ಉಡುಪಿ: ಜಿಲ್ಲೆಯಾದ್ಯಂತ ಬುಧವಾರ ಭಾರಿ ಮಳೆ, ಸುಂಟರ ಗಾಳಿಗೆ ಹಲವೆಡೆ ಮರಗಳು ಧರಾಶಾಹಿಯಾಗಿ ಮನೆಗಳಿಗೆ ಹಾನಿಯಾಗಿದೆ. ಕೆಲವೆಡೆ ವಿದ್ಯುತ್ ಕಂಬಗಳು ರಸ್ತೆಗೆ ಉರುಳಿ ವಾಹನಗಳ ಸಂಚಾರಕ್ಕೆ ತೊಡಕುಂಟಾಗಿತ್ತು.
(ಕುಂದಾಪುರ ವರದಿ): ಶಂಕರನಾರಾಯಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಂಟರ ಗಾಳಿಗೆ ಮನೆಗಳಿಗೆ ಹಾನಿಯುಂಟಾಗಿದ್ದು, ಅಡಿಕೆ ತೋಟಗಳು ನಾಶವಾಗಿವೆ.
ಸಿದ್ಧಾಪುರ ವ್ಯಾಪ್ತಿಯ ಕುಳ್ಳಂಜೆ ಗ್ರಾಮದ ಮಾವಿನಕೋಡ್ಲುವಿನ ಸುಬ್ಬ ನಾಯ್ಕ್ ಎಂಬುವವರ ಮನೆ ಹಾಗೂ ದನದ ಕೊಟ್ಟಿಗೆ ಹಾನಿಗೀಡಾಗಿದೆ. ಅಡಿಕೆ ತೋಟ ಕೂಡ ನಾಶವಾಗಿದೆ. 1000 ಕ್ಕೂ ಹೆಚ್ಚು ಅಡಿಕೆ ಮರ, 150ಕ್ಕೂ ಹೆಚ್ಚು ತೆಂಗಿನ ಮರ, ಅಪಾರ ಪ್ರಮಾಣದಲ್ಲಿ ಬಾಳೆ, ಗೇರು, ಕಾಳು ಮೆಣಸಿನ ಗಿಡಗಳು ನಾಶವಾಗಿವೆ. ಅಂದಾಜು ₹10 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ಸುಬ್ಬ ನಾಯ್ಕ್ ಅವರ ಪತ್ನಿ ಸುಶೀಲಾ, ಪುತ್ರಿ ಪ್ರೇಮಾ ನಾಯ್ಕ್ ಅವರಿಗೆ ಗಾಯವಾಗಿದೆ.
ದಿಂಡುಗೋಡು ಚಟ್ರೆ ಕುಳುಂಜೆ ಗ್ರಾಮದ ಗುಲಾಬಿ ಎಂಬುವವರ ಅಡಿಕೆ ತೋಟದಲ್ಲಿ 1,300 ಅಡಿಕೆ ಮರಕ್ಕೆ ಹಾನಿಯಾಗಿದೆ.
ಅಮಾಸೆಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 40ಕ್ಕೂ ಹೆಚ್ಚು ಮನೆ ಹಾಗೂ ದನದ ಕೊಟ್ಟಿಗೆಳು ಹಾಗೂ 20ಕ್ಕೂ ಹೆಚ್ಚು ತೋಟಗಳಿಗೆ ಹಾನಿ ಸಂಭವಿಸಿದೆ. ಹೆಂಗವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 3 ಮನೆಗಳೂ ಹಾನಿಗೀಡಾಗಿವೆ.
ಅಮಾಸೆಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಟ್ಟಾಡಿ, ತೆಂಕೂರು, ಹೊರ್ಲಿಜೆಡ್ಡು, ನಡಂಬೂರು, ಹಳೆ ಅಮಾಸೆಬೈಲು, ಜಡ್ಡಿನಗದ್ದೆ ಪ್ರದೇಶದಲ್ಲಿ ಬೀಸಿದ ಭಾರಿ ಸುಂಟರ ಗಾಳಿಗೆ, 40ಕ್ಕೂ ಹೆಚ್ಚು ಮನೆಗಳಿಗೆ ಹಾಗೂ ದನದ ಕೊಟ್ಟಿಗೆಗಳಿಗೆ ಹಾನಿ ಸಂಭವಿಸಿದೆ. 20ಕ್ಕೂ ಹೆಚ್ಚು ಅಡಿಕೆ ಮತ್ತು ತೆಂಗಿನ ತೋಟಗಳು ನಾಶವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.