ಕಾರ್ಕಳ: ಇಲ್ಲಿನ ಸಾಹಿತ್ಯ ಸಂಘದ ಪ್ರವರ್ತಕ ದಿ. ಪ್ರೊ. ರಾಮಚಂದ್ರರ ಸಾಹಿತ್ಯ ಪರಿಚಾರಿಕೆ ಚಿರಸ್ಮರಣೀಯವಾದುದು ಎಂದು ಸಾಹಿತಿ, ನಿವೃತ್ತ ಕನ್ನಡ ಪ್ರಾಧ್ಯಾಪಕ ತಾಳ್ತಜೆ ವಸಂತ ಕುಮಾರ್ ಹೇಳಿದರು.
ಇಲ್ಲಿನ ಅನಂತಶಯನದ ಪ್ರಕಾಶ್ ಹೋಟೆಲ್‌ನ ಸಂಭ್ರಮ ಸಭಾಂಗಣದಲ್ಲಿ ಸಾಹಿತ್ಯ ಸಂಘದ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಪ್ರೊ.ಎಂ. ರಾಮಚಂದ್ರ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕ ನರೇಂದ್ರ ಕುಮಾರ್ ಅವರಿಗೆ ‘ಪ್ರೊ.ಎಂ. ರಾಮಚಂದ್ರ ಸ್ಮಾರಕ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ನುಡಿ ನಮನ ಸಲ್ಲಿಸಿದ ನಿವೃತ್ತ ಪ್ರಾಚಾರ್ಯ ಕೆ.ಗುಣಪಾಲ ಕಡಂಬ, ‘ರಾಮಚಂದ್ರರ ಒಡನಾಟ, ಶಿಸ್ತುಬದ್ಧ ಜೀವನ, ಶುಭ್ರ ವಸನಧಾರಿಯಾಗಿ ಯಾವುದೇ ಕಪ್ಪು ಚುಕ್ಕೆಯಿಲ್ಲದಂತೆ ಎಲ್ಲ ವರ್ಗದ ಸಾಹಿತಿಗಳೊಂದಿಗೆ ನಡೆದುಕೊಂಡ ರೀತಿ ಅನನ್ಯವಾದುದು’ ಎಂದರು.
ಕಾರ್ಕಳ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಸನ್ಮಾನಿತರನ್ನು ಪರಿಚಯಿಸಿದರು. ಸಾಹಿತ್ಯ ಸಂಘದ ಗೌರವಾಧ್ಯಕ್ಷ ಆರ್. ತುಕಾರಾಮ ನಾಯಕ್ ಅತಿಥಿಗಳನ್ನು ಗೌರವಿಸಿದರು. ವಿದ್ವಾನ್ ವೈ. ಅನಂತಪದ್ಮನಾಭ ಭಟ್ ಅವರು, ರಾಮಚಂದ್ರರಿಗೆ ಪ್ರಿಯವಾದ ಕುವೆಂಪು ಅವರ ಎರಡು ಕವನಗಳನ್ನು ಹಾಡಿದರು. ಸಂಘದ ಕೋಶಾಧಿಕಾರಿ ಎಸ್. ನಿತ್ಯಾನಂದ ಪೈ ಸ್ಮರಣಿಕೆ ನೀಡಿದರು.
ಕಾರ್ಯಕ್ರಮಕ್ಕೆ ಮೊದಲು ಈಚೆಗೆ ನಿಧನರಾದ ಕವಿ ಎಚ್. ಎಸ್.ವೆಂಕಟೇಶಮೂರ್ತಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ರಾಜೇಶ್ ರೆಂಜಾಳ ಸ್ವಾಗತಿಸಿದರು. ಶ್ರುತಿ ಕೆ. ಶಿಂಧೆ ಸಹಕರಿಸಿದರು. ನಿವೃತ್ತ ಶಿಕ್ಷಕ ಮುನಿರಾಜ ರೆಂಜಾಳ ನಿರೂಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಪ್ರೊ. ಪದ್ಮನಾಭ ಗೌಡ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.