ಕುಂದಾಪುರ: 2013ನೇ ಇಸವಿಯಲ್ಲಿ ಕಸ್ತೂರಿ ರಂಗನ್ ಜ್ವರ ಈ ಭಾಗದಲ್ಲಿ ಕಾಣಿಸಿಕೊಂಡಾಗ ಅದರ ವಿರುದ್ಧ ಸಾಕಷ್ಟು ಪ್ರತಿಭಟನೆ ನಡೆಸಲಾಗಿತ್ತು. ಸರ್ಕಾರಗಳು ಬದಲಾದರೂ ಕೂಡ ಅಂದಿನಿಂದ ಇಂದಿನವರೆಗೂ ವರದಿ ಜಾರಿಯ ಉಪಕ್ರಮದಲ್ಲಿ ಯಾವುದೇ ಬದಲಾವಣೆಯೂ ಆಗಿಲ್ಲ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ, ವಿಧಾನ ಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಹೇಳಿದರು.
ಅವೈಜ್ಞಾನಿಕ ಕಸ್ತೂರಿರಂಗನ್ ವರದಿ ವಿರೋಧಿಸಿ ಹೆಬ್ರಿ ತಾಲ್ಲೂಕಿನ ಬೆಳ್ವೆ ಗ್ರಾಮ ಪಂಚಾಯಿತಿ ಬಳಿಯಲ್ಲಿ ಸೋಮವಾರ ಬೆಳ್ವೆ ಗ್ರಾಮ ಹಿತರಕ್ಷಣಾ ಸಮಿತಿ ವತಿಯಿಂದ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಕೇರಳದಲ್ಲಿ ಒಂದು ಹಂತದಲ್ಲಿ ಜನರ ಬೇಡಿಕೆಗೆ ಅನುಗುಣವಾಗಿ ಸಮಸ್ಯೆ ಬಗೆಹರಿಸುವ ಪ್ರಯತ್ನಗಳು ನಡೆದರೂ, ನಮ್ಮ ರಾಜ್ಯದಲ್ಲಿ ಪರಿಣಾಮಕಾರಿ ಪ್ರಯತ್ನ ನಡೆದಿಲ್ಲ. ಅರಣ್ಯ ಭೂಮಿ, ಕೃಷಿ ಭೂಮಿ, ಜನವಸತಿ ಪ್ರದೇಶಗಳ ಗುರುತಿಸುವಿಕೆಗೆ ಸಂಬಂಧಿಸಿದ ಸರ್ವೇ ಕಾರ್ಯವೂ ಸಮರ್ಪಕವಾಗಿ ನಡೆದಿಲ್ಲ. ಇನ್ನೂ ಕೂಡ ಕಾಲ ಮಿಂಚಿಲ್ಲ. ಸಂಘಟಿತ ಹೋರಾಟದ ಮೂಲಕ ಮುನ್ನೆಡೆದರೆ ಖಂಡಿತವಾಗಿಯೂ ಫಲ ದೊರೆಯುತ್ತದೆ. ಹೋರಾಟಕ್ಕೆ ಜಿಲ್ಲಾ ರೈತ ಸಂಘದ ಬೆಂಬಲ ಖಂಡಿತವಾಗಿ ಇದೆ ಎಂದರು.
ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು, ಪಶ್ಚಿಮ ಘಟ್ಟ ಉಳಿಯಬೇಕು ಹಾಗೂ ಅರಣ್ಯ ನಾಶ ತಡೆಯುವ ಉದ್ದೇಶದಿಂದ ರಚಿಸಲಾದ ಕಸ್ತೂರಿರಂಗನ್ ಸಮಿತಿ ನೀಡಿರುವ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವುದರಿಂದ , ರೈತರು ಹಾಗೂ ಈ ಭಾಗದ ಜನರಿಗೆ ತೊಂದರೆಯಾಗುತ್ತದೆ. ಈ ವರದಿಯ ಅಗತ್ಯತೆ ಎಷ್ಟಿದೆ ಎನ್ನುವುದನ್ನು ಮೊದಲು ಅವಲೋಕನ ಮಾಡಿಕೊಳ್ಳಬೇಕು. ಭೌಗೋಳಿಕ ಸಮೀಕ್ಷೆ ನಡೆಸದೆ, ಉಪಗ್ರಹ ಆಧಾರಿತ ಸಮೀಕ್ಷೆ ಮೂಲಕ ನೀಡಿದ ವರದಿಯಿಂದ ಜನರು ಭಯದ ವಾತಾವರಣದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಕರಾವಳಿ ಜಿಲ್ಲೆಯ ಜನರು ,ಸಿಆರ್‌ಝಡ್ ಹಾಗೂ ಡೀಮ್ಡ್ ಫಾರೆಸ್ಟ್ ಸಮಸ್ಯೆಯಿಂದ ಈಗಾಗಲೇ ಹೈರಾಣಾಗಿದ್ದಾರೆ. ಕಸ್ತೂರಿರಂಗನ್ ವರದಿ ಅನುಷ್ಠಾನ ಅವೈಜ್ಞಾನಿಕ ಎನ್ನುವುದನ್ನು ಪಕ್ಷಾತೀತವಾಗಿ ಜನಪ್ರತಿನಿಧಿಗಳು ಒಕ್ಕೊರಲಿನಿಂದ ವಿರೋಧಿಸಬೇಕು ಎಂದರು.
ಶಾಸಕ ಎ.ಕಿರಣ್‌ಕುಮಾರ್ ಕೊಡ್ಗಿ ಮಾತನಾಡಿ, ಈ ವರದಿ ಅನುಷ್ಠಾನಕ್ಕೆ ಬಂದರೆ, ಜನರು ನೆಮ್ಮದಿಯಿಂದ ಜೀವನ ನಡೆಸುವುದು ಕಷ್ಟವಾಗಲಿದೆ. ಸೆ.19 ರಂದು ನಡೆದ ಶಾಸಕರ ಸಭೆಯ ಅಭಿಪ್ರಾಯ ಸಂಗ್ರಹಿಸಿ, ಸಂಪುಟದಲ್ಲಿ ಚರ್ಚೆ ನಡೆಸಿದ ಬಳಿಕ ಕಸ್ತೂರಿ ರಂಗನ್ ವರದಿಯನ್ನು ರಾಜ್ಯದಲ್ಲಿ ಅನುಷ್ಠಾನ ಮಾಡದಿರಲು ತೀರ್ಮಾನಿಸಲಾಗಿದೆ. ಕೇರಳ ಮಾದರಿಯಲ್ಲಿ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ವೇ ನಡೆಸಿ ವರದಿ ತಯಾರಿಸಿ, ರಾಜ್ಯ ಸರ್ಕಾರ ಕೇಂದ್ರಕ್ಕೆ ವರದಿ ನೀಡುವುದು ಸೂಕ್ತ. ಈ ಬಗ್ಗೆ ಸಂಬಂಧಪಟ್ಟ ಎಲ್ಲಾ ಶಾಸಕರು ಒಗ್ಗೂಡಿ ಸರ್ಕಾರದ ಗಮನ ಸೆಳೆಯುತ್ತೇವೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ನ್ಯಾಯವಾದಿ ಹಾಗೂ ಧರ್ಮಗುರು ಸಲೀಂ ಜೋಸೇಫ್ ವರದಿಯ ಸಾಧಕ -ಬಾಧಕಗಳ ಕುರಿತು ಮಾಹಿತಿ ನೀಡಿದರು. ಉಡುಪಿ ಜಿಲ್ಲಾ ರೈತಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ಕಿಣಿ ಬೆಳ್ವೆ ಹಾಗೂ ಹೋರಾಟಗಾರ ಸತೀಶ್ ಶೆಟ್ಟಿ ಮುಟ್ಲುಪಾಡಿ ಮಾತನಾಡಿದರು.
ಬೆಳ್ವೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಾ, ಬೆಳ್ವೆ ಗ್ರಾಮ ಹಿತರಕ್ಷಣಾ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಸೂರ್ಗೋಳಿ, ಜಿಲ್ಲಾ ರೈತ ಸಂಘದ ವಂಡ್ಸೆ ವಲಯದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಅಡಿಕೆಕೊಡ್ಲು ಇದ್ದರು.
ಪ್ರವೀಣ್ ಸ್ವಾಗತಿಸಿದರು, ಸುದರ್ಶನ್ ಮತ್ತು ಸಂತೋಷ್ ನಿರೂಪಿಸಿದರು, ಪ್ರಶಾಂತ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.