
ಕುಂದಾಪುರ: ‘ಖಾಕಿ ಕಾರ್ಟೂನ್’ ಹೆಸರಿನಲ್ಲಿ ಪೊಲೀಸ್ ಸೇವೆಯನ್ನು ವಿಶಿಷ್ಟ ರೀತಿಯಲ್ಲಿ ಗುರುತಿಸಿ, ಗೌರವಿಸಲಾಗುತ್ತಿರುವುದು ಅಭಿನಂದನಾರ್ಹ ಎಂದು ಉಡುಪಿ ಬಾಳಿಗ ಆಸ್ಪತ್ರೆಯ ಮನೋವೈದ್ಯ ಡಾ. ಪಿ.ವಿ. ಭಂಡಾರಿ ಹೇಳಿದರು.
ಇಲ್ಲಿನ ಬೋರ್ಡ್ ಹೈಸ್ಕೂಲಿನ ರೋಟರಿ ಕಲಾಮಂದಿರದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಸಹಭಾಗಿತ್ವದೊಂದಿಗೆ ನ. 15ರಿಂದ 19ರವರೆಗೆ ನಡೆಯುವ ‘ಖಾಕಿ ಕಾರ್ಟೂನ್ ಹಬ್ಬ’ದ ಅಂಗವಾಗಿ ಭಾನುವಾರ ಸಂಜೆ ನಡೆದ ‘ಸಾಧಕರ ಸನ್ಮಾನ ಹಾಗೂ ಬಹುಮಾನ ವಿತರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದ ಆಗುಹೋಗುಗಳ ನಡುವೆ, ಪೊಲೀಸರ ಒತ್ತಡದ ಕರ್ತವ್ಯ ಕಾಣಿಸುತ್ತಿದೆ. ಸಮಾಜಕ್ಕೆ ಅರ್ಪಣಿಯಾಗಿರುವ ಪೊಲೀಸರಿಗೆ ಕಾರ್ಯಕ್ರಮವನ್ನು ಅರ್ಪಿಸಿ, ಅವರನ್ನು ಅಭಿನಂದಿಸುವ ಕೆಲಸವನ್ನು ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಮತ್ತು ಅವರ ಸ್ನೇಹಿತರು ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಯುವ ವ್ಯಂಗ್ಯ ಚಿತ್ರಕಾರರನ್ನು ಬೆಳೆಸುವ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕುಂದಾಪುರದಲ್ಲಿ 12ನೇ ವರ್ಷಗಳಿಂದ ನಡೆಯುತ್ತಿರುವ ಕಾರ್ಟೂನು ಹಬ್ಬ ದೇಶದಲ್ಲಿಯೇ ಉತ್ತಮ ಪ್ರಯೋಗ’ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾತನಾಡಿ, ‘ದೇಶದಲ್ಲಿ ಮೊದಲ ಬಾರಿ ಪೊಲೀಸರೊಂದಿಗೆ ಈ ರೀತಿಯ ಕಾರ್ಯಕ್ರಮ ಆಯೋಜನೆಯಾಗಿದೆ. ಬೆಳಿಗ್ಗೆಯಿಂದ ರಾತ್ರಿಯವರೆಗೆ ಕರ್ತವ್ಯ ನಿರ್ವಹಿಸುವ ಪೊಲೀಸರನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಕೆಟ್ಟದಾಗಿ ಚಿತ್ರಿಸಲಾಗುತ್ತಿದೆ. ಆದರೆ, ವಾಸ್ತವವಾಗಿ ಹಾಗಿರೋದಿಲ್ಲ. ಐಪಿಎಸ್ ಅಧಿಕಾರಿಗಳು ಮಾತ್ರ ಹೀರೋಗಳಲ್ಲ, ಸಾಮಾನ್ಯ ಪೊಲೀಸರೂ ನಿಜವಾದ ಹೀರೋಗಳು. ಗೃಹ ಸಚಿವರ ಮಹತ್ವಾಕಾಂಕ್ಷೆಯ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದಡಿ ಜಿಲ್ಲೆಯ 3.10 ಲಕ್ಷ ಮನೆಗೆ ಪೊಲೀಸರು ಭೇಟಿ ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳ ಕ್ಯಾರಿಕೇಚರ್ ನೀಡುತ್ತಿರುವುದು ಸ್ವಾಗತಾರ್ಹ. ಸಾರ್ವಜನಿಕ ಕಾರ್ಯಕ್ರಮವೊಂದು ಪೊಲೀಸರಿಗೆ ಅರ್ಪಣೆ ಮಾಡಿರುವುದು ಅಭಿನಂದನಾರ್ಹ’ ಎಂದರು.
ಪುರಸಭೆ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ಪತ್ರಕರ್ತ ಜಯಶೇಖರ ಮಡಪ್ಪಾಡಿ ಹಾಗೂ ಶಂಕರನಾರಾಯಣ ಮದರ್ ತೆರೆಸಾ ಶಾಲೆಯ ಶಮಿತಾ ರಾವ್ ಮಾತನಾಡಿದರು. ಪೊಲೀಸ್ ಇಲಾಖೆಯ ಆರ್ಮಡ್ ರಿಸರ್ವ್ ಎಸ್‌ಐ ಶಂಕರ್, ಆರ್ಮಡ್ ಹೆಡ್‌ಕಾನ್‌ಸ್ಟೇಬಲ್‌ಗಳಾದ ರಾಜೇಶ್, ಅಶೋಕ್ ಪಾಟ್ಕರ್, ಆರ್ಮಡ್ ಕಾನ್‌ಸ್ಟೇಬಲ್ ಸಂತೋಷ್ ಕುಮಾರ್, ವ್ಯಂಗ್ಯ ಚಿತ್ರಕಾರ ಚಂದ್ರ ಕೋಡಿ, ಮಿಸ್ ಇಂಡಿಯಾ ಫ್ರೈಡ್ ಆಫ್ ಇಂಡಿಯಾ ವಿಜೇತೆ ನಿಶಾಲಿ ಯು. ಕುಂದರ್, ಬಸ್ ಪಾರ್ಸೆಲ್ ನಿರ್ವಾಹಕ ಸಿರಾದಿಲ್ ಸಾಹೇಬ್ (ಸೀರಾಜ್) ಅವರನ್ನು ಸನ್ಮಾನಿಸಲಾಯಿತು. ರೋಹಿತ್ ನಾಯ್ಕ್ ಅವರನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ನಡೆದ ಕಾರ್ಟೂನ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಉಪನ್ಯಾಸಕಿ ರೋಹಿಣಿ ನಿರೂಪಿಸಿದರು. ಕಾರ್ಟೂನ್ ಹಬ್ಬದ ಸಂಘಟಕ, ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ವಂದಿಸಿದರು.
ಕಾರ್ಟೂನ್ ತರಬೇತಿ ಲೈವ್ ಕ್ಯಾರಿಕೇಚರಿಂಗ್ ವ್ಯಸನ ಬಿಡಿಸಲು ಮಾರ್ಗದರ್ಶನ
ವಿಶ್ವದ ನಾಲ್ಕು ಪ್ರಸಿದ್ಧ ವ್ಯಂಗ್ಯ ಚಿತ್ರಕಾರರಲ್ಲಿ ಒಬ್ಬರಾದ ಸತೀಶ್ ಆಚಾರ್ಯ ಕುಂದಾಪುರದವರು ಎನ್ನುವ ಹೆಮ್ಮೆ ಇದೆ
-ರಾಜೇಶ್ ಕಾವೇರಿ ಮಾಜಿ ಉಪಾಧ್ಯಕ್ಷ ಪುರಸಭೆ
ಸಮವಸ್ತ್ರದ ಬದುಕಿನ ಹೊರತಾದ ವೈಯಕ್ತಿಕ ಬದುಕೂ ಇರುವ ಪೊಲೀಸರ ಭಾವನೆ ಹಾಗೂ ಬದುಕನ್ನು ಗೌರವಿಸುವ ಕೆಲಸವಾಗುತ್ತಿದೆ
-ಜಯಶೇಖರ ಮಡಪ್ಪಾಡಿ ಪತ್ರಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.