ಪಡುಬಿದ್ರಿ: ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಸ್ಥಳೀಯ ವಾಹನಗಳಿಗೆ ವಿನಾಯಿತಿ ಇದ್ದರೂ, ಖಾತೆಯಿಂದ ಹಣ ಕಡಿತಗೊಳ್ಳುತ್ತಿರುವ ಬಗ್ಗೆ ಆಕ್ರೋಶಗೊಂಡ ಹೆಜಮಾಡಿ ನಾಗರಿಕರು ವಾಹನಗಳನ್ನು ತಡೆದು ಹೆಜಮಾಡಿ ಒಳರಸ್ತೆಯ ಟೋಲ್ ಮುಂಭಾಗ ಪ್ರತಿಭಟನೆ ನಡೆಸಿದರು.
ಹೆಜಮಾಡಿಯಲ್ಲಿ ಸ್ಥಳೀಯರೊಬ್ಬರ ವಾಹನವೊಂದು ಟೋಲ್ ವಿನಾಯಿತಿ ಪಡೆದು ಮುಂದೆ ತೆರಳಿದ ಕೆಲವೇ ಸಮಯದ ಬಳಿಕ ಖಾತೆಯಿಂದ ಟೋಲ್ ಹಣ ಕಡಿತಗೊಂಡಿದೆ. ಕೂಡಲೇ ಅವರು ಸ್ಥಳೀಯರಿಗೆ ತಿಳಿಸಿದಾಗ ಈ ರೀತಿ ಸಮಸ್ಯೆ ಹಲವರಿಗೆ ಆಗಿದ್ದು ಗೊತ್ತಾಗಿದೆ.
ಹೆಜಮಾಡಿಯ ಒಳರಸ್ತೆಯಲ್ಲಿರುವ ಟೋಲ್‌ನಲ್ಲಿ ಕೂಡಲೇ ಸ್ಥಳೀಯರು ವಾಹನ ತಡೆದು ಪ್ರತಿಭಟಿಸಿದಾಗ ತಕ್ಷಣ ಟೋಲ್ ಪ್ರಬಂಧಕ ಸ್ಥಳಕ್ಕಾಗಮಿಸಿ ವಿವರಣೆ ನೀಡಲು ಮುಂದಾದರು. ಸ್ಥಳೀಯರು ಟೋಲ್ ಅಧಿಕಾರಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕೆಲಕಾಲ ಸ್ಥಳೀಯರು ಮತ್ತು ಟೋಲ್ ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಪೋಲಿಸ್ ಇಲಾಖೆ ಹಾಗೂ ಟೋಲ್ ಪ್ರಮುಖರ ಸಭೆಯನ್ನು ಸೋಮವಾರ ನಡೆಸಲಾಗುವುದು ಎಂಬ ನಿರ್ಣಯಕ್ಕೆ ಬರಲಾಯಿತು. ಸ್ಥಳೀಯರಾದ ಸಚಿನ್ ಎಂಬುವವರು ಮಾತನಾಡಿ, ಟೋಲ್ ವಿನಾಯಿತಿ ಇದ್ದರೂ ವಾರದಲ್ಲಿ 5–6 ಬಾರಿ ಹಣ ಕಡಿತಗೊಂಡಿದೆ. ಇದನ್ನು ಪ್ರಶ್ನಿಸಿದಾಗ ಮರು ಪಾವತಿಸಲಾಗುವುದು ಎಂದು ಹೇಳುತ್ತಿದ್ದಾರೆ. ಆ ಹಣವನ್ನು ಟೋಲ್ ಸಿಬ್ಬಂದಿಯ ಸಂಬಳದಿಂದ ಕಡಿತಗೊಳಿಸಲಾಗುತ್ತಿದೆ ಎಂದೂ ತಿಳಿದುಬಂದಿದೆ. ಜಿಲ್ಲಾಧಿಕಾರಿ ಕರೆದ ಸಭೆಯಲ್ಲಿ ಸ್ಥಳೀಯರಿಗೆ ಹೆಜಮಾಡಿ ಟೋಲ್‌ನಲ್ಲಿ ವಿನಾಯಿತಿ ನೀಡಲಾಗಿದೆ. ಸೂಕ್ತ ದಾಖಲೆಗಳನ್ನು ಪಂಚಾಯಿತಿ ಮೂಲಕ ಸಲ್ಲಿಸಲಾಗಿದ್ದರೂ ಸ್ಥಳೀಯರಿಗೆ ಅನ್ಯಾಯ ಮಾಡಲಾಗತ್ತಿದೆ ಎಂದು ಆರೋಪಿಸಿದರು.
ಹೆಜಮಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಪಾಂಡುರಗ, ಪ್ರಾಣೇಶ್ ಹೆಜಮಾಡಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.