ADVERTISEMENT

ಧರ್ಮ, ಭಕ್ತಿ ಪ್ರದರ್ಶನಕ್ಕಿರಿಸುವ ವಸ್ತುಗಳಲ್ಲ: ಡಿ.ಕೆ. ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 18:24 IST
Last Updated 30 ಆಗಸ್ಟ್ 2025, 18:24 IST
ಉಡುಪಿಯ ಕೃಷ್ಣ ಮಠಕ್ಕೆ ಶನಿವಾರ ಭೇಟಿ ನೀಡಿದ  ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ದೇವರ ದರ್ಶನ ಪಡೆದು, ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಶ್ರೀಗಳಿಂದ ಪ್ರಸಾದ ಸ್ವೀಕರಿಸಿದರು
ಉಡುಪಿಯ ಕೃಷ್ಣ ಮಠಕ್ಕೆ ಶನಿವಾರ ಭೇಟಿ ನೀಡಿದ  ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ದೇವರ ದರ್ಶನ ಪಡೆದು, ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಶ್ರೀಗಳಿಂದ ಪ್ರಸಾದ ಸ್ವೀಕರಿಸಿದರು   

ಉಡುಪಿ: ಧರ್ಮ, ಪೂಜೆ, ಭಕ್ತಿ ಇವು ಪ್ರದರ್ಶನಕ್ಕೆ ಇರಿಸುವ ವಸ್ತುಗಳಲ್ಲ. ನಮ್ಮ ಆಚಾರ ವಿಚಾರಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಕೃಷ್ಣ ಮಠದ ರಾಜಾಂಗಣದಲ್ಲಿ ಶನಿವಾರ ನಡೆದ ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಶ್ರೀಪಾದರ 64ನೇ ಜನ್ಮ ನಕ್ಷತ್ರೋತ್ಸವ ಮತ್ತು ಶ್ರೀಮನ್ಮಧ್ವಾಚಾರ್ಯರ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಸಮಾರಂಭದಲ್ಲಿ ಅಂಚೆ ಚೀಟಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಧರ್ಮವು ಮನುಷ್ಯನಿಗೆ ಆತ್ಮವಿಶ್ವಾಸ ಹೆಚ್ಚಿಸುವ ದಾರಿ. ಧರ್ಮ ಯಾವುದಾದರೂ ತತ್ವ ಒಂದೇ. ಮನುಷ್ಯ ಯಶಸ್ಸು ಸಾಧಿಸಬೇಕಾದರೆ ಧರ್ಮರಾಯನ ಧರ್ಮ, ಕರ್ಣನ ದಾನಗುಣ, ಅರ್ಜುನನ ಗುರಿ, ಭೀಮನ ಬಲ ಜೊತೆಗೆ ಕೃಷ್ಣನ ತಂತ್ರವೂ ಇರಬೇಕು ಎಂದರು.

ADVERTISEMENT

ಕಾರ್ಯಕ್ರಮದಲ್ಲಿ ಕೆಲವರು ಬಂಡೆಯ ವಿಚಾರ ಮಾತನಾಡಿದರು. ಬಂಡೆ ಎಂದರೆ ಪ್ರಕೃತಿ, ಕಡೆದರೆ ಅದು ಆಕೃತಿ, ಬಂಡೆಯನ್ನು ಹೇಗೆ ಬೇಕಾದರೂ ನಿಮಗೆ ಬಳಸಿಕೊಳ್ಳಬಹುದು ಎಂದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜಕಾರಣದ ಸಂಘರ್ಷವನ್ನು ಮೀರಿ ಡಿ.ಕೆ. ಶಿವಕುಮಾರ್‌ ಅವರ ಬಗ್ಗೆ ನಮಗೆ ಪ್ರಿತಿ ಇದೆ. ರಾಜಕಾರಣದಲ್ಲಿ ನೇರ, ದಿಟ್ಟ, ಶಕ್ತಿಮೀರಿ ಕೆಲಸ ಮಾಡುವ ಶಕ್ತಿ ಅವರಿಗಿದೆ ಎಂದರು.

ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಸ್ವಾಮೀಜಿ, ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಅದಮಾರು ಮಠಾಧೀಶ ವಿಶ್ವಪ್ರಿಯತೀರ್ಥ ಸ್ವಾಮೀಜಿ, ಶಾಸಕರಾದ ಯಶ್‌ಪಾಲ್‌ ಸುವರ್ಣ, ಗುರ್ಮೆ ಸುರೇಶ್‌ ಶೆಟ್ಟಿ, ಕರ್ನಾಟಕ ವಲಯ ಪ್ರಧಾನ ಪೋಸ್ಟ್‌ಮಾಸ್ಟರ್‌ ಜನರಲ್‌ ಕೆ. ಪ್ರಕಾಶ್‌, ಆಫ್ರಿಕನ್‌ ವಿಶ್ವವಿದ್ಯಾಲಯದ ಕುಲಪತಿ ಕೆ. ರವಿ ಆಚಾರ್ಯ, ಮಾಹೆ ವಿ.ವಿ. ಸಹ ಕುಲಾಧಿಪತಿ ಡಾ. ಎಚ್‌.ಎಸ್‌, ಬಲ್ಲಾಳ್‌ ಉಪಸ್ಥಿತರಿದ್ದರು.

ಅದಕ್ಕೂ ಮೊದಲು ಡಿ.ಕೆ. ಶಿವಕುಮಾರ್‌ ಅವರು ಶ್ರೀಕೃಷ್ಣ ಮಠಕ್ಕೆ ತೆರಳಿ ದೇವರ ದರ್ಶನ ಪಡೆದು, ಪರ್ಯಾಯ ಪುತ್ತಿಗೆ ಶ್ರೀಗಳಿಂದ ಪ್ರಸಾದ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.