ಕುಂದಾಪುರ: ಇಲ್ಲಿಗೆ ಸಮೀಪದ ಕುಂಭಾಶಿಯ ಆನೆಗುಡ್ಡೆ ವಿನಾಯಕ ದೇವಸ್ಥಾನದ ಬ್ರಹ್ಮರಥೋತ್ಸವ ಗುರುವಾರ ವೈಭವದಿಂದ ಜರುಗಿತು.
ಶ್ರೀ ಕ್ರೋಧಿನಾಮ ಸಂವತ್ಸರದ ಮಾರ್ಗಶಿರ ಶುದ್ಧ ಚತುರ್ಥಿಯ ಅಭಿಜಿನ್ ಮುಹೂರ್ತದಲ್ಲಿ ರಥೋತ್ಸವ ನಡೆಯಿತು. ರಥೋತ್ಸವ ಹಾಗೂ ಲೋಕಕಲ್ಯಾಣಾರ್ಥವಾಗಿ ಶ್ರೀದೇವರಿಗೆ ಯಂತ್ರೋದ್ಧಾರ ಪೂರ್ವಕ ಅಷ್ಟೋತ್ತರ ಸಹಸ್ರ ನಾಳಿಕೇರ ಗಣಯಾಗ, ಸುವರ್ಣ ಪಲ್ಲಕಿ ಉತ್ಸವ, ಮಹಾ ಅನ್ನಸಂತರ್ಪಣೆ, ಶಯನೋತ್ಸವ, ರಾತ್ರಿ ಸುಡುಮದ್ದು ಪ್ರದರ್ಶನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಭಜಕರಿಂದ ಪ್ರಸಾದ ಮತ್ತು ಪಾನಕ ವಿತರಣೆ ನಡೆಯಿತು.
ದೇವಳದ ವತಿಯಿಂದ ಭಕ್ತರಿಗೆ ದೇವರ ದರ್ಶನ ಮತ್ತು ಬ್ರಹ್ಮರಥೋತ್ಸವ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆಯಿಂದಲೇ ದೇವಸ್ಥಾನಕ್ಕೆ ಬಂದಿದ್ದ ಭಕ್ತರು ದೇವರ ದರ್ಶನ ಪಡೆದು ಭಜನೆ, ನಾಮ ಸಂಕೀರ್ತನೆಗಳನ್ನು ನಡೆಸಿ ಭಕ್ತಿಯ ಪರಾಕಾಷ್ಟೆ ತೋರಿದರು. ರಥೋತ್ಸವದ ವೇಳೆ ಚಂಡೆವಾದನ, ಪಂಚವಾದ್ಯ, ಪಲ್ಲಕ್ಕಿ ಉತ್ಸವ, ಕೀಲು ಕುದುರೆ, ಗೊಂಬೆ ಕುಣಿತ, ತಟ್ಟಿರಾಯ ಕುಣಿತಗಳು ಉತ್ಸವದ ಮೆರುಗನ್ನು ಹೆಚ್ಚಿಸಿದವು.
ಹಬ್ಬದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಉಡುಪಿಯ ವಿಧೂಷಿ ಶುಭಶ್ರೀ ಅಡಿಗ ಹಾಗೂ ಶಿಷ್ಯೆಯರಿಂದ ವೀಣಾನಾದಮೃತ, ಸಂಜೆ ಸಾಲಿಗ್ರಾಮ ಸತೀಶ್ ದೇವಾಡಿಗ ತಂಡದವರಿಂದ ಸ್ಯಾಕ್ಸೋಫೋನ್ ವಾದನ, ರಾತ್ರಿ ಶ್ರೀನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಶ್ರೀಕ್ಷೇತ್ರ ಮೆಕ್ಕೆಕಟ್ಟು ಶಿರಿಯಾರ ಇವರಿಂದ ಪೌರಾಣಿಕ ಪ್ರಸಂಗದ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿದೆ.
ಶುಕ್ರವಾರ ಚೂರ್ಣೋತ್ಸವ: ಅವಭೃತ ಸ್ನಾನ, ವಸಂತಾರಾಧನೆ, ಮಂತ್ರಾಕ್ಷತೆ ಪ್ರಸಾದ ವಿತರಣೆಯೊಂದಿಗೆ ಬ್ರಹ್ಮರಥೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿದೆ.
ಸುಗುಮ ಸಂಚಾರಕ್ಕೆ ಆದ್ಯತೆ: ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ನಂಜಪ್ಪ ನೇತೃತ್ವದಲ್ಲಿ ಪಿಎಸ್ಐ ವಿನಯ ಕೊರ್ಲಹಳ್ಳಿ, ಅಪರಾಧ ಪತ್ತೆದಳದ ಪಿಎಸ್ಐ ಪುಷ್ಪಾ, ಸಂಚಾರಿ ಠಾಣಾಧಿಕಾರಿ ಪ್ರಸಾದ್ ಮತ್ತು ಪಿಎಸ್ಐ ಸುದರ್ಶನ ಅವರ ಸಹಕಾರದೊಂದಿಗೆ ಭಕ್ತರಿಗೆ ದೇವರ ದರ್ಶನ ಪಡೆಯಲು ಹಾಗೂ ಪಾರ್ಕಿಂಗ್ ಸೇರಿದಂತೆ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಆನೆಗುಡ್ಡೆ ವಿನಾಯಕ ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ಕೆ.ಶ್ರೀರಮಣ ಉಪಾಧ್ಯಾಯ, ಅನುವಂಶಿಕ ಪರ್ಯಾಯ ಅರ್ಚಕ ಕೆ.ಕೃಷ್ಣಾನಂದ ಉಪಾಧ್ಯಾಯ ಮತ್ತು ಸಹೋದರರು, ನಿವೃತ್ತ ಅನುವಂಶಿಕ ಆಡಳಿತ ಮೊಕ್ತೇಸರ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಅನುವಂಶಿಕ ಮೊಕ್ತೇಸರರಾದ ಕೆ.ಪದ್ಮನಾಭ ಉಪಾಧ್ಯಾಯ, ಕೆ.ನಿರಂಜನ್ ಉಪಾಧ್ಯಾಯ, ವ್ಯವಸ್ಥಾಪಕ ನಟೇಶ್ ಕಾರಂತ್, ಆಡಳಿತ ಮಂಡಳಿಯ ಸದಸ್ಯರು, ಉಪಾಧ್ಯಾಯ ಕುಟುಂಬದ ಸದಸ್ಯರು, ದೇವಳದ ಅರ್ಚಕ ಮತ್ತು ಸಿಬ್ಬಂದಿಗಳು, ಭಕ್ತರು ಇದ್ದರು.
ಕುಂದಾಪುರ ಸಹಾಯಕ ಆಯುಕ್ತ ಮಹೇಶ್ಚಂದ್ರ, ಧಾರ್ಮಿಕ ಮುಖಂಡ ಮಲ್ಯಾಡಿ ಶಿವರಾಮ ಶೆಟ್ಟಿ, ಕುಂಭಾಶಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಶ್ವೇತಾ ಶ್ರೀನಿಧಿ, ಕುಂಭಾಶಿ ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಮಂಜುನಾಥ್ ಕಾಮತ್, ತೆಕ್ಕಟ್ಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಜಯ ಭಂಡಾರಿ ಮತ್ತಿತರರು ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.