
ಉಡುಪಿ: ಜಿಲ್ಲೆಯ ಮೂವರು ಸಾಧಕರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಕೋಟ ಸುರೇಶ ಬಂಗೇರ:
ಕೋಟ ಅಮೃತೇಶ್ವರಿ ಮೇಳದ ಯಕ್ಷಗಾನ ಕಲಾವಿದ ಮಟ್ಪಾಡಿ ತಿಟ್ಟು ನಿವಾಸಿ ಕೋಟ ಸುರೇಶ್ ಬಂಗೇರ ಅವರು ಯಕ್ಷಗಾನದ ದಂತಕಥೆ ಶಿರಿಯಾರ ಮಂಜು ನಾಯ್ಕರ ಮಾತಿನ ಶೈಲಿ, ಗುರು ವೀರಭದ್ರ ನಾಯ್ಕರ ಹೆಜ್ಜೆಯ ಶೈಲಿ ಮತ್ತು ಮೊಳಹಳ್ಳಿ ಹಿರಿಯ ನಾಯ್ಕರ ರಂಗ ತಂತ್ರವನ್ನು ಮೈಗೂಡಿಸಿಕೊಂಡಿದ್ದಾರೆ.
ಯಕ್ಷರಂಗದಲ್ಲಿ ಸುಧನ್ವ, ಪುಷ್ಕಳ, ಶುಭರಂಗ, ಮಾರ್ತಾಂಡತೇಜ, ಅರ್ಜುನ, ಕೃಷ್ಣ, ತಾಮ್ರದ್ವಾಜ ಮತ್ತು ಪರಶುರಾಮರಂತಹ ಐತಿಹಾಸಿಕ ಪಾತ್ರಗಳನ್ನು ಧರಿಸಿದ್ದಾರೆ. ಸೌಕೂರು, ಸಾಲಿಗ್ರಾಮ, ಪೆರ್ಡೂರು, ಕಮಲಶಿಲೆ, ಅಮೃತೇಶ್ವರಿ ಮುಂತಾದ ವಿವಿಧ ತಂಡಗಳಲ್ಲಿ 36 ವರ್ಷಗಳಿಗೂ ಹೆಚ್ಚು ಕಾಲ ಯಕ್ಷಗಾನ ಕಲೆಗೆ ಸೇವೆ ಸಲ್ಲಿಸಿದ್ದಾರೆ.
ಐರ್‌ಬೈಲು ಆನಂದ ಶೆಟ್ಟಿ:
ಯಕ್ಷಗಾನ ಕಲಾವಿದ ಐರ್‌ಬೈಲು ಆನಂದ ಶೆಟ್ಟಿ ಅವರು ಕುಂದಾಪುರ ತಾಲ್ಲೂಕಿನಲ್ಲಿ 1961ರಲ್ಲಿ ರಾಮಣ್ಣ ಶೆಟ್ಟಿ- ನರಸಮ್ಮ ದಂಪತಿ ಪುತ್ರನಾಗಿ ಜನಿಸಿದರು. 7ನೇ ತರಗತಿ ವರೆಗೆ ಶಿಕ್ಷಣ ಪಡೆದ ಅವರು, ಸುತ್ತಲಿನ ಊರಲ್ಲಿ ನಡೆಯುತ್ತಿದ್ದ ಆಟಗಳನ್ನು ನೋಡಿ, ಆಕರ್ಷಿತರಾಗಿ 15ನೇ ವರ್ಷಕ್ಕೆ ಯಕ್ಷಗಾನ ಕ್ಷೇತ್ರಕ್ಕೆ ಕಾಲಿರಿಸಿದರು.
ಹಾರಾಡಿ ಸರ್ವೋತ್ತಮ ಗಾಣಿಗರಿಂದ ಹೆಜ್ಜೆಗಾರಿಕೆ ಕಲಿತ ಆನಂದ ಶೆಟ್ಟಿ ಅವರು ಗಂಭೀರ ಸ್ವರ, ಶೈಲೀಕೃತ ನೃತ್ಯ, ಉತ್ಕೃಷ್ಟ ಭಾವಾಭಿವ್ಯಕ್ತಿ, ಪಾಂಡಿತ್ಯಭರಿತ ವಾಕ್‌ಸಂಪತ್ತಿನಿಂದ ಪ್ರಸಿದ್ಧರಾಗಿದ್ದಾರೆ.
ಮಾರಣಕಟ್ಟೆ ಮೇಳದಲ್ಲಿಯೇ 48 ವರ್ಷಗಳ ಯಕ್ಷಗಾನದ ಸೇವೆ ಮಾಡಿದ್ದಾರೆ. ಶ್ರೀರಾಮ, ಕಂಸ, ರಾವಣ, ಭಸ್ಮಾಸುರ, ದುಷ್ಟಬುದ್ಧಿ, ಕರ್ಣ, ಅರ್ಜುನ, ಹರಿಶ್ಚಂದ್ರ, ಕೀಚಕ, ವೀರಮಣಿ, ಮೂಕಾಸುರ ಮೊದಲಾದ ಪಾತ್ರಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ಎನ್. ಸೀತಾರಾಮ್ ಶೆಟ್ಟಿ:
ಡಾ. ಎನ್ ಸೀತಾರಾಮ್ ಶೆಟ್ಟಿ ಅವರು 1957ರಲ್ಲಿ ಕುಂದಾಪುರದಲ್ಲಿ ಚಾರ್ಮಕ್ಕಿ ನಾರಾಯಣ ಶೆಟ್ಟಿ ಮತ್ತು ಅಕ್ಕಯ ಶೆಟ್ಟಿ ದಂಪತಿ ಪುತ್ರನಾಗಿ ಜನಿಸಿದರು. ಅವರು ಬೆಂಗಳೂರಿನ ಬಿಷಪ್ ಕಾಟನ್ ಬಾಯ್ಸ್ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದರು. 1982 ರಲ್ಲಿ ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಿಂದ ಅವರು ಎಂಬಿಬಿಎಸ್ ಪೂರ್ಣಗೊಳಿಸಿದರು.
ವೈದ್ಯಕೀಯ ಪದವಿಯನ್ನು ಪೂರ್ಣಗೊಳಿಸಿ 1983 ರಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ತಂದೆ ಸ್ಥಾಪಿಸಿದ ಶಂಕರನಾರಾಯಣ ಕನ್‌ಸ್ಟ್ರಕ್ಷನ್ ಸಂಸ್ಥೆಗೆ ಸೇರಿದರು. ಇದು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ, ಮಧ್ಯಪ್ರದೇಶ ಮೊದಲಾದ ರಾಜ್ಯಗಳಲ್ಲಿ ಮೂಲಸೌಕರ್ಯ ಯೋಜನೆಗಳನ್ನು ಕೈಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.