ADVERTISEMENT

ವರುಣನ ಆರ್ಭಟಕ್ಕೆ ಮನೆಗಳಿಗೆ ಹಾನಿ

ಉಡುಪಿಯಲ್ಲಿ ಕೊಂಚ ತಗ್ಗಿದ ಮಳೆಯ ಅಬ್ಬರ

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 13:12 IST
Last Updated 1 ಜುಲೈ 2022, 13:12 IST
ಉಡುಪಿಯ ಮೂಡನಿಂಡಬೂರು ಗರಡಿ ವಠಾರ ಜಲಾವೃತಗೊಂಡಿರುವುದು.
ಉಡುಪಿಯ ಮೂಡನಿಂಡಬೂರು ಗರಡಿ ವಠಾರ ಜಲಾವೃತಗೊಂಡಿರುವುದು.   

ಉಡುಪಿ: ಜಿಲ್ಲೆಯಾದ್ಯಂತ ಶುಕ್ರವಾರವೂ ಮಳೆ ಮುಂದುವರಿದಿದ್ದು ವರುಣನ ಅಬ್ಬರ ಕೊಂಚ ತಗ್ಗಿದೆ. ಗಾಳಿ ಮಳೆಗೆ ಜಿಲ್ಲೆಯಾದ್ಯಂತ ಹಲವು ಮನೆಗಳು, ಜಾನುವಾರು ಕೊಟ್ಟಿಗೆಗಳು ಕುಸಿದಿವೆ. ವಿದ್ಯುತ್ ಕಂಬಗಳು ಧರೆಗುರುಳಿವೆ. ಮನೆಗಳ ಮೇಲೆ ಮರಗಳು ಬಿದ್ದು ಅಪಾರ ಹಾನಿ ಸಂಭವಿಸಿದೆ.

ಕಡಲು ಪ್ರಕ್ಷುಬ್ಧ:

ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಕಡಲು ಪ್ರಕ್ಷುಬ್ಧಗೊಂಡಿದ್ದು, ಮಲ್ಪೆ, ಕಾಪು, ಬೈಂದೂರು, ಮರವಂತೆ ಕಡಲ ತೀರಗಳಲ್ಲಿ ದೈತ್ಯ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ. ತೀರಗಳಲ್ಲಿ ವಾಸವಾಗಿರುರವ ಮೀನುಗಾರರ ಮನೆಗಳಿಗೆ ನೀರು ನುಗ್ಗಿದೆ. ಸಂಪರ್ಕ ರಸ್ತೆಗಳು ಕೊಚ್ಚಿಹೋಗಿವೆ.

ADVERTISEMENT

ಬಡಾವಣೆ ಜಲಾವೃತ:

ಉಡುಪಿಯ ಮೂಡನಿಡಂಬೂರಿನಲ್ಲಿರುವ ಬ್ರಹ್ಮ ಬೈದರ್ಕಳ ಗರೋಡಿ ಜಲಾವೃತಗೊಂಡಿದೆ. ಗರೋಡಿ ವಠಾರದಲ್ಲಿ ವಾಸವಾಗಿರುವ ಮನೆಗಳಿಗೆ ನೀರು ನುಗ್ಗಿದ್ದು, ಸಂಪರ್ಕ ರಸ್ತೆಗಳು ಜಲಾವೃತಗೊಂಡು ವಾಹನಗಳ ಸಂಚರಿಸಲು ಸಾದ್ಯವಾಗುತ್ತಿಲ್ಲ. ಸಮೀಪದಲ್ಲೇ ಹರಿಯುವ ಕಲ್ಸಂಕ ತೋಡು ಉಕ್ಕಿ ಹರಿದು, ತ್ಯಾಜ್ಯದ ದುರ್ವಾಸನೆಗೆ ಸಾರ್ವಜನಿಕರು ಮೂಗುಮುಚ್ಚಿಕೊಂಡು ಸಂಚರಿಸುವಂತಾಗಿದೆ.

ಮೂಡ ನಿಡಂಬೂರು ಮುಖ್ಯರಸ್ತೆಯ ಮ್ಯಾನ್‌ಹೋಲ್‌ಗಳು ತುಂಬಿ ಹೊಲಸು ರಸ್ತೆಗೆ ಹರಿಯುತ್ತಿದ್ದು ಅಸಹನೀಯ ವಾತಾವರಣ ನಿರ್ಮಾಣವಾಗಿದೆ. ಪ್ರತಿ ಮಳೆಗಾಲದಲ್ಲೂ ಕೃತಕ ನೆರೆ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೂ ಸ್ಥಳೀಯ ಜನಪ್ರತಿನಿಧಿ ಹಾಗೂ ಉಡುಪಿ ನಗರಸಭೆ ತಲೆಕೆಡಿಸಿಕೊಳ್ಳುತ್ತಿಲ್ಲ. ಪ್ರತಿ ಮಳೆಗಾಲದಲ್ಲಿ ಆತಂಕದಲ್ಲಿ ದಿನದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೈಲಕೆರೆ, ಅಂಬಲಪಾಡಿ, ಗುಂಡಿಬೈಲು, ಮಠದಬೆಟ್ಟು ಪ್ರದೇಶಗಳಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ. ರಾಷ್ಟ್ರೀಯ ಹೆದ್ದಾರಿ 66ರ ಸರ್ವೀಸ್ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರಿಗೆ ಸಮಸ್ಯೆಯಾಯಿತು.

ಕುಂದಾಪುರ ತಾಲ್ಲೂಕಿನ ತಲ್ಲೂರು, ಗಂಗೊಳ್ಳಿ, ತೆಕ್ಕಟ್ಟೆ, ಹೆಂಗವಳ್ಳಿ, ಕಾಪು ತಾಲ್ಲೂಕಿನ ಮಟ್ಟು, ಮೂಡಬೆಟ್ಟು, ಬ್ರಹ್ಮಾವರ ತಾಲ್ಲೂಕಿನ ಮಣೂರು, ಹಾವಂಜೆ, ಕುಮ್ರಗೋಡು, ಹಲುವಳ್ಳಿ, ಉಡುಪಿ ತಾಲ್ಲೂಕಿನ ಉದ್ಯಾವರ, ಮೂಡುತೋನ್ಸೆ ಗ್ರಾಮದಲ್ಲಿ ಗಾಳಿ ಮಳೆಗೆ ಮನೆಗಳಿಗೆ ಹಾನಿಯಾಗಿದೆ.

ಸರಾಸರಿ 81.7 ಮಿ.ಮೀ ಮಳೆ:

ಉಡುಪಿ ತಾಲ್ಲೂಕಿನಲ್ಲಿ 97.6 ಮಿ.ಮೀ, ಬ್ರಹ್ಮಾವರ ತಾಲ್ಲೂಕಿನಲ್ಲಿ 102.9 ಮಿ.ಮೀ, ಕಾಪುವಿನಲ್ಲಿ 94.6 ಸೆಂ.ಮೀ, ಕುಂದಾಪುರದಲ್ಲಿ 78.9 ಮಿ.ಮೀ, ಬೈಂದೂರಿನಲ್ಲಿ 72.7 ಮಿ.ಮೀ, ಕಾರ್ಕಳದಲ್ಲಿ 67.3 ಮಿ.ಮೀ, ಹೆಬ್ರಿ 86.7 ಮಿ.ಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ 81.7 ಮಿ.ಮೀ. ಮಳೆಯಾಗಿದೆ.

ಭಾರಿ ಮಳೆ ಹಿನ್ನೆಲೆ: ಸಮುದ್ರಕ್ಕೆ ಇಳಿಯದಂತೆ ಸೂಚನೆ

ಹವಾಮಾನ ಇಲಾಖೆ ಮತ್ತು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸೂಚನೆಯಂತೆ ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇದ್ದು, ಮೀನುಗಾರರು ಹಾಗೂ ಪ್ರವಾಸಿಗರು ನದಿಗಳಿಗೆ ಹಾಗೂ ಸಮುದ್ರಕ್ಕೆ ಇಳಿಯಬಾರದು. ತಗ್ಗು ಪ್ರದೇಶ, ಕೆರೆ, ನದಿ ತೀರ ಹಾಗೂ ಸಮುದ್ರ ತೀರ ಪ್ರದೇಶಗಳಿಗೆ ಮಕ್ಕಳು ಹೋಗದಂತೆ ಪಾಲಕರು ಜಾಗೃತಿ ವಹಿಸಬೇಕು. ಅಪಾಯಕಾರಿ ವಿದ್ಯುತ್ ಕಂಬ ಹಾಗೂ ಮರಗಳ ಕೆಳಗೆ ನಿಲ್ಲಬಾರದು. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರಸ್ಥಾನದಲ್ಲಿ ಇರಬೇಕು. ಹೆಚ್ಚಿನ ಮಾಹಿತಿಗೆ ಟೋಲ್ ಫ್ರೀ ಸಂಖ್ಯೆ:1077, ದೂರವಾಣಿ: 0820-2574802 ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.