ಉಡುಪಿ: ರೆಡ್‌ಕ್ರಾಸ್ ಸಂಸ್ಥೆಯು ಜನರ ಆರೋಗ್ಯ ರಕ್ಷಣೆಗಾಗಿ ಯಾವುದೇ ಫಲಾಪೇಕ್ಷಿಯಿಲ್ಲದೆ ಮಾನವೀಯ ನೆಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಅದರ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಹೇಳಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ರಾಜ್ಯ ಶಾಖೆ ಮತ್ತು ಜಿಲ್ಲಾ ಶಾಖೆಯ ವತಿಯಿಂದ ನಗರದ ಅಜ್ಜರಕಾಡು ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿನೇವಾ ಒಪ್ಪಂದ ಐತಿಹಾಸಿಕ ಆಚರಣೆಯ ಸಮಾರೋಪ ಕಾರ್ಯಕ್ರಮ ಹಾಗೂ ಮಾದಕ ವ್ಯಸನ ವಿರೋಧಿ ಜಾಥಾ ಉದ್ಘಾಟಿಸಿ ಮಾತನಾಡಿದರು.
ರೆಡ್‌ಕ್ರಾಸ್ ಸಂಸ್ಥೆಯು ಪ್ರಾಕೃತಿಕ ವಿಕೋಪ, ಬರ ನಿರ್ವಹಣೆ, ತುರ್ತು ಅಗತ್ಯದ ಸಂದರ್ಭದಲ್ಲಿ ಸಲ್ಲಿಸುತ್ತಿರುವ ಸೇವೆ ಜಾಗತಿಕ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ನಿರ್ಗತಿಕರ ಬದುಕಿಗೆ ಆಶಾಕಿರಣವಾಗಿರುವ ಸಂಸ್ಥೆಯು ನಿರಂತರವಾಗಿ ಅಗತ್ಯವಿರುವವರಿಗೆ ವೈದ್ಯಕೀಯ ಚಿಕಿತ್ಸೆ, ತುರ್ತು ನೆರವು, ರಕ್ತದಾನ, ಸ್ವಚ್ಛತೆ ಮತ್ತು ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ರೆಡ್‌ಕ್ರಾಸ್ ಸಂಸ್ಥೆಯು ಜನಸಾಮಾನ್ಯರ ಹಾಗೂ ಸರ್ಕಾರದ ಮಧ್ಯೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಉಪಸಭಾಪತಿ ಡಾ.ಅಶೋಕ್ ಕುಮಾರ್ ವೈ.ಜಿ. ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಜಿನೇವಾ ಒಪ್ಪಂದ ಐತಿಹಾಸಿಕ ಆಚರಣೆಯ ಸಮಾರೋಪ ಅಂಗವಾಗಿ ಅರ್ಹ ಫಲಾನುಭವಿಗಳಿಗೆ ಕೃತಕ ಕಾಲು, ಶ್ರವಣ ಸಾಧನ, ಪೊಲೀಸ್ ಇಲಾಖೆಗೆ ರೈನ್ ಕೋಟ್, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯಕೀಯ ಕಿಟ್, ಹೊಲಿಗೆ ಯಂತ್ರಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು.
ನಗರಸಭಾ ಸದಸ್ಯ ಸದಾನಂದ ಮೂಲ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ., ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನಾ, ಸ್ವಪ್ನಾ ಸುರೇಶ್, ರಮಾದೇವಿ, ಟಿ. ಚಂದ್ರಶೇಖರ್, ಲಯನ್ಸ್ ಕ್ಲಬ್‌ನ ಪದಾಧಿಕಾರಿಗಳು ಭಾಗವಹಿಸಿದ್ದರು.
ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿದರು. ರಾಘವೇಂದ್ರ ಪ್ರಭು ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ಮಾದಕ ವ್ಯಸನ ವಿರೋಧಿ ಜಾಥಾಕ್ಕೆ ರೆಡ್‌ಕ್ರಾಸ್ ಸಂಸ್ಥೆ ಕುಂದಾಪುರ ತಾಲ್ಲೂಕು ಸಭಾಪತಿ ಎಸ್. ಜಯಕರ ಶೆಟ್ಟಿ ಚಾಲನೆ ನೀಡಿದರು.
ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕೆಲಸಕ್ಕೆ ಯುವಜನರು ಕೈಜೋಡಿಸಬೇಕುಸ್ವರೂಪಾ ಟಿ.ಕೆ. ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.