ADVERTISEMENT

‘ಕೈ’ ಬಿಟ್ಟು ‘ಕಮಲ’ ಹಿಡಿದ ಪ್ರಮೋದ್ ಮಧ್ವರಾಜ್‌

ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆ: ಕಾಂಗ್ರೆಸ್‌ಗೆ ಹೊಡೆತ

ಬಾಲಚಂದ್ರ ಎಚ್.
Published 7 ಮೇ 2022, 19:30 IST
Last Updated 7 ಮೇ 2022, 19:30 IST
ಪ್ರಮೋದ್ ಮಧ್ವರಾಜ್‌
ಪ್ರಮೋದ್ ಮಧ್ವರಾಜ್‌   

ಉಡುಪಿ: ರಾಜಕೀಯದಲ್ಲಿ ಎರಡು ದೋಣಿಗಳ (ಕಾಂಗ್ರೆಸ್‌, ಬಿಜೆಪಿ) ಮೇಲೆ ಕಾಲಿರಿಸಿದ್ದ ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಮುಖಂಡರಾಗಿದ್ದ ಪ್ರಮೋದ್ ಮಧ್ವರಾಜ್ ಕೊನೆಗೂ ಬಿಜೆಪಿ ದೋಣಿಯನ್ನೇರಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ರಾಜೀನಾಮೆ ಪತ್ರ ರವಾನಿಸಿರುವ ಪ್ರಮೋದ್ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ತ್ಯಜಿಸಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಕಾಂಗ್ರೆಸ್‌ಗೆ ಹೊಡೆತ:

ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರ ಹಾಗೂ ಉಡುಪಿ ನಗರಸಭೆ ಸೇರಿದಂತೆ ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ನೆಲೆ ಕಳೆದುಕೊಂಡಿರುವ ಕಾಂಗ್ರೆಸ್‌ ಪಕ್ಷಕ್ಕೆ ಪ್ರಮೋದ್ ಮಧ್ವರಾಜ್‌ ರಾಜೀನಾಮೆ ದೊಡ್ಡ ಪೆಟ್ಟು ಕೊಟ್ಟಿದೆ. ವಿಧಾನಸಭಾ ಚುನಾವಣೆಗೆ ಒಂದು ವರ್ಷ ಮಾತ್ರ ಬಾಕಿ ಇರುವಾಗ ಪ್ರಮೋದ್ ಪಕ್ಷಕ್ಕೆ ವಿದಾಯ ಹೇಳಿರುವುದು ತುಂಬಲಾರದ ನಷ್ಟ ಎಂದೇ ವಿಶ್ಲೇಷಿಸಲಾಗುತ್ತಿದೆ.

ADVERTISEMENT

ಇದ್ದೂ ಇಲ್ಲದಂತಿದ್ದರು:

2018ರ ವಿಧಾನಸಭಾ ಚುನಾವಣೆ ಹಾಗೂ 2019ರ ಲೋಕಸಭಾ ಚುನಾವಣೆಯ ಬಳಿಕ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್‌ನಲ್ಲಿ ಇದ್ದರೂ ಇಲ್ಲದಂತೆಯೇ ಇದ್ದರು. ಪಕ್ಷದ ಸಭೆ, ಸಮಾರಂಭ ಹಾಗೂ ಕಾರ್ಯಕ್ರಮಗಳಲ್ಲಿ ಅವರ ಗೈರುಹಾಜರಿ ಎದ್ದು ಕಾಣುತ್ತಿತ್ತು. ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಉಡುಪಿಗೆ ಬಂದರೂ ಪ್ರಮೋದ್ ಭಾಗವಹಿಸುವಿಕೆ ಕಡಿಮೆ ಇತ್ತು ಎನ್ನುತ್ತಾರೆ ಕಾಂಗ್ರೆಸ್‌ ನಾಯಕರು.

ಪಕ್ಷದೊಳಗಿನ ಭಿನ್ನಮತ ಹಾಗೂ ನಾಯಕರ ಜತೆಗಿನ ವೈಮನಸ್ಸಿನ ಕಾರಣಕ್ಕೆ ಕೆಲವು ವರ್ಷಗಳಿಂದ ದೂರವೇ ಉಳಿದಿದ್ದರು. ಪಕ್ಷದ ಕಚೇರಿಯಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ. ರಾಜಕೀಯ ಎದುರಾಳಿಯಾಗಿರುವ ಬಿಜೆಪಿ ಪರವಾದ ಮೃದುಧೋರಣೆ ಅಲ್ಲಲ್ಲಿ ಬಹಿರಂಗವಾಗುತ್ತಿತ್ತು ಎನ್ನುತ್ತಾರೆ ಅವರ ಆಪ್ತರು.

ಮೋದಿ ಹೊಗಳಿದ್ದ ಪ್ರಮೋದ್:

ಕಳೆದ ವರ್ಷ ನ.11ರಂದು ಕೃಷ್ಣಮಠದ ರಥಬೀದಿಯಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಪ್ರಮೋದ್ ಮಧ್ವರಾಜ್, ಬಹಿರಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ಮೆಚ್ಚಿ ಹೊಗಳಿಕೆಯ ಮಾತುಗಳನ್ನಾಡಿದ್ದರು.

‘ಹಿಂದೆಲ್ಲ ಅರ್ಜಿ ಹಾಕಿದವರಿಗಷ್ಟೆ ಪ್ರಶಸ್ತಿಗಳು ಸಿಗುತ್ತಿತ್ತು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಪ್ರಶಸ್ತಿಗಳು ಅರ್ಹರನ್ನು ಹುಡುಕಿಕೊಂಡು ಬರುತ್ತಿವೆ’ ಎನ್ನುವ ಮೂಲಕ ಬಿಜೆಪಿಯತ್ತ ವಾಲುತ್ತಿರುವ ಸ್ಪಷ್ಟ ಸಂದೇಶ ರವಾನಿಸಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಇರಿಸು ಮುರಿಸು ಉಂಟು ಮಾಡಿದ್ದರು.

ಟಿಪ್ಪು ಸುಲ್ತಾನ್ ಜಯಂತಿ ವಿರುದ್ಧವಾಗಿ ನೀಡಿದ ಹೇಳಿಕೆ, ಕಲ್ಮತ್ ಮಸೀದಿ ಭೂ ವಿವಾದದಲ್ಲಿ ನೀಡಿದ ಹೇಳಿಕೆ ನಂತರದ ಸಾಲು ಸಾಲು ಬಿಜೆಪಿ ಪರವಾದ ಮೃದುಧೋರಣೆ ಮಧ್ವರಾಜ್ ಅವರು ಕಾಂಗ್ರೆಸ್‌ನಿಂದ ದೂರವಾಗುತ್ತಿದ್ದಾರಾ ಎಂಬ ಅನುಮಾನವನ್ನು ಹುಟ್ಟುಹಾಕಿತ್ತು.

ರಾಜೀನಾಮೆ ನೀಡುವ ಕೊನೆಯ ಕ್ಷಣದವರೆಗೂ ಮಾಧ್ಯಮಗಳ ಎದುರು ಬಿಜೆಪಿ ಸೇರುವುದಿಲ್ಲ ಎಂದೇ ಗಟ್ಟಿಯಾಗಿ ಹೇಳುತ್ತಿದ್ದ ಪ್ರಮೋದ್ ಮಧ್ವರಾಜ್, ಶನಿವಾರ ರಾಗ ಬದಲಿಸಿದ್ದಾರೆ. ಕೈ ಪಕ್ಷವನ್ನು ಬಿಟ್ಟು ಕಮಲ ಹಿಡಿದಿದ್ದಾರೆ.

ಪ್ರಮೋದ್ ರಾಜಕೀಯ ಹಾದಿ...

ಪ್ರಸಿದ್ಧ ಉದ್ಯಮಿ ಮಲ್ಪೆ ಮಧ್ವರಾಜ್ ಹಾಗೂ ಮಾಜಿ ಸಚಿವೆ ಮನೋರಮಾ ಮಧ್ವರಾಜ್‌ ದಂಪತಿಯ ಪುತ್ರ ಪ್ರಮೋದ್ ಮಧ್ವರಾಜ್, ರಾಜಕೀಯ ಹಾಗೂ ಮೀನುಗಾರಿಕಾ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

ಕರಾವಳಿಯ ಪ್ರಬಲ ಮೊಗವೀರ ಸಮುದಾಯಕ್ಕೆ ಸೇರಿರುವ ಪ್ರಮೋದ್ ವಿಭಿನ್ನ ವ್ಯಕ್ತಿತ್ವ, ನೇರ ನಡೆ, ನುಡಿ, ಆಕರ್ಷಕ ಮ್ಯಾನರಿಸಂನಿಂದ ಗಮನ ಸೆಳೆದಿದ್ದಾರೆ. 2013ರಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಶಾಸಕರಾಗಿ ಆಯ್ಕೆಯಾದ ಮೊದಲ ಅವಧಿಯಲ್ಲಿಯೇ ಸಚಿವರಾಗಿದ್ದರು. ರಾಜಕೀಯದಲ್ಲಿ ಹಲವು ಏಳು ಬೀಳುಗಳನ್ನು ಕಂಡಿರುವ ಪ್ರಮೋದ್, 2004ರಲ್ಲಿ ಬ್ರಹ್ಮಾವರ ಕ್ಷೇತ್ರದಿಂದ, 2008 ಹಾಗೂ 2018ರಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಿಂದ, 2019ರ ಲೋಕಸಭಾ ಚುನಾವಣೆಯಲ್ಲಿ ಸೋಲುಂಡಿದ್ದಾರೆ.

ಪ್ರಮೋದ್ ಮುಂದಿನ ನಡೆ...

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಪ್ರಮೋದ್ ಮಧ್ವರಾಜ್ ಅವರಿಗೆ ಸೂಕ್ತ ಸ್ಥಾನಮಾನಗಳು ಸಿಗಲಿವೆಯೇ ಎಂಬ ಕುತೂಹಲ ಕಾಡುತ್ತಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಅಥವಾ ಕಾಪು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಪ್ರಮೋದ್ ಮಧ್ವರಾಜ್ ಕಣಕ್ಕಿಳಿಯುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ರಾಜ್ಯಸಭಾ ಸ್ಥಾನಕ್ಕೆ ನಾಮನಿರ್ದೇಶನ ಮಾಡುವ ಸಾಧ್ಯತೆಗಳೂ ಇವೆ ಎನ್ನಲಾಗುತ್ತಿದೆ. ಮತ್ತೊಂದೆಡೆ 2024ರ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿಯೂ ಕಣಕ್ಕಿಳಿಯಬಹುದು ಎನ್ನುವ ಚರ್ಚೆಗಳೂ ನಡೆಯುತ್ತಿವೆ.

ಹಸುವಿನ ನಂತರ ಕರು ಬಂತು !

ಮನೋರಮಾ ಮಧ್ವರಾಜ್ ಅವರು ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾದಾಗ, ಬಿಜೆಪಿ ಹಿರಿಯ ನಾಯಕರಾದ ಎ.ಜಿ.ಕೊಡ್ಗಿ ಸಮಾರಂಭವೊಂದರಲ್ಲಿ ‘ಬಿಜೆಪಿ ಪಕ್ಷಕ್ಕೆ ಹಸು (ಮನೋರಮಾ ಮಧ್ವರಾಜ್) ಬಂದಾಗಿದೆ. ಕರು (ಪ್ರಮೋದ್ ಮಧ್ವರಾಜ್) ಬರುವ ಸಮಯ ದೂರವಿಲ್ಲ’ ಎಂದು ಹೇಳಿದ್ದರು. ಅದರಂತೆ ಹಸು ಹಾಗೂ ಕರು ಎರಡೂ ಬಿಜೆಪಿಗೆ ಬಂದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.