ಮಲ್ಪೆ ಬೀಚ್‌ನಲ್ಲಿ ಭಾನುವಾರ ಸಮುದ್ರದ ನೀರಿಗಿಳಿದು ಸಂಭ್ರಮಿಸಿದ ಶಾಲಾ ಮಕ್ಕಳು
ಉಡುಪಿ: ಕ್ರಿಸ್‌ಮಸ್ ರಜೆ ಸಮೀಪಿಸುತ್ತಿರುವಂತೆ ಕಡಲ ತೀರಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ, ಪದೇ ಪದೇ ಸಂಭವಿಸುತ್ತಿರುವ ಅವಘಡಗಳು ನೀರಿಗಿಳಿಯುವ ಪ್ರವಾಸಿಗರಿಗೆ ಎಚ್ಚರಿಕೆಯ ಗಂಟೆಯನ್ನು ಮೊಳಗಿಸುತ್ತಲೇ ಇವೆ.
ಜಿಲ್ಲೆಯ ಕುಂದಾಪುರ ಬೀಚ್‌ನಲ್ಲಿ ಈಚೆಗೆ ಸಹೋದರರಿಬ್ಬರು ಸಮುದ್ರದ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆಯ ನೆನಪು ಮಾಸುವ ಮುನ್ನವೇ ನೆರೆಯ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ಪ್ರವಾಸಕ್ಕೆ ಬಂದಿದ್ದ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ನಾಲ್ವರು ವಿದ್ಯಾರ್ಥಿನಿಯರು ನೀರು ಪಾಲಾಗಿದ್ದಾರೆ.
ಈ ಘಟನೆಗಳು ಬೀಚ್‌ಗಳಲ್ಲಿ ಪ್ರವಾಸಿಗರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಬೀಚ್‌ಗಳಲ್ಲಿ ಪ್ರವಾಸಿಗರ ಸುರಕ್ಷತೆಗೆ ಜಿಲ್ಲಾಡಳಿತವು ಇನ್ನಷ್ಟು ಆದ್ಯತೆ ನೀಡಬೇಕೆಂಬ ಆಗ್ರಹಗಳು ಜನರಿಂದ ಕೇಳಿ ಬಂದಿವೆ.
ಜಿಲ್ಲೆಯ ಮಲ್ಪೆ, ತ್ರಾಸಿ ಮರವಂತೆ, ಕಾಪು ಬೀಚ್‌ಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ವಾರಾಂತ್ಯ, ರಜಾ ದಿನಗಳಲ್ಲಿ ಈ ಕಡಲ ತೀರಗಳಲ್ಲಿ ಪ್ರವಾಸಿಗರು ಕಿಕ್ಕಿರಿದು ತುಂಬಿರುತ್ತಾರೆ.
ಸಾಮಾನ್ಯವಾಗಿ ಜಿಲ್ಲೆಯ ಬೀಚ್‌ಗಳಲ್ಲಿ ಮಳೆಗಾಲದಲ್ಲಿ ಪ್ರವಾಸಿಗರು ಕಡಲಿಗಿಳಿಯದಂತೆ ನಿರ್ಬಂಧ ಹೇರಲಾಗುತ್ತದೆ. ಮಳೆ ಆರಂಭವಾಗುವಲ್ಲಿಂದ ಅಕ್ಟೋಬರ್ ತಿಂಗಳ ವರೆಗೂ ಸಮುದ್ರದ ಬದಿಯಲ್ಲಿ ಬೇಲಿ ನಿರ್ಮಿಸಲಾಗುತ್ತದೆ. ಮಳೆ ಕಡಿಮೆಯಾದ ಬಳಿಕ ಸಮುದ್ರ ಶಾಂತವಾದರೂ ಚಂಡಮಾರುತಗಳ ಪರಿಣಾಮದಿಂದ ಬೇಸಿಗೆಯಲ್ಲೂ ಕಡಲು ಪ್ರಕ್ಷುಬ್ಧಗೊಳ್ಳುವುದಿದೆ.
ದೇಗುಲ ಪ್ರವಾಸೋದ್ಯಮವು ಜಿಲ್ಲೆಯಲ್ಲಿ ಪ್ರಮುಖವಾಗಿದ್ದು, ಇಲ್ಲಿನ ಕೃಷ್ಣ ಮಠ, ಕೊಲ್ಲೂರು ದೇಗುಲ, ನೆರೆಯ ಜಿಲ್ಲೆಗಳ ದೇವಸ್ಥಾನಗಳಿಗೆ ಬರುವ ಪ್ರವಾಸಿಗರು ಊರಿಗೆ ಮರಳುವ ಮುನ್ನ ಬೀಚ್‌ಗಳಿಗೆ ಭೇಟಿ ನೀಡಿಯೇ ಮರಳುತ್ತಾರೆ.
ಮಲ್ಪೆ ಬೀಚ್‌ಗೆ ರಜಾದಿನಗಳಲ್ಲಿ 10 ಸಾವಿರಕ್ಕೂ ಹೆಚ್ಚು ಜನರು ಭೇಟಿ ನೀಡುತ್ತಾರೆ. ಆದರೆ, ಜೀವ ರಕ್ಷಕ ಸಿಬ್ಬಂದಿ ಬೆರಳೆಣಿಕೆಯಷ್ಟೇ ಇದ್ದಾರೆ. ಇಲ್ಲಿಗೆ ಸಾಕಷ್ಟು ಜೀವ ರಕ್ಷಕ ಸಿಬ್ಬಂದಿ ನೇಮಕ ಮಾಡಲು ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಮುಂದಾಗಬೇಕು ಎಂದು ಜನರು ಆಗ್ರಹಿಸಿದ್ದಾರೆ.
ಮಲ್ಪೆ ಬೀಚ್‌ನಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾಗಳೇ ಕಣ್ಣಿಗೆ ಬೀಳುವುದಿಲ್ಲ. ಪ್ರವಾಸಿಗರ ಮೇಲೆ ನಿಗಾ ವಹಿಸಲು ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಸ್ಥಾಪಿಸಬೇಕು. ಸಿಬ್ಬಂದಿಯ ಮಾತು ಕೇಳದೆ ಸಮುದ್ರದಲ್ಲಿ ಆಳದವರೆಗೂ ಈಜಲು ತೆರಳುವವರ ವಿರುದ್ಧ ಕ್ರಮ ಕೈಗೊಂಡರಷ್ಟೇ ಉಳಿದವರಿಗೆ ಭಯವಾಗಬಹುದು. ಕಾನೂನು ಮೀರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಾರೆ.
ಮಲ್ಪೆ ಬೀಚ್‌ಗೆ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದರೂ ತುರ್ತು ಸಂದರ್ಭಕ್ಕಾಗಿ ಬಳಸಲು ಆಂಬುಲೆನ್ಸ್ ವ್ಯವಸ್ಥೆಯೇ ಕೂಡ ಇಲ್ಲ. ಬೀಚ್ ಪಕ್ಕ ಸದಾ ಒಂದು ಆಂಬುಲೆನ್ಸ್ ಸನ್ನದ್ಧವಾಗಿರಿಸಿದರೆ ತುರ್ತು ಸಂದರ್ಭಗಳಲ್ಲಿ ಸಹಕಾರಿಯಾಗಬಹುದು.
ಉತ್ತರ ಕರ್ನಾಟಕ ಭಾಗದಿಂದ ಪ್ರವಾಸಕ್ಕೆ ಬರುವ ಹೆಚ್ಚಿನ ಮಂದಿ ಮಲ್ಪೆ ಬೀಚ್‌ಗೆ ಭೇಟಿ ನೀಡುತ್ತಾರೆ. ಇವರಿಗೆ ಸಮುದ್ರದ ಅಪಾಯದ ಅರಿವಿರುವುದಿಲ್ಲ. ಕೆಲವರು ಈಜು ಬರುತ್ತದೆ ಎಂಬ ಭಂಡತನದಿಂದಲೂ ಸಮುದ್ರದಲ್ಲಿ ಆಳದವರೆಗೂ ಹೋಗಿ ಅಪಾಯವನ್ನು ಆಹ್ವಾನಿಸುತ್ತಾರೆ.
ಜಿಲ್ಲೆಯ ಬೀಚ್‌ಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಅಪಾಯದ ಬಗ್ಗೆ ಅರಿವು ಮೂಡಿಸಲು ಇನ್ನಷ್ಟು ಫಲಕಗಳನ್ನು ಸ್ಥಾಪಿಸಬೇಕಾಗಿದೆ. ಧ್ವನಿವರ್ಧಕದ ಮೂಲಕವೂ ಪ್ರವಾಸಿಗರನ್ನು ಎಚ್ಚರಿಸುವ ಕೆಲಸ ನಡೆದರೆ ಜೀವಹಾನಿ ತಪ್ಪಿಸಬಹುದಾಗಿದೆ.
ಪ್ರವಾಸೋದ್ಯಮ ಇಲಾಖೆಯು ಬೀಚ್ ಎಂದು ಅಭಿವೃದ್ಧಿಪಡಿಸದ ಸ್ಥಳಗಳಲ್ಲೂ ಕೆಲವರು ನೀರಿಗಿಳಿಯುತ್ತಾರೆ. ಅಂತಹ ಸ್ಥಳಗಳಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚು ಎಂದು ಅಧಿಕಾರಿಗಳು ಹೇಳುತ್ತಾರೆ.
ಪ್ರವಾಸಿ ಮಿತ್ರರು ಮತ್ತು ಜೀವರಕ್ಷಕ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸಲು ಚಿಂತನೆ ನಡೆಸಲಾಗಿದೆ. ವಾಟರ್ ಸ್ಪೋರ್ಟ್ಸ್ ಟೆಂಡರ್ ಪಡೆಯವರ ವತಿಯಿಂದಲೂ ಪ್ರವಾಸಿಗರ ಸುರಕ್ಷತೆಗಾಗಿ ಜೀವ ರಕ್ಷಕ ಸಿಬ್ಬಂದಿ ಇದ್ದಾರೆಕುಮಾರ್ ಸಿ.ಯು. ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.