ADVERTISEMENT

ಎಲಿಕೋಡು: ಪುನ: ಪ್ರತಿಷ್ಠೆ ಸಂಭ್ರಮ

ಕಾರಣಿಕ ಕ್ಷೇತ್ರ ಕಾಡ್ಯ ನಾಗರಾಜ ದೇವರ ಸನ್ನಿಧಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2021, 5:07 IST
Last Updated 25 ಏಪ್ರಿಲ್ 2021, 5:07 IST
ಶಿವಪುರ ಗ್ರಾಮದ ಎಲಿಕೋಡು ಕಾಡ್ಯ ನಾಗರಾಜ ದೇವರ ಸನ್ನಿಧಿ
ಶಿವಪುರ ಗ್ರಾಮದ ಎಲಿಕೋಡು ಕಾಡ್ಯ ನಾಗರಾಜ ದೇವರ ಸನ್ನಿಧಿ   

ಹೆಬ್ರಿ: ತಾಲ್ಲೂಕಿನ ಶಿವಪುರ ಗ್ರಾಮದ ಎಲಿಕೋಡಿನ ಪುರಾತನ ಕಾಡ್ಯ ನಾಗರಾಜ ದೇವರ ಸನ್ನಿಧಿಯಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಮೇ 2ರಂದು ಇಲ್ಲಿ ಪುನ: ಪ್ರತಿಷ್ಠೆ, ಕಲಶಾಭಿಷೇಕ, ಪ್ರಸನ್ನ ಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಶಿವಪುರದ ಬಟ್ಟಂಬಳ್ಳಿಯಿಂದ ಸರ್ಕಾರಿ ಶಾಲೆಯವರೆಗಿನ ವ್ಯಾಪ್ತಿ ಹೊಂದಿರುವ ಕಾರಣಿಕ ಕ್ಷೇತ್ರ ಕಾಡ್ಯ ನಾಗರಾಜ ದೇವರ ಸನ್ನಿಧಿಯು ಎಲಿಕೋಡು ರಾಮಚಂದ್ರ ಕುಲಾಲರ ಜಾಗದಲ್ಲಿದೆ. ಗುಡಿ ಇಲ್ಲದೆ ಬಯಲು ಪ್ರದೇಶದಲ್ಲಿ ಇದ್ದ ಕಾಡ್ಯ ಸನ್ನಿಧಿಗೆ, ಅಪಾರ ದೈವ ಭಕ್ತರಾಗಿದ್ದ ಎಲಿಕೋಡಿನ ಕಮಲಮ್ಮನವರು ಮುಳಿಹುಲ್ಲು ಮಾಡಿನ ಗುಡಿ ಕಟ್ಟಿಸಿದರು. ಇದಾದ ಹಲವು ವರ್ಷಗಳ ಬಳಿಕ ರಾಮಚಂದ್ರ ಕುಲಾಲರ ನೇತೃತ್ವದಲ್ಲಿ ಹಂಚಿನ ಗುಡಿಯನ್ನು ಕಟ್ಟಿಸಿ ಪುನ:ಪ್ರತಿಷ್ಠೆ ನೆರವೇರಿಸಲಾಗಿತ್ತು. ಇತ್ತೀಚೆಗೆ ಜೀರ್ಣಾವಸ್ಥೆ ತಲುಪಿತ್ತು.

ಊರಿನ ಮನೆಮಂದಿಗೂ ಒಂದಿಲ್ಲೊಂದು ಭಾದೆಗಳು ಕಾಡುತ್ತಿದ್ದ ಕಾರಣ, ಆರೂಢ ಪ್ರಶ್ನೆಯ ಮೂಲಕ ತಿಳಿದು ಎಲ್ಲರ ಸಹಕಾರದೊಂದಿಗೆ ಕಮಲಮ್ಮನವರ ಮೊಮ್ಮಗ ಬೈಕಾಡಿ ಮಂಜುನಾಥ ರಾವ್‌ ಅವರು ಗುಡಿ ನಿರ್ಮಿಸಿ ಜೀರ್ಣೋದ್ಧಾರ ಮಾಡಿಸುತ್ತಿದ್ದಾರೆ. ಅರ್ಚಕರಾದ ತನಿಯ ಮತ್ತು ಗೌರಿ, ರಾಮಚಂದ್ರ ಕುಲಾಲ್‌ ಅಧ್ಯಕ್ಷರಾಗಿ, ಶಂಕರ ನಾಯ್ಕ್‌ ಕಾರ್ಯದರ್ಶಿಯಾಗಿ, ಸ್ವಾಗತ ಸಮಿತಿಯ ಜೊತೆಗೆ ವಿವಿಧ ಉಪ ಸಮಿತಿಗಳು, ಸ್ಥಳೀಯ ಯುವ ಮಿತ್ರರು ಜೀರ್ಣೋದ್ಧಾರ ಕಾರ್ಯದ ಯಶಸ್ಸಿಗೆ ದುಡಿಯುತ್ತಿದ್ದಾರೆ.

ADVERTISEMENT

ಪುನರ್ ಪ್ರತಿಷ್ಠೆ ಮೇ 2ಕ್ಕೆ

ಪರಿವಾರ ಸಹಿತ ಕಾಡ್ಯ ನಾಗರಾಜ ದೇವರ ಪುನ: ಪ್ರತಿಷ್ಠೆ, ಕಲಶಾಭಿಷೇಕ, ಪ್ರಸನ್ನ ಪೂಜೆ, ದರ್ಶನ ಮುಖೇನ ಕಲಶ ಸೇವೆ ಸಹಿತ ವಿವಿಧ ಧಾರ್ಮಿಕ ವಿಧಿವಿಧಾನಗಳು ಹೆರ್ಗ ರಾಘವೇಂದ್ರ ತಂತ್ರಿ ಮತ್ತು ಪಾಂಡುಕಲ್ಲು ನರಸಿಂಹ ಭಟ್‌ ಅವರ ಮಾರ್ಗದರ್ಶನದಲ್ಲಿ ನಡೆಯಲಿವೆ. ಮೇ 1ರ ಸಂಜೆ ಹೊರೆ ಕಾಣಿಕೆ ಮೆರವಣಿಗೆ ನಡೆಯಲಿದೆ. ಅರ್ಚಕರಾದ ಶಿವಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಗೌರಿ ಅವರಿಗೆ ಸನ್ಮಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.