ADVERTISEMENT

ಉಡುಪಿ | ಬಾಲಕಿ ಮೇಲೆ ಅತ್ಯಾಚಾರ: ಅಪರಾಧಿಗೆ ಜೀವಿತಾವಧಿ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2024, 16:15 IST
Last Updated 8 ಆಗಸ್ಟ್ 2024, 16:15 IST
<div class="paragraphs"><p>ಜೈಲು ಶಿಕ್ಷೆ(ಪ್ರಾತಿನಿಧಿಕ ಚಿತ್ರ)</p></div>

ಜೈಲು ಶಿಕ್ಷೆ(ಪ್ರಾತಿನಿಧಿಕ ಚಿತ್ರ)

   

ಉಡುಪಿ: ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣದ ಅಪರಾಧಿಗೆ ಪೋಕ್ಸೊ ನ್ಯಾಯಾಲಯವು ಜೀವಿತಾವಧಿ (ಜೀವ ಇರುವತನಕ) ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ.

ಬಂಗಾಳ ಮೂಲದ ಕೂಲಿಕಾರ್ಮಿಕ ಮುಫಿಜುಲ್ ಎಸ್.ಕೆ.(23) ಶಿಕ್ಷೆಗೆ ಗುರಿಯಾದ ವ್ಯಕ್ತಿ

ADVERTISEMENT

ಪಡುಬಿದ್ರಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಕಾರ್ಮಿಕನಾಗಿ ಕೆಲಸ ಮಾಡಲು ಈತ ಬಂದಿದ್ದ.

ಇದೇ ಕಟ್ಟಡದ ಕೆಲಸಕ್ಕೆ ಬಂಗಾಳ ಮೂಲದ ಕೂಲಿ ಕಾರ್ಮಿಕರು ಬಂದಿದ್ದರು.  ನೊಂದ ಬಾಲಕಿ ತನ್ನ ತಂದೆ, ತಾಯಿಯೊಂದಿಗೆ ಕಟ್ಟಡದ 3ನೇ ಮಹಡಿಯ ಕೋಣೆಯಲ್ಲಿ ವಾಸ ಇದ್ದಳು. ಆರೋಪಿ ಕೂಡ ಅಲ್ಲಿಯೇ ವಾಸಿಸುತ್ತಿದ್ದ. ಈ ವೇಳೆ ಆತ ನೊಂದ ಬಾಲಕಿಯನ್ನು ತನ್ನ ಕೋಣೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದು, ಬಾಲಕಿ ಅಳಲು ಪ್ರಾರಂಭಿಸಿದಾಗ ಸ್ಥಳದಿಂದ ಪರಾರಿಯಾಗಿದ್ದ. ಈ ವಿಚಾರವನ್ನು ಆಕೆ ತನ್ನ ಪೋಷಕರಿಗೆ ತಿಳಿಸಿದ ಮೇರೆಗೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ದೂರು ನೀಡಲಾಗಿತ್ತು.

ಅದರಂತೆ ತನಿಖೆ ಕೈಗೊಂಡ ಅಂದಿನ ಪೊಲೀಸ್ ಇನ್‌ಸ್ಪೆಕ್ಟರ್‌ ಪೂವಯ್ಯ ಕೆ.ಸಿ. ಅವರು ಆರೋಪಿಯ ವಿರುದ್ಧ ದೋಷಾರೋಣೆ ಸಲ್ಲಿಸಿದ್ದರು. ಒಟ್ಟು 30 ಸಾಕ್ಷಿಗಳ ಪೈಕಿ 17 ಸಾಕ್ಷಿಗಳ ವಿಚಾರಣೆ ಮಾಡಲಾಗಿತ್ತು.

ನೊಂದ ಬಾಲಕಿಯ ಸಾಕ್ಷ್ಯ ಮತ್ತು ಸಾಂದರ್ಭಿಕ ಸಾಕ್ಷ್ಯ ಮತ್ತು ಇತರ ಸಾಕ್ಷಿಗಳನ್ನು ಪರಿಗಣಿಸಿದ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಅವರು ಆರೋಪಿಯು ತಪ್ಪಿತಸ್ಥ ಎಂದು ಮನಗೊಂಡು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ಅವರು ವಾದ ಮಂಡಿಸಿದ್ದರು.

ಈ ಪ್ರಕರಣದಲ್ಲಿ ನೊಂದ ಬಾಲಕಿಯು ಕೇವಲ ಬಂಗಾಳಿ ಭಾಷೆ ಮಾತ್ರ ತಿಳಿದಿದ್ದಳು. ಈ ಕಾರಣಕ್ಕೆ ಅಭಿಯೋಜನೆ ಪರ ಸಾಕ್ಷಿ ಹೇಳಲು ಮಣಿಪಾಲ ಸೆಂಟರ್ ಫಾರ್ ಯುರೋಪಿಯನ್ ಸ್ಟಡೀಸ್ ಮಾಹೆಯ ಅಸಿಸ್ಟೆಂಟ್ ಪ್ರೊಫೆಸರ್ ರಿಚಾ ಗುಪ್ತ ಅವರು ಭಾಷಾಂತರಕಾರರಾಗಿ ವಿಚಾರಣೆ ವೇಳೆ ಸಹಕರಿಸಿದ್ದರು.

ಅಪರಾಧಿಗೆ ಒಟ್ಟು ₹20 ಸಾವಿರ ದಂಡ ವಿಧಿಸಿದ್ದು, ಸರ್ಕಾರದಿಂದ ನೊಂದ ಬಾಲಕಿಗೆ ₹3 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.