
ಉಡುಪಿ: ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಶಿಲಾಯುಗಕ್ಕೆ ಸಂಬಂಧಿಸಿ ಹೆಚ್ಚಿನ ಸಂಶೋಧನೆಯಾಗಿಲ್ಲ. ಆ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯುವ ಅಗತ್ಯ ಇದೆ ಎಂದು ಪುರಾತತ್ವ ವಿದ್ವಾಂಸ ರವೀಂದ್ರ ಕೋರಿಸೆಟ್ಟರ್ ಅಭಿಪ್ರಾಯಪಟ್ಟರು.
ಉಡುಪಿಯ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಆದಿಮ ಕಲಾ ಟ್ರಸ್ಟ್ ಉಡುಪಿಯ ಮೊದಲ ವಾರ್ಷಿಕೋತ್ಸವದ ಸವಿನೆನಪಿಗಾಗಿ ನೀಡುವ ‘ಆದಿಮ ಕಲಾ ರತ್ನ’ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಕರಾವಳಿ ಪ್ರದೇಶವು ಪುರಾತತ್ವ ಸಂಶೋಧನೆಗೆ ಸೂಕ್ತ ಪ್ರದೇಶವಾಗಿದೆ. ಮುಂದಿನ ಪೀಳಿಗೆಯು ಪುರಾತತ್ವ ಸಂಶೋಧನೆಯ ಮಹತ್ವವನ್ನು ಅರ್ಥೈಸಿಕೊಂಡು ಗತಿಸಿ ಹೋದ ಇತಿಹಾಸವನ್ನು ಹೊರ ತೆಗೆಯುವ ಕೆಲಸ ಮಾಡಬೇಕು ಎಂದು ಹೇಳಿದರು.
ಪುರಾತತ್ವ ಸಂಶೋಧನೆಯು ಇಂದು ಸರ್ಕಾರಿ ಸಂಸ್ಥೆಗಳ ಕೈಯಲ್ಲಿಲ್ಲ. ಪುರಾತತ್ವ ಸಂಶೋಧನೆಗೆ ಉತ್ತೇಜನ ನೀಡುವುದರಿಂದ ಅವುಗಳು ದೂರ ಸರಿಯುತ್ತಿವೆ. ಇಡೀ ದೇಶದಲ್ಲಿ ಅದೇ ಸ್ಥಿತಿ ಇದೆ. ಆದಿಮ ಟ್ರಸ್ಟ್‌ನಂತಹ ಸಂಸ್ಥೆಗಳು ಮುತುವರ್ಜಿ ವಹಿಸಿ ಪುರಾತತ್ವ ಸಂಶೋಧನೆಯಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯ ಕೆಲಸ ಎಂದರು.
ಚಿಂತಕ ವರದೇಶ ಹಿರೇಗಂಗೆ ಮಾತನಾಡಿ, ಹಲವು ರೀತಿಯ ಸಂಸ್ಕೃತಿಗಳ ಪರಿಚಯ ಆಗಬೇಕು. ಅದಕ್ಕೆ ಸಂಶೋಧನೆ ಅತ್ಯಗತ್ಯವಾಗಿದೆ ಎಂದು ಹೇಳಿದರು.
ಇಂದು ಸಂಶೋಧನೆ ಇಲ್ಲದೆ ಚರಿತ್ರೆಯನ್ನು ಚರ್ಚೆಗೆ ತೆಗೆದುಕೊಳ್ಳಲಾಗುತ್ತಿದೆ. ಅದು ಸಲ್ಲದು, ಸಂಶೋಧನೆ ಆಧರಿಸಿಯೇ ಚರ್ಚೆಗಳು ನಡೆಯಬೇಕು ಮತ್ತು ಆ ಮೂಲಕ ಸತ್ಯದ ಶೋಧನೆಯಾಗಬೇಕು ಎಂದರು.
ರಾಣಿ ಚಿಕ್ಕಾಯಿ ತಾಯಿ ಟ್ರಸ್ಟ್ ಅಧ್ಯಕ್ಷ ಡಾ. ರಘುರಾಮ ಶೆಟ್ಟಿ ಗುಳ್ಳಾಡಿ ಮಾತನಾಡಿ, ಜನರಿಗೆ ಇತಿಹಾಸದ ಬಗ್ಗೆ ಹೆಚ್ಚು ಹೆಚ್ಚು ಅರಿವು ಮೂಡಿಸುವ ಕೆಲಸ ನಡೆಯಬೇಕು. ರಾಣಿ ಚಿಕ್ಕಾಯಿ ಉತ್ಸವವನ್ನು ಸರ್ಕಾರವೇ ನಡೆಸಬೇಕು ಎಂದು ಹೇಳಿದರು.
ಆದಿಮ ಕಲಾ ಟ್ರಸ್ಟ್ ಅಧ್ಯಕ್ಷ ರಾಜೇಂದ್ರ ಕೇರ್ಕರ್ ಮಾತನಾಡಿ, ಗೋವಾದ ದೂಧ್‌ಸಾಗರ್ ಜಲಪಾತವು ಕೇವಲ ಜಲಪಾತವಲ್ಲ. ಅಲ್ಲಿ ಹಲವಾರು ಪುರಾತನ ಸಮುದಾಯಗಳು ವಾಸಿಸುತ್ತಿದ್ದವು. ಶಿಲಾಯುಗಕ್ಕೆ ಸಂಬಂಧಿಸಿದ ಹಲವು ಕುರುಹುಗಳನ್ನು ರವೀಂದ್ರ ಕೋರಿಸೆಟ್ಟರ್ ಅವರು ಅಲ್ಲಿಂದ ಪತ್ತೆಹಚ್ಚಿದ್ದಾರೆ ಎಂದರು.
ಆರ್. ಮೋಹನ್ ಕೃತಿ ಪರಿಚಯ ಮಾಡಿದರು. ಟ್ರಸ್ಟ್ ಉಪಾಧ್ಯಕ್ಷ ಯೂಸುಫ್ ಹೈದರ್ ಉಪಸ್ಥಿತರಿದ್ದರು. ಟ್ರಸ್ಟ್ ಸ್ಥಾಪಕ ಸಂಚಾಲಕ ಟಿ. ಮುರುಗೇಶಿ ಸ್ವಾಗತಿಸಿದರು. ಶ್ರೇಯಸ್ ಕೋಲ್ಪೆ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.