ಉಡುಪಿ: ಜರ್ಮನಿಯ ಮ್ಯುನಿಚ್ ನಗರದಲ್ಲಿ ಅಪರಿಚಿತ ವ್ಯಕ್ತಿಯಿಂದ ಚೂರಿ ಇರಿತಕ್ಕೊಳಗಾಗಿ ಮೃತಪಟ್ಟ ಕುಂದಾಪುರ ತಾಲ್ಲೂಕಿನ ಪ್ರಶಾಂತ್ ಅವರ ಕುಟುಂಬದಲ್ಲಿ ನೀರವ ಮೌನ ಆವರಿಸಿದೆ. ಪ್ರಶಾಂತ್ ಅವರ ಮೃತದೇಹವನ್ನು ನೋಡಲು ಸರ್ಕಾರ ಆದಷ್ಟುಬೇಗ ವ್ಯವಸ್ಥೆ ಮಾಡಬೇಕು ಎಂದು ಕಂಬನಿ ಮಿಡಿದಿದೆ.
ಈ ಸಂಬಂಧಉಡುಪಿಯಲ್ಲಿರುವ ಪ್ರಶಾಂತ್ ಸಹೋದರಿ ಸಾಧನಾ ಪತಿ ಶ್ರೀನಿವಾಸ ಶೇರಿಗಾರ್ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ‘ಪ್ರಶಾಂತ್ ಅವರನ್ನು ಕೊಂದಿದ್ದು ಯಾರು, ಯಾವ ಉದ್ದೇಶಕ್ಕೆ ಹತ್ಯೆ ಮಾಡಲಾಗಿದೆ ಎಂಬ ವಿಚಾರ ಬಹಿರಂಗವಾಗಬೇಕು. ಕುಟುಂಬಕ್ಕೆ ನ್ಯಾಯ ಸಿಗಬೇಕು’ ಎಂದು ಶ್ರೀನಿವಾಸ್ ಶೇರಿಗಾರ್ ಒತ್ತಾಯಿಸಿದರು.
ಪ್ರಶಾಂತ್ನಿಟ್ಟೆ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರ್ ಪದವಿ ಪಡೆದಿದ್ದರು. ಬಳಿಕ ಬೆಂಗಳೂರು ಹಾಗೂ ಹೈದರಾಬಾದ್‌ನ ಖಾಸಗಿ ಕಂಪೆನಿಗಳಲ್ಲಿ ಕೆಲಕಾಲ ಕೆಲಸ ಮಾಡಿದ್ದರು ಎಂದು ಮಾಹಿತಿ ಹಂಚಿಕೊಂಡರು.
ಸತ್ಯಂ ಕಂಪ್ಯೂಟರ್ಸ್ ಕಂಪೆನಿಯ ಮೂಲಕ ಜರ್ಮನಿಯಲ್ಲಿ ಕೆಲಸ ಮಾಡುವ ಅವಕಾಶ ಪ್ರಶಾಂತ್ ಅವರಿಗೆ ದೊರೆಯಿತು. 2013ರಲ್ಲಿ ಪತ್ನಿಯ ಜತೆಗೆ ಜರ್ಮನಿಗೆ ಹೋಗಿದ್ದ ಅವರು 15 ವರ್ಷಗಳಿಂದ ಅಲ್ಲಿಯೇ ನೆಲಸಿದ್ದಾರೆ. ವರ್ಷದ ಹಿಂದಷ್ಟೇ ಅವರಿಗೆ ಜರ್ಮನಿಯ ಪೌರತ್ವ ಸಿಕ್ಕಿತ್ತು ಎಂದರು.
ಆರಂಭದಲ್ಲಿ ಹ್ಯಾಂಬರ್ಗ್‌ನಲ್ಲಿ ನೆಲೆಸಿದ್ದ ಅವರು, ಬಳಿಕ ಮ್ಯೂನಿಚ್ ನಗರಕ್ಕೆವರ್ಗಾವಣೆಗೊಂಡಿದ್ದರು. ಅಲ್ಲಿಗೆ ಹೋದ ಮೇಲೆ ಇಂತಹ ದುರ್ಘಟನೆ ಸಂಭವಿಸಿದೆ. ಇಲ್ಲಿ ಮಗನನ್ನು ನೋಡಬೇಕು ಎಂದು 73 ವರ್ಷದ ತಾಯಿ ಗೋಳಾಡುತ್ತಿದ್ದಾರೆ. ಅವರಿಗೆ ಜರ್ಮನಿಗೆ ತೆರಳಲು ಸರ್ಕಾರ ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.
ಪ್ರಶಾಂತ್‌ಗೆ ತಾಯಿ ಬಗ್ಗೆ ಕಾಳಜಿ ಹೆಚ್ಚು. ಆಗಾಗ ಕರೆ ಮಾಡಿ ಆರೋಗ್ಯವಿಚಾರಿಸಿಕೊಳ್ಳುತ್ತಿದ್ದರು. ತಾಯಿಗಾಗಿ 2013ರಲ್ಲಿ ಕುಂದಾಪುರ ತಾಲ್ಲೂಕಿನ ಕುಂದೇಶ್ವರ ದೇವಸ್ಥಾನದ ಬಳಿ ಮನೆಯೊಂದನ್ನು ಕಟ್ಟಿಸಿಕೊಟ್ಟಿದ್ದರು.ತಾಯಿ ಅದೇ ಮನೆಯಲ್ಲಿ ವಾಸ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಪ್ರಶಾಂತ್ ತಾಯಿ ವಿನಯಾ, ತಂದೆ ವೆಂಕಟರಾಮ್. ತಂದೆ ಸಾಗರದಲ್ಲಿ ಕಂದಾಯ ಇಲಾಖೆಯಲ್ಲಿ ಅಧಿಕಾರಿಯಾಗಿದ್ದರು. ಇಬ್ಬರು ಗಂಡುಮಕ್ಕಳ ಪೈಕಿ ಪ್ರಶಾಂತ್ ಕಿರಿಯವರು. ಅಣ್ಣ ಭಾತ್ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅಕ್ಕ ಸಾಧನ ಅಂಬಲಪಾಡಿಯಲ್ಲಿ ವಾಸವಿದ್ದಾರೆ ಎಂದು ಕುಟುಂಬದ ವಿವರ ನೀಡಿದರು.
ಪ್ರಶಾಂತ್ ಕುಟುಂಬ ಸಮೇತ 2 ವರ್ಷಕ್ಕೊಮ್ಮೆ ಊರಿಗೆ ಬರುತ್ತಿದ್ದರು. 2017ರ ಚೌತಿಯ ಸಂದರ್ಭ ಊರಿಗೆ ಬಂದಿದ್ದರು. ಮಾರ್ಚ್ 23ರಂದು ಕೊನೆಯ ಬಾರಿ ಕರೆಮಾಡಿ ತಾಯಿಯ ಜತೆಗೆ ಮಾತನಾಡಿದ್ದರು. ಏಪ್ರಿಲ್‌ನಲ್ಲಿ ಮತ್ತೆ ಬರುವುದಾಗಿ ಹೇಳಿದ್ದರು. ಅಷ್ಟರಲ್ಲಿ ದುರ್ಘಟನೆ ಸಂಭವಿಸಿದೆ ಎಂದು ದುಃಖ ವ್ಯಕ್ತಪಡಿಸಿದರು.
ಮೃತದೇಹವನ್ನು ಸರ್ಕಾರದ ಮೂಲಕ ಊರಿಗೆ ತೆಗೆದುಕೊಂಡು ಬರಲು ಪ್ರಯತ್ನಿಸುತ್ತಿದ್ದೇವೆ ಎಂದು ಶ್ರೀನಿವಾಸ್ ಶೇರಿಗಾರ್ ತಿಳಿಸಿದರು.
‘ಅರ್ಧಕ್ಕೆ ನಿಂತ ಮನೆ’
ಪ್ರಶಾಂತ್ ವರ್ಷದ ಹಿಂದೆಯಷ್ಟೇ ಜರ್ಮನಿ ದೇಶದ ಪೌರತ್ವ ಪಡೆದುಕೊಂಡಿದ್ದರು. ಈ ವಿಚಾರವನ್ನು ಕರೆ ಮಾಡಿ ತಿಳಿಸಿದ್ದರು. ಪೌರತ್ವ ಸಿಕ್ಕಿದ ಹಿನ್ನೆಲೆಯಲ್ಲಿ ಅಲ್ಲಿಯೇ ಸ್ವಂತ ಮನೆ ನಿರ್ಮಿಸಲು ಮುಂದಾಗಿದ್ದು, ಅರ್ಧದಷ್ಟು ನಿರ್ಮಾಣ ಕಾಮಗಾರಿಯೂ ಮುಗಿದಿದೆ ಎಂದು ಅಕ್ಕ ಸಾಧನಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.