡಿಕೊಳ್ಳಲು ಪೂರ್ಣ ಪ್ರಮಾಣದ ಪಿಡಿಒ, ಕಾರ್ಯದರ್ಶಿಯವರ ನೇಮಕವಾಗಲಿ ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ’ ಎಂದು ಗ್ರಾಮಸ್ಥ ಕೊಶೋರ್ ಕುಮಾರ್ ತಿಳಿಸಿದ್ದಾರೆ.
ಹಲವಡೆ ಪ್ರಭಾರ ಪಿಡಿಒಗಳು
ಬ್ರಹ್ಮಾವರ ತಾಲ್ಲೂಕಿನಲ್ಲಿ 27 ಜನ ಪಿಡಿಒಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲು ನೇಮಕಾತಿಯಾಗಿದ್ದರೂ ಕೆಲವರು ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಯ ಬೇರೆ ಬೇರೆ ಕೆಲಸಕ್ಕೆ ನಿಯೋಜನೆಗೊಂಡಿದ್ದಾರೆ. ತಾಲ್ಲೂಕಿನ ಉಪ್ಪೂರು ವಾರಂಬಳ್ಳಿ ಚಾಂತಾರು ಹಂದಾಡಿ ಹಾರಾಡಿ ಹೆಗ್ಗುಂಜೆ ಐರೋಡಿ ಕರ್ಜೆ ಮುಂತಾದ ಪಂಚಾಯಿತಿಗಳಲ್ಲಿ ಪ್ರಭಾರ ಪಿಡಿಒ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.