ADVERTISEMENT

ಅದಮಾರು ಶ್ರೀಗಳ ಪುರಪ್ರವೇಶ

ಮೆರವಣಿಗೆಯಲ್ಲಿ 80 ಕಲಾ ತಂಡಗಳು ಭಾಗಿ,

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 10:32 IST
Last Updated 10 ಜನವರಿ 2020, 10:32 IST
ಅದಮಾರು ಮಠದ ಕಿರಿಯ ಯತಿ ಈಶಪ್ರಿಯ ತೀರ್ಥ ಸ್ವಾಮೀಜಿ ಬುಧವಾರ ನಗರದ ಜೋಡುಕಟ್ಟೆಯ ಬಳಿ ಪುರಪ್ರವೇಶ ಮಾಡಿದರು.
ಅದಮಾರು ಮಠದ ಕಿರಿಯ ಯತಿ ಈಶಪ್ರಿಯ ತೀರ್ಥ ಸ್ವಾಮೀಜಿ ಬುಧವಾರ ನಗರದ ಜೋಡುಕಟ್ಟೆಯ ಬಳಿ ಪುರಪ್ರವೇಶ ಮಾಡಿದರು.   

ಉಡುಪಿ: ಅದಮಾರು ಮಠದ ಪರ್ಯಾಯ ಮಹೋತ್ಸವ ಪೂರ್ವಭಾವಿಯಾಗಿ ಬುಧವಾರ ಅದ್ಧೂರಿ ಪುರಪ್ರವೇಶ ನಡೆಯಿತು. ಅದಮಾರು ಮಠದ ಕಿರಿಯ ಯತಿಗಳಾದ ಈಶಪ್ರಿಯ ತೀರ್ಥ ಸ್ವಾಮೀಜಿ ಜೋಡುಕಟ್ಟೆಯಲ್ಲಿ ಪುರಪ್ರವೇಶ ಮಾಡಿದರು.

ಮಧ್ಯಾಹ್ನ ಅದಮಾರು ಮೂಲಮಠದಿಂದ ಜೋಡುಕಟ್ಟೆಗೆ ಆಗಮಿಸಿದ ಭಾವಿ ಪರ್ಯಾಯ ಯತಿಗಳನ್ನು ಭಕ್ತರು ಜಯಘೋಷಗಳೊಂದಿಗೆ ಸ್ವಾಗತಿಸಿದರು. ಜೋಡುಕಟ್ಟೆಯ ದೇವಸ್ಥಾನಕ್ಕೆ ಆಗಮಿಸಿದ ಶ್ರೀಗಳು ಪಟ್ಟದ ದೇವರಾದ ಕಾಳಿಯ ಮರ್ಧನನಿಗೆ ಪೂಜೆ ಸಲ್ಲಿಸಿದರು. ಬಳಿಕ ಪುರಪ್ರವೇಶ ಮೆರವಣಿಗೆಗೆ ಚಾಲನೆ ದೊರೆಯಿತು.‌

80 ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಕುಣಿತ, ಭಜನೆ, ನೃತ್ಯ, ಚಂಡೆ, ಮುಖವಾಡ, ಹುಲಿವೇಷ, ಕೋಲಾಟ ಕಣ್ಣಿಗೆ ಹಬ್ಬವನ್ನುಂಟು ಮಾಡಿದವು. ಕಾಲ್ನಡಿಗೆಯಲ್ಲಿ ಸಾಗಿದ ಈಶಪ್ರಿಯ ತೀರ್ಥರು ಸಂಜೆಯ ಹೊತ್ತಿಗೆ ಕೃಷ್ಣಮಠದ ರಥಬೀದಿ ಪ್ರವೇಶಿಸಿದರು.

ADVERTISEMENT

ಈ ಸಂದರ್ಭ ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ತೀರ್ಥರು ಸಂಪ್ರದಾಯದಂತೆ ಈಶಪ್ರಿಯ ತೀರ್ಥರ ಮೇಲೆ ಅರಳು ಎರಚಿ ಸ್ವಾಗತ ಕೋರಿದರು. ಬಳಿಕ ಮಠದೊಳಗೆ ಕರೆದೊಯ್ದು ಕೃಷ್ಣನ ದರ್ಶನ ಮಾಡಿಸಿದರು.

ನಂತರ 5.55ರ ಮಿಥುನ ಲಗ್ನ ಮುಹೂರ್ತದಲ್ಲಿ ಶ್ರೀಗಳು ಅದಮಾರು ಮಠ ಪ್ರವೇಶಿಸಿದರು. ಈ ವೇಳೆ ಹಿರಿಯ ಯತಿ ವಿಶ್ವಪ್ರಿಯ ತೀರ್ಥರು ಕಿರಿಯ ಯತಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಪಟ್ಟದ ದೇವರಿಗೆ ಪೂಜೆ ಸಲ್ಲಿಸಲಾಯಿತು.

ರಾತ್ರಿ 8ಕ್ಕೆ ಅದಮಾರು ಮಠದ ಎದುರಿಗೆ ಹಾಕಲಾಗಿದ್ದ ವೇದಿಕೆಯಲ್ಲಿ ಅಭಿವಂದನೆ ಹಾಗೂ ಪೌರ ಸಮ್ಮಾನ ಕಾರ್ಯಕ್ರಮ ನೆರವೇರಿತು. ಸಚಿವರಾದ ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣ, ಆರ್‌.ಅಶೋಕ್‌,ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಗಣ್ಯರು ಪುರಪ್ರವೇಶ ಕಾರ್ಯಕ್ರಮದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.