ADVERTISEMENT

ಧಾರಾಕಾರ ಮಳೆ; ಬೆಳೆ ಹಾನಿ ವರದಿಗೆ ಸೂಚನೆ: ಶೋಭಾ ಕರಂದ್ಲಾಜೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 12:09 IST
Last Updated 19 ನವೆಂಬರ್ 2021, 12:09 IST
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ    

ಉಡುಪಿ: ರಾಜ್ಯದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹೆಚ್ಚಿನ ಬೆಳೆ ಹಾನಿ ಸಂಭವಿಸಿದ್ದು, ಸಮೀಕ್ಷೆ ನಡೆಸಿ ಕೇಂದ್ರಕ್ಕೆ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಉಡುಪಿಯಲ್ಲಿ ಶುಕ್ರವಾರ ಜನಸ್ವರಾಜ್ ಸಮಾವೇಶದಲ್ಲಿ ಭಾಗವಹಿಸಿದ್ದ ಸಂದರ್ಭ ಮಾತನಾಡಿ, ದೇಶದಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಬೆಳೆ ಹಾನಿಯ ವಿವರ ನೀಡುವಂತೆ ಎಲ್ಲ ರಾಜ್ಯಗಳಿಗೆ ಸೂಚಿಸಲಾಗಿದೆ. ಭತ್ತ, ರಾಗಿ, ಜೋಳ ನಾಶವಾಗಿದ್ದು, ಕೃಷಿ ಮೂಲಸೌಕರ್ಯ ನಿಧಿಯಿಂದ ಡ್ರಯರ್ ಖರೀದಿಗೆ ರೈತರಿಗೆ ನೆರವು ನೀಡಲಾಗುವುದು ಎಂದರು.

‘ಕೃಷಿ ಕಾಯ್ದೆಗಳನ್ನು ಪಾಪಸ್ ಪಡೆದಿರುವ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಶೋಭಾ ಕರಂದ್ಲಾಜೆ, ಈ ಕುರಿತು ಪ್ರಧಾನಿ ಮಾತ್ರ ಪ್ರತಿಕ್ರಿಯೆ ನೀಡಲಿದ್ದಾರೆ’ ಎಂದರು.

ADVERTISEMENT

ಮರು ಮಂಡನೆಗೆ ಅವಕಾಶ ಇದೆ:

ಕೃಷಿ ಕಾಯ್ದೆಗಳನ್ನು ಮತ್ತೊಮ್ಮೆ ಅಧ್ಯಯನ ಮಾಡಿ, ಸಲಹೆ ಸೂಚನೆಗಳನ್ನು ಪಡೆದು, ಅಗತ್ಯ ಅಂಶಗಳನ್ನು ಕಾಯ್ದೆಯಲ್ಲಿ ಸೇರಿಸಿ ಮತ್ತೆ ಮರು ಮಂಡನೆ ಸಾಧ್ಯತೆ ಇದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮುಂಬರುವ ಚುನಾವಣೆಗಳಿಗೂ ಕೇಂದ್ರ ಸರ್ಕಾರದ ನಿರ್ಧಾರಕ್ಕೂ ಯಾವ ಸಂಬಂಧವಿಲ್ಲ. ರೈತರ ಬೆಳೆಗೆ ಉತ್ತಮ ಬೆಲೆ ಹಾಗೂ ಆರ್ಥಿಕ ಶಕ್ತಿ ನೀಡಲು ಕಾಯ್ದೆಗಳನ್ನು ಜಾರಿ ಮಾಡಲಾಗಿತ್ತು. ಪ್ರಜಾಪ್ರಭುತ್ವದಲ್ಲಿ ಮಣಿಯುವುದು, ಸೋಲುವುದು ಎಂಬುದಿಲ್ಲ. ಸಾರ್ವತ್ರಿಕ ಅಭಿಪ್ರಾಯಕ್ಕೆ ಗೌರವ ಕೊಡಬೇಕಾಗುತ್ತದೆ ಎಂದು ಕೋಟ ಹೇಳಿದರು.

ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರ ಚುನಾವಣೆ ದೃಷ್ಟಿಯಿಂದ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿಲ್ಲ. ರೈತಪರ ಕಾಯ್ದೆಗಳನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವಲ್ಲಿ ಹಾಗೂ ವಿಶ್ವಾಸ ಗಳಿಸುವಲ್ಲಿ ಕೊರತೆಯಾಗಿದೆ. ರೈತರ ಭಾವನೆಗಳನ್ನು ಅರ್ಥೈಸಿಕೊಂಡು ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.

ಕಾಂಗ್ರೆಸ್‌ ರೈತರ ದಿಕ್ಕು ತಪ್ಪಿಸಿದ್ದು, ದಲ್ಲಾಳಿಗಳ ಪರ ಯಾರಿದ್ದಾರೆ ಎಂಬುದು ಹೋರಾಟಗಳಲ್ಲಿ ಬಯಲಾಗಿದೆ. ಬಿಜೆಪಿ ಸರ್ಕಾರ ಮತ್ತಷ್ಟು ರೈತರ ಹತ್ತಿರಕ್ಕೆ ಹೋಗುವ ಪ್ರಯತ್ನ ಮಾಡಲಿದೆ ಎಂದರು.

ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮಾತನಾಡಿ, ‘ಕೃಷಿ ಕಾಯ್ದೆಗಳು ರೈತರ ಪರವಾಗಿದ್ದರೂ, ಕಾಯ್ದೆ ಕುರಿತು ರೈತರಿಗೆ ಮನವರಿಕೆ ಮಾಡುವ ಎಲ್ಲ ಪ್ರಯತ್ನಗಳನ್ನು ಮಾಡಿದರೂ, ರೈತರಿಂದ ಒತ್ತಡದಿಂದ ಕಾಯ್ದೆ ವಾಪಸ್ ಪಡೆಯಲಾಗಿದೆ. ರೈತರ ಆದಾಯ ದ್ವಿಗುಣ, ಮೂರು ಪಟ್ಟು ಸಬ್ಸಿಡಿ, ಉತ್ತಮ ಮಾರುಕಟ್ಟೆ ವ್ಯವಸ್ಥೆಯ ಅಂಶಗಳು ಕಾಯ್ದೆಯಲ್ಲಿದ್ದವು. ಸರ್ಕಾರ ರೈತರ ಪರ ಇದ್ದಿದ್ದರಿಂದಲೇ ದೊಡ್ಡತನ-ಸಣ್ಣತನ ತೋರದೆ ಕಾಯ್ದೆ ವಾಪಸ್ ಪಡೆದಿದೆ’ ಎಂದರು.

ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾತನಾಡಿ, ಕೇಂದ್ರ ಸರ್ಕಾರ ಸಾಕಷ್ಟು ವಿಮರ್ಶೆ ಮಾಡಿ ರೈತರ ಹಿತಕ್ಕಾಗಿ ಕಾಯ್ದೆ ವಾಪಸ್ ಪಡೆದಿದೆ. ಕೆಲವು ಬಾರಿ ಪರ ವಿರೋಧ ಸಹಜ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.