ADVERTISEMENT

ರಸ್ತೆಯಲ್ಲಿ ಉರುಳಾಡಿ ಪ್ರತಿಭಟನೆ

ಎಪಿಎಂಸಿ ನಿವೇಶನ ಮಾರಾಟಕ್ಕೆ ವಿರೋಧ: ವರ್ತಕರಿಂದ ಕಪ್ಪು ಬಾವುಟ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2024, 6:24 IST
Last Updated 18 ಆಗಸ್ಟ್ 2024, 6:24 IST
ಎಪಿಎಂಸಿ ನಿವೇಶನ ಮಾರಾಟ ವಿರೋಧಿಸಿ ವರ್ತಕರು ರಸ್ತೆಯಲ್ಲಿ ಉರುಳಾಡಿ ಶನಿವಾರ ಪ್ರತಿಭಟಿಸಿದರು
ಎಪಿಎಂಸಿ ನಿವೇಶನ ಮಾರಾಟ ವಿರೋಧಿಸಿ ವರ್ತಕರು ರಸ್ತೆಯಲ್ಲಿ ಉರುಳಾಡಿ ಶನಿವಾರ ಪ್ರತಿಭಟಿಸಿದರು   

ಉಡುಪಿ: ನಗರದ ಕೃಷಿ‌ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದ ನಿವೇಶನಗಳನ್ನು ಮಾರಾಟ ಮಾಡುವುದನ್ನು ವಿರೋಧಿಸಿ ವರ್ತಕರು ಶನಿವಾರ ರಸ್ತೆಯಲ್ಲಿ ಉರುಳಾಡಿ ಪ್ರತಿಭಟನೆ ನಡೆಸಿದರು.

ಎಪಿಎಂಸಿ ಆವರಣದ ನಿವೇಶನವನ್ನು ಅನರ್ಹರಿಗೆ ಲೀಸ್ ಕಂ ಸೇಲ್‌ಗೆ ನೀಡಲಾಗಿದೆ ಎಂದು ಆರೋಪಿಸಿ ವರ್ತಕರು ಹಲವು ದಿನಗಳಿಂದ ವ್ಯಾಪಾರ ನಡೆಸುವ ಸ್ಥಳದಲ್ಲಿ ಕಪ್ಪು ಬಾವುಟ ಕಟ್ಟಿ ವ್ಯಾಪಾರ ನಡೆಸುತ್ತಿದ್ದರು. ನಿವೇಶನ ಮಾರಾಟಕ್ಕೆ ಸಂಬಂಧಿಸಿ ಅಧಿಕಾರಿಗಳು ಸಮೀಕ್ಷೆ ನಡೆಸಲು ಮುಂದಾದಾಗ ವರ್ತಕರು ಕಪ್ಪು ಬಾವುಟ ಪ್ರದರ್ಶಿಸಿ, ರಸ್ತೆಯಲ್ಲಿ ಹೊರಳಾಡಿ ಪ್ರತಿಭಟಿಸಿದರು. ಈ ವೇಳೆ ಅಸ್ವಸ್ಥಗೊಂಡ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

11 ನಿವೇಶನಗಳ ಮಾರಾಟಕ್ಕೆ ಸಂಬಂಧಿಸಿ ಆ ನಿವೇಶನಗಳಲ್ಲಿರುವ ಶೆಡ್‌ಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸಮೀಕ್ಷೆ ನಡೆಸಲು ಬಂದಿದ್ದರು.

ADVERTISEMENT

ವರ್ತಕರಿಗೆ ಬೆಂಬಲ ಸೂಚಿಸಿ ಮಾತನಾಡಿದ ನಗರಸಭಾ ಸದಸ್ಯ ವಿಜಯ್‌ ಕೊಡವೂರು, ಇಲ್ಲಿನ ನಿವೇಶನಗಳನ್ನು ಲೀಸ್‌ ಕಂ ಸೇಲ್‌ಗೆ ಯಾವುದೇ ಸಮಿತಿ ಮಾರಾಟ ಮಾಡಿಲ್ಲ. ಬದಲಾಗಿ ಭ್ರಷ್ಟ ಅಧಿಕಾರಿ ಮಾರಾಟ ಮಾಡಿದ್ದಾರೆ. ಇಲ್ಲಿ ಜಾಗಕ್ಕೆ ಸೆಂಟ್ಸ್‌ಗೆ ₹8 ಲಕ್ಷದಿಂದ ₹10 ಲಕ್ಷದಷ್ಟಿದೆ. ಆದರೆ ಎಪಿಎಂಸಿ ನಿವೇಶನಗಳನ್ನು ಕೇವಲ ₹1.62 ಲಕ್ಷಕ್ಕೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿದರು.

30 ವರ್ಷಗಳಿಂದ ಎಪಿಎಂಸಿಯಲ್ಲಿ ಚಿಲ್ಲರೆ ವ್ಯಾಪಾರಸ್ಥರಾಗಿರುವವರ ಸಣ್ಣ ಶೆಡ್‌ಗಳನ್ನು ಅಧಿಕಾರಿಗಳು ಏಕಾಏಕಿ ಕೆಡವಲು ಮುಂದಾಗಿದ್ದಾರೆ. ನೋಟಿಸ್‌ ಕೂಡ ನೀಡಿಲ್ಲ ಎಂದರು.

ಎಪಿಎಂಸಿಯ ನಿವೇಶನಗಳನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಬಾರದು. ಇಲ್ಲಿ ಮೂಲ ಸೌಕರ್ಯಕ್ಕೆ ಒತ್ತು ನೀಡಬೇಕು. ರಸ್ತೆಯನ್ನು ದುರಸ್ತಿ ಮಾಡಬೇಕು ಎಂದು ಕೃಷಿ ಉತ್ಪನ್ನ ಮಾರಾಟಗಾರರ ಒಕ್ಕೂಟದ ಅಧ್ಯಕ್ಷ ಸುಭಾಷಿತ್‌ ಕುಮಾರ್‌ ಒತ್ತಾಯಿಸಿದರು.

ಸ್ಥಳಕ್ಕೆ ತಲುಪಿದ ಎಪಿಎಂಸಿ ಪ್ರಭಾರ ಕಾರ್ಯದರ್ಶಿ ಗೋಪಾಲ ಕಾಕನೂರ ಅವರೊಂದಿಗೂ ವ್ಯಾಪಾರಿಗಳು ವಾಗ್ವಾದ ನಡೆಸಿದರು. ಸ್ಥಳದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಎಪಿಎಂಸಿ ಅವ್ಯವಸ್ಥೆ ಖಂಡಿಸಿ ಕೆಲ ದಿನಗಳ ಹಿಂದೆಯೂ ವರ್ತಕರು ಪ್ರತಿಭಟನೆ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.