ADVERTISEMENT

ಸಮುದಾಯ ಶೌಚಾಲಯ: ಉಡುಪಿ ಜಿಲ್ಲೆ ಸಾಧನೆ

₹ 1.23 ಕೋಟಿ ಅನುದಾನದಲ್ಲಿ 41 ಸಮುದಾಯ ಶೌಚಾಲಯ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2023, 16:06 IST
Last Updated 3 ಮಾರ್ಚ್ 2023, 16:06 IST
ಕಾಪು ತಾಲ್ಲೂಕಿನ ಬೆಳಪು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಲಾಗಿರುವ ಸಮುದಾಯ ಶೌಚಾಲಯ
ಕಾಪು ತಾಲ್ಲೂಕಿನ ಬೆಳಪು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಲಾಗಿರುವ ಸಮುದಾಯ ಶೌಚಾಲಯ   

ಉಡುಪಿ: ಬಯಲು ಬಹಿರ್ದೆಸೆ ಪದ್ದತಿಯನ್ನು ಸಂಪೂರ್ಣವಾಗಿ ತೊಲಗಿಸಿ ಗ್ರಾಮಗಳನ್ನು ನೈರ್ಮಲ್ಯಯುಕ್ತ ಹಾಗೂ ಗ್ರಾಮೀಣ ಜನರ ಜನರ ಆರೋಗ್ಯ ಕಾಪಾಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಸಮುದಾಯ ಶೌಚಾಲಯಗಳ ನಿರ್ಮಾಣಕ್ಕೆ ವಿಶೇಷ ಒತ್ತು ನೀಡಲಾಗಿದೆ.

ಬಯಲು ಶೌಚ ಮುಕ್ತಗೊಳಿಸಲು ಮನೆಗಳಲ್ಲಷ್ಟೆ ಶೌಚಾಲಯವಿದ್ದರೆ ಸಾಲದು, ಹೆಚ್ಚು ಜನರು ಸೇರುವ ಸಾರ್ವಜನಿಕ ಸ್ಥಳಗಳಲ್ಲಿಯೂ ಸಮುದಾಯ ಶೌಚಾಲಯದ ವ್ಯವಸ್ಥೆಯಿರಬೇಕು ಎಂಬುದನ್ನು ಮನಗಂಡಿರುವ ಜಿಲ್ಲಾ ಪಂಚಾಯಿತಿ ಹಲವು ಕಡೆಗಳಲ್ಲಿ ಸಮುದಾಯ ಶೌಚಾಲಯಗಳ ನಿರ್ಮಾಣ ಮಾಡುತ್ತಿದೆ.

ಉಡುಪಿ ಜಿಲ್ಲೆಯನ್ನು ಈಗಾಗಲೇ ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲಾಗಿದ್ದು ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ವೈಯಕ್ತಿಕ ಗೃಹ ಶೌಚಾಲಯಗಳನ್ನು ಕಟ್ಟಿಸಿಕೊಡಲಾಗಿದೆ. ಶೌಚಾಲಯ ನಿರ್ಮಾಣಕ್ಕೆ ಸ್ಥಳದ ಅಭಾವವಿರುವ ಕುಟುಂಬಗಳಿಗೆ ಹಾಗೂ ಹೆಚ್ಚು ಜನಸಂದಣಿ ಸೇರುವ ಸ್ಥಳಗಳು, ಸಂತೆ, ಜಾತ್ರೆ ನಡೆಯುವ ಸ್ಥಳ, ಮಾರುಕಟ್ಟೆ, ಬಸ್ ನಿಲ್ದಾಣಗಳಲ್ಲೂ ಇದೀಗ ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ.

ADVERTISEMENT

ಉಡುಪಿ ಜಿಲ್ಲೆಯಲ್ಲಿ ಇದುವರೆಗೂ ₹ 1.23 ಕೋಟಿ ಅನುದಾನದಲ್ಲಿ 41 ಸಮುದಾಯ ಶೌಚಾಲಯವನ್ನು ನಿರ್ಮಾಣ ಮಾಡಲಾಗಿದ್ದು, 38 ಕಾಮಗಾರಿಗಳು ಮುಕ್ತಾಯಗೊಂಡು ಶೌಚಾಯಗಳ ಬಳಕೆಗೆ ಸಿದ್ದವಾಗಿವೆ. 3 ಕಾಮಗಾರಿಗಳು ಮುಕ್ತಾಯದ ಹಂತದಲ್ಲಿವೆ.

ಸಮುದಾಯ ಶೌಚಾಲಯ ನಿರ್ಮಾಣ ಮಾಡಲು ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ₹ 3 ಲಕ್ಷ ಅನುದಾನ ನೀಡಲಾಗುತ್ತದೆ. ಆದರೆ, ಸಮುದಾಯ ಶೌಚಾಲಯ ನಿರ್ಮಾಣ ಮಾಡಲು ಸೂಕ್ತ ಜಾಗ ಲಭ್ಯವಿರಬೇಕು. ಜಾಗ ಪಂಚಾಯಿತಿಯ ಹೆಸರಲ್ಲಿರಬೇಕು. ಖಾಸಗಿ ಒಡೆತನದ ಜಾಗವಾಗಿದ್ದರೆ ಮಾಲೀಕರ ಒಪ್ಪಿಗೆ ಪತ್ರ ಪಡೆಯಬೇಕಾಗುತ್ತದೆ.

ಜಿಲ್ಲೆಯಲ್ಲಿ ಸಮುದಾಯ ಶೌಚಾಲಯ ನಿರ್ಮಾಣ ಯೋಜನೆಯಡಿ ಉಡುಪಿ ತಾಲ್ಲೂಕಿನಲ್ಲಿ 3, ಬೈಂದೂರು-8,ಕಾಪು-5, ಕುಂದಾಪುರ -10, ಬ್ರಹ್ಮಾವರ-3, ಕಾರ್ಕಳ-8, ಹೆಬ್ರಿಯಲ್ಲಿ 4 ಸಮುದಾಯ ಶೌಚಾಲಯಗಳನ್ನು ನಿರ್ಮಾಣ ಕೈಗೊಳ್ಳಲಾಗಿದೆ.

ಸಮುದಾಯ ಶೌಚಾಲಯಗಳ ಬಳಕೆ ಮತ್ತು ನಿರ್ವಹಣೆಯೂ ಅಚ್ಚುಕಟ್ಟಾಗಿ ನಡೆಯುತ್ತಿದ್ದು, ಪ್ರತಿ ಸಮುದಾಯ ಶೌಚಾಲಯ ನಿರ್ಮಾಣಕ್ಕೆ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ₹ 2.10 ಲಕ್ಷ ಹಾಗೂ ಉಳಿದ ಮೊತ್ತ 90,000ವನ್ನು ಸಂಬಂಧಪಟ್ಟ ಪಂಚಾಯಿತಿಗಳ 15 ನೇ ಹಣಕಾಸು ಯೋಜನೆಯಡಿ ಭರಿಸಲಾಗುತ್ತಿದೆ.

ಬಯಲು ಶೌಚ ಮುಕ್ತ ಸಮಸ್ಯೆಗೆ ಪರಿಹಾರ
ಗೃಹ ಶೌಚಾಲಯ ನಿರ್ಮಾಣ ಮತ್ತು ಬಳಕೆಯ ಜೊತೆಗೆ ಸಮುದಾಯ ಶೌಚಾಲಯಗಳ ನಿರ್ಮಾಣ ಮತ್ತು ಬಳಕೆಯಿಂದ ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಮಾಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಅಗತ್ಯವಿರುವ ಕಡೆಗಳಲ್ಲಿ ಸಮುದಾಯ ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಸಮುದಾಯ ಶೌಚಾಲಯಗಳ ನಿರ್ಮಾಣಕ್ಕೆ ಸಲ್ಲಿಕೆಯಾಗುವ ಪ್ರಸ್ತಾವಗಳನ್ನು ಪರಿಶೀಲಿಸಿ ಅನುದಾನ ಬಿಡುಗಡೆ ಮಾಡಲಾಗುವುದು. ಇದರಿಂದ ಬಯಲು ಶೌಚ ಸಮಸ್ಯೆಗೆ ಪರಿಹಾರ ಹಾಗೂ ಪರಿಸರದ ಸ್ವಚ್ಚತೆ ಸಾಧ್ಯವಾಗಲಿದೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಸಿಇಒ ಎಚ್‌.ಪ್ರಸನ್ನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.