ADVERTISEMENT

ಜಾತಿಪೀಡಿತ ರೋಗಗ್ರಸ್ಥ ಮನಸ್ಥಿತಿ ಹೆಚ್ಚಳ

ಹಾಥರಸ್‌ ಅತ್ಯಾಚಾರ ಕೃತ್ಯ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಚಿಂತಕ ಭಾಸ್ಕರ್ ಪ್ರಸಾದ್‌ ಟೀಕೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 15:32 IST
Last Updated 10 ಅಕ್ಟೋಬರ್ 2020, 15:32 IST
ಅಂಬೇಡ್ಕರ್ ಯುವಸೇನೆಯಿಂದ ಶನಿವಾರ ಅಜ್ಜರಕಾಡು ಹುತಾತ್ಮರ ಸ್ಮಾರಕದ ಎದುರು ಹಾಥರಸ್‌ ಅತ್ಯಾಚಾರ ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು.
ಅಂಬೇಡ್ಕರ್ ಯುವಸೇನೆಯಿಂದ ಶನಿವಾರ ಅಜ್ಜರಕಾಡು ಹುತಾತ್ಮರ ಸ್ಮಾರಕದ ಎದುರು ಹಾಥರಸ್‌ ಅತ್ಯಾಚಾರ ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು.   

ಉಡುಪಿ: ‘ಜಾತಿಯ ಕಾರಣಕ್ಕೆ ಹಾಥರಸ್‌ ಅತ್ಯಾಚಾರ ಪ್ರಕರಣದ ಆರೋಪಿಗಳ ರಕ್ಷಣೆಗೆ ನಿಂತಿರುವ ಯೋಗಿ ಆದಿತ್ಯನಾಥ್ ಯೋಗಿಯಲ್ಲ; ಮಾನಸಿಕ ರೋಗಿ’ ಎಂದು ಚಿಂತಕ ಭಾಸ್ಕರ್ ಪ್ರಸಾದ್‌ ವಾಗ್ದಾಳಿ ನಡೆಸಿದರು.

ಅಂಬೇಡ್ಕರ್ ಯುವಸೇನೆಯಿಂದ ಶನಿವಾರ ಅಜ್ಜರಕಾಡು ಹುತಾತ್ಮರ ಸ್ಮಾರಕದ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ಅತ್ಯಾಚಾರ ಪ್ರಕರಣಗಳನ್ನು ಜಾತಿಯ ದೃಷ್ಟಿಯಿಂದ ನೋಡಲಾಗುತ್ತಿದ್ದು, ದೇಶದಲ್ಲಿ ಜಾತಿಪೀಡಿತ ರೋಗಗ್ರಸ್ಥ ಮನಸ್ಥಿತಿಗಳು ಹೆಚ್ಚಾಗಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಾಥರಸ್‌ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳ ಪರವಾಗಿ ನಿಂತಿರುವ ಅಲ್ಲಿನ ಮೇಲ್ವರ್ಗದವರು, ಪ್ರಕರಣಕ್ಕೆ ಬೇರೆ ಬಣ್ಣ ಬಳಿಯುತ್ತಿದ್ದಾರೆ. ದೇಶದ ಕಾನೂನು ಸುವ್ಯವಸ್ಥೆಗೆ ಹಾಗೂ ಭದ್ರತೆಗೆ ಸವಾಲಾಗುವಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮೃತ ಯುವತಿಯ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿ, ಬೆದರಿಸಿ ಪ್ರಕರಣ ಮುಚ್ಚಿಹಾಕುವ ಯತ್ನ ನಡೆಸಲಾಗುತ್ತಿದೆ ಎಂದರು.

ADVERTISEMENT

ಅತ್ಯಾಚಾರದಂತಹ ಸೂಕ್ಷ್ಮ ಪ್ರಕರಣಗಳಲ್ಲಿ ಸಂತ್ರಸ್ತೆಯ ಮೃತದೇಹವನ್ನು ಸುರಕ್ಷಿತವಾಗಿಡಬೇಕು ಎಂಬ ಸಾಮಾನ್ಯ ಜ್ಞಾನ ಅಲ್ಲಿನ ಪೊಲೀಸರಿಗೆ ಇಲ್ಲದಿರುವುದು ದುರಂತ. ಪ್ರಕರಣವನ್ನು ಮುಚ್ಚಿಹಾಕಲು ರಾತ್ರೋರಾತ್ರಿ ಯುವತಿಯ ಶವನು ಸುಟ್ಟು ಹಾಕಲಾಗಿದೆ. ಇದೊಂದು ವ್ಯವಸ್ಥಿತ ಷಡ್ಯಂತ್ರ ಎಂದು ಭಾಸ್ಕರ್ ಪ್ರಸಾದ್ ಆರೋಪಿಸಿದರು.

ರಾಜಕೀಯ ಅಧಿಕಾರ ಪಡೆಯದ ಹೊರತು ಹಿಂದುಳಿದವರ ಉದ್ಧಾರ ಸಾದ್ಯವಿಲ್ಲ ಎಂಬ ಡಾ.ಬಿ.ಆರ್.ಅಂಬೇಡ್ಕರ್ ಮಾತನ್ನು ಈಗಲಾದರೂ ಸಮುದಾಯ ಅರ್ಥ ಮಾಡಿಕೊಳ್ಳಬೇಕು. ಶೇ 85ರಷ್ಟಿರುವ ಹಿಂದುಳಿದ ವರ್ಗದವರು ರಾಜಕೀಯ ಅಧಿಕಾರಕ್ಕಾಗಿ ಬೇಡುವ ದಯನೀಯ ಸ್ಥಿತಿಬಿಟ್ಟು, ಅಧಿಕಾರ ಪಡೆಯುವತ್ತ ಮುನ್ನುಗ್ಗಬೇಕು ಎಂದರು.

ತಮಟೆ ಬಾರಿಸುವುದು, ಬೀದಿಗಿಳಿದು ಪ್ರತಿಭಟನೆ ಮಾಡುವುದು ಮಾತ್ರ ದಲಿತರ ಕೆಲಸವಾಗಬಾರದು. ರಾಜಕೀಯ, ಶಿಕ್ಷಣ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಬೆಳೆಯಲು ಹೋರಾಡಬೇಕು. ಅಂಬೇಡ್ಕರ್ ಚಿಂತನೆ, ಆದರ್ಶಗಳು ಎಲ್ಲರಿಗೂ ದಾರಿದೀಪವಾಗಲಿ ಎಂದು ಭಾಸ್ಕರ್ ಪ್ರಸಾದ್ ಸಲಹೆ ನೀಡಿದರು.

ಬಳಿಕ ಯೋಗಿ ಆದಿತ್ಯನಾಥ್ ಪ್ರತಿಕೃತಿಯನ್ನು ದಹಿಸಿ ಘೋಷಣೆ ಕೂಗಲಾಯಿತು. ದಲಿತ ಮುಖಂಡರಾದ ಜಯನ್ ಮಲ್ಪೆ, ಲೋಕೇಶ್‌ ಪಡುಬಿದ್ರಿ, ಮಂಜುನಾಥ್ ಗಿಳಿಯಾರ್, ಬಿ.ಎಂ.ಭಟ್‌ ಮಾತನಾಡಿದರು. ಸುಂದರ್ ಕಪ್ಪೆಟ್ಟು, ರಮೇಶ್ ಪಾಲ್‌, ಗಣೇಶ್‌ ನೇರ್ಗಿ, ಶಶಿಕಲಾ ತೊಟ್ಟಂ, ಕೃಷ್ಣ ಶ್ರೀಯಾನ್‌, ಅರುಣ್ ಮಲ್ಪೆ, ಭಗವಾನ್ ದಾಸ್ ಮಲ್ಪೆ, ಮಂಜುನಾಥ್, ಸಂತೋಷ್‌ ಕಪ್ಪೆಟ್ಟು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.