ADVERTISEMENT

ಮಳೆ ಬಿರುಸು: ಪ್ರವಾಹದ ಆತಂಕ

ತುಂಬಿ ಹರಿಯುತ್ತಿರುವ ನದಿಗಳು; ನೆರೆ ಎದುರಿಸಲು ಜಿಲ್ಲಾಡಳಿತ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2020, 16:40 IST
Last Updated 9 ಆಗಸ್ಟ್ 2020, 16:40 IST

ಉಡುಪಿ: ಕರಾವಳಿಯಲ್ಲಿ ಮತ್ತೆ ಮಳೆ ಬಿರುಸುಗೊಂಡಿದೆ. ಕಾರ್ಕಳ, ಸಿದ್ದಾಪುರ, ಕುಂದಾಪುರ, ಬೈಂದೂರು, ಕಾಪು, ಬ್ರಹ್ಮಾವರ ಭಾಗಗಳಲ್ಲಿ ಮಳೆ ಹೆಚ್ಚಾಗಿದ್ದು, ಪ್ರವಾಹ ಭೀತಿ ಸೃಷ್ಟಿಯಾಗಿದೆ.

ಕುಂದಾಪುರ ತಾಲ್ಲೂಕಿನ ಹಾಲಾಡಿ ಹೊಳೆ ತುಂಬಿ ಹರಿಯುತ್ತಿದೆ. ಬೈಂದೂರು ತಾಲ್ಲೂಕಿನಲ್ಲೂ ನದಿಗಳು ತುಂಬಿದ್ದು, ಮಳೆ ಮುಂದುವರಿದರೆ ಹಲವು ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಲಿದೆ.

ಸ್ವರ್ಣಾ ನದಿಯಲ್ಲಿ ಪ್ರವಾಹ ಸಾಧ್ಯತೆಯಿದ್ದು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಜಲ ಆಯೋಗ ಈಚೆಗೆ ಎಚ್ಚರಿಕೆ ನೀಡಿದ್ದು, ನದಿಪಾತ್ರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.

ADVERTISEMENT

ಕೃಷಿ ಭೂಮಿಗೆ ಹಾನಿ:

ಜಿಲ್ಲೆಯಲ್ಲಿ ಭತ್ತದ ಗದ್ದೆ ಹಾಗೂ ತೋಟಗಾರಿಕಾ ಜಮೀನಿಗೆ ಮಳೆ ನೀರು ನುಗ್ಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಮಳೆಯಿಂದಾಗಿ 159 ರಸ್ತೆ, 43 ಸೇತುವೆ, 28 ಕಟ್ಟಡಗಳು ಸೇರಿ ₹ 19 ಕೋಟಿಗೂ ಹೆಚ್ಚು ನಷ್ಟ ಸಂಭವಿಸಿದೆ.

ಕಡಲ್ಕೊರೆತ:

ಕಡಲು ಪ್ರಕ್ಷುಬ್ಧಗೊಂಡಿದ್ದು ಅಲೆಗಳ ಉಬ್ಬರಕ್ಕೆ ಪಡುಬಿದ್ರಿ, ಪಡುಕೆರೆ, ಬೈಂದೂರು, ಮಲ್ಪೆಯಲ್ಲಿ ಕಡಲ್ಕೊರೆತ ಉಂಟಾಗಿದ್ದು 2,115 ಮೀಟರ್‌ ಕಡಲ್ಕೊರೆತ ಉಂಟಾಗಿದೆ. ಅಂದಾಜು ₹ 18.95 ಕೋಟಿ ನಷ್ಟ ಅಂದಾಜಿಸಲಾಗಿದೆ.

5 ಸಾವು:

ಈ ವರ್ಷ ಸುರಿದ ಮಳೆಗೆ ಜಿಲ್ಲೆಯಲ್ಲಿ 5 ಮಂದಿ ಮೃತಪಟ್ಟಿದ್ದು, ತಲಾ ₹ 5 ಲಕ್ಷದಂತೆ ₹ 15 ಲಕ್ಷ ಪರಿಹಾರ ನೀಡಲಾಗಿದೆ. 6 ಜಾನುವಾರು, 168 ಮನೆಗಳಿಗೆ ಭಾಗಶಃ, 2 ಮನೆಗಳಿಗೆ ಪೂರ್ಣ ಹಾನಿ, 8 ದನದ ಕೊಟ್ಟಿಗೆಗಳು ಮಳೆಗೆ ಬಿದ್ದಿವೆ. ಒಟ್ಟು ₹ 67.39 ಲಕ್ಷ ನಷ್ಟ ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.