
ಉಡುಪಿ: ನಗರದ ನೇತ್ರ ಜ್ಯೋತಿ ಕಾಲೇಜಿನಲ್ಲಿ ಫಿಸಿಯೊಥೆರಪಿ ಕ್ಲಿನಿಕ್ ಅನ್ನು ಮಣಿಪಾಲ ಕಾಲೇಜು ಆಫ್ ಹೆಲ್ತ್ ಸೈನ್ಸ್‌ನ ಡೀನ್ ಡಾ.ಅರುಣ್ ಮಯ್ಯ ಶುಕ್ರವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ವ್ಯಕ್ತಿಗೆ ಮೊದಲ ಉಸಿರಿನಿಂದ ಕೊನೆಯ ಉಸಿರು ಇರುವವರೆಗೆ ಫಿಸಿಯೊಥೆರಪಿ ಚಿಕಿತ್ಸೆಯ ಅವಶ್ಯಕತೆ ಇದೆ. ಎಷ್ಟು ವರ್ಷ ಬದುಕಿದ್ದೇವೆ ಎನ್ನುವುದಕ್ಕಿಂತ ಎಷ್ಟು ವರ್ಷ ಆರೋಗ್ಯವಂತರಾಗಿ ಬದುಕಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ ಎಂದು ಹೇಳಿದರು.
ಬಡಗುಬೆಟ್ಟು ಕ್ರೆಡಿಟ್ ಕೊಆಪರೇಟಿವ್ ಸೊಸೈಟಿ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಮಾತನಾಡಿ, ಬದಲಾದ ವೈದ್ಯಕೀಯ ಕ್ಷೇತ್ರದಲ್ಲಿ ಶಸ್ತ್ರಚಿಕಿತ್ಸೆಗಿಂತ ಫಿಸಿಯೊಥೆರಪಿಯಂತಹ ಚಿಕಿತ್ಸೆಗಳು ಹೆಚ್ಚು ಪರಿಣಾಮಕಾರಿ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನೇತ್ರ ಜ್ಯೋತಿ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಡಾ.ಕೃಷ್ಣಪ್ರಸಾದ್ ಕೂಡ್ಲು, ವೈದ್ಯಕೀಯ ಕ್ಷೇತ್ರ ಪರಿಪೂರ್ಣತೆಯನ್ನು ಪಡೆಯಬೇಕಾದರೆ ಅರೆ ವೈದ್ಯಕೀಯ ಸಿಬ್ಬಂದಿ ಪಾತ್ರ ಬಹಳ ಮುಖ್ಯ ಎಂದರು.
ಕಾಲೇಜಿನ ಅಧ್ಯಕ್ಷೆ ರಶ್ಮಿ ಕೃಷ್ಣಪ್ರಸಾದ್ ಮಾತನಾಡಿ, ಇಂದಿನ ಯಾತ್ರೀಕೃತ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಆರೋಗ್ಯ ಸಮಸ್ಯೆ ಜನರನ್ನು ಕಾಡುತ್ತಿದೆ. ನೇತ್ರ ಜ್ಯೋತಿ ಕಾಲೇಜಿನಲ್ಲಿ ಅನೇಕ ವೈದ್ಯಕೀಯ ಕೋರ್ಸ್‌ಗಳ ಜೊತೆಗೆ ಫಿಸಿಯೋಥೆರಪಿ ಕಾಲೇಜನ್ನು ಸ್ಥಾಪಿಸಿದ್ದು, ಅದಕ್ಕೆ ಪೂರಕವಾಗುವಂತೆ ಫಿಸಿಯೋಥೆರಪಿ ಕ್ಲಿನಿಕ್ ಪ್ರಾರಂಭಿಸಿದ್ದೇವೆ ಎಂದು ಹೇಳಿದರು.
ಉಜ್ವಲ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಪುರುಷೋತ್ತಮ ಶೆಟ್ಟಿ, ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗೌರಿ ಪ್ರಭು ಮಾತನಾಡಿದರು. ನೇತ್ರ ಜ್ಯೋತಿ ಚಾರಿಟಬಲ್ ಟ್ರಸ್ಟ್‌ನ ಟ್ರಸ್ಟಿ ರಘುರಾಮ್ ರಾವ್ ಪಾಲ್ಗೊಂಡಿದ್ದರು. ಕಾಲೇಜಿನ ಸಂಯೋಜಕ ಮಾಧವ ಪೂಜಾರಿ ಸ್ವಾಗತಿಸಿದರು. ಉಪನ್ಯಾಸಕಿ ಶ್ರಾವ್ಯಾ ವಂದಿಸಿದರು. ಉಪನ್ಯಾಸಕಿ ಶ್ರುತಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.